Kannada NewsLatest

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮಹಾ ಸರ್ಕಾರದ ಜತೆ ಶೀಘ್ರ ಸಭೆ: ರಮೇಶ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪ್ರತಿವರ್ಷ ಬೇಸಿಗೆಯಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮಹಾರಾಷ್ಟ್ರದ ಜತೆ ಕೃಷ್ಣಾ ನದಿ ನೀರು ವಿನಿಮಯ ಮಾಡಿಕೊಳ್ಳುವ ಕುರಿತು ಶೀಘ್ರದಲ್ಲೇ ಬೆಂಗಳೂರಿನಲ್ಲಿ ಉಭಯ ರಾಜ್ಯಗಳ ಪ್ರತಿನಿಧಿಗಳ ಉನ್ನತ ಮಟ್ಟದ ಸಭೆ ನಡೆಸಲಾಗುವುದು ಎಂದು ಜಲಸಂಪನ್ಮೂಲ ಇಲಾಖೆಯ ಸಚಿವರಾದ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಕರ್ನಾಟಕ ನೀರಾವರಿ ನಿಗಮದ ಉತ್ತರ ವಲಯದ ಮುಖ್ಯ ಎಂಜಿನಿಯರ್ ಅವರ ಕಚೇರಿಯಲ್ಲಿ ನಡೆದ ಗಟ್ಟಿ ಬಸವಣ್ಣ ಯೋಜನೆ ಕುರಿತ ಸಭೆ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಗೋಕಾಕ ನಗರ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸಲು ಗೋಕಾಕ ನಗರದ ಬಳಿ ಗಟ್ಟಿ ಬಸವಣ್ಣ ಜಲಾಶಯ ನಿರ್ಮಾಣ ಮಾಡಬೇಕು ಎಂಬುದು ನಮ್ಮ ಆಶಯವಾಗಿದೆ. ಆದಷ್ಟು ಬೇಗನೇ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಅನುದಾನ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾದಿಂದ ಎಲ್ಲ ರೀತಿಯ ಅನುಮತಿ ಮತ್ತು ನೆರವು ನೀಡಲಾಗುವುದು ಎಂದು ಹೇಳಿದರು.

ಇನ್ನು ಮಹಾರಾಷ್ಟ್ರ ಜತೆ ನೀರು ವಿನಿಮಯ ಕುರಿತು ಶೀಘ್ರದಲ್ಲಿಯೇ ಆ ರಾಜ್ಯದ ನೀರಾವರಿ ಸಚಿವರ ಜತೆ ಚರ್ಚೆ ನಡೆಸಲಾಗುವುದು. ಆದರೆ ಸಭೆಯ ದಿನಾಂಕ ಇನ್ನೂ ನಿಗದಿ ಆಗಿಲ್ಲ ಎಂದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರೈತರ ಹಿತರಕ್ಷಣೆ ಮತ್ತು ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಅವರ ಆಶಯದ ಪ್ರಕಾರವೇ ಕೆಲಸ ಮಾಡಲಾಗುತ್ತಿದೆ. ರಾಜ್ಯದ ಎಲ್ಲ ಜಲಾಶಯಗಳಿಗೆ ಭೇಟಿ ನೀಡಿ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುತ್ತಿದ್ದು, ಮುಂಸಿನ ವಾರ ಮೈಸೂರು ಭಾಗದಲ್ಲಿ ಭೇಟಿ ನೀಡಲಿದ್ದೇನೆ.
ಬೆಳಗಾವಿ ಜಿಲ್ಲೆಯ ಎಲ್ಲ 18 ವಿಧಾನಸಭಾ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಚುರುಕುಗೊಳಿಸಲಾಗುತ್ತದೆ ಎಂದು ತಿಳಿಸಿದರು.

ರಸ್ತೆ ಮೂಲಕ ದೆಹಲಿಗೆ ಪ್ರಯಾಣ-ಚಿಂತನೆ:

ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಜಲ ಆಯೋಗದ ಜತೆ ಚರ್ಚಿಸಿ, ಮನವರಿಕೆ ಮಾಡಬೇಕಿದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ವಿಮಾನ ಸಂಚಾರ ಸ್ಥಗಿತಗೊಳಿಸಿರುವುದರಿಂದ ರಸ್ತೆ ಮಾರ್ಗದ ಮೂಲಕವೇ ದೆಹಲಿಗೆ ತೆರಳುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.

ಇದೇ ವೇಳೆ ವೈದ್ಯರ ಸಲಹೆ ಮತ್ತು ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿದರೆ ಕೊರೊನಾ ತಡೆಗಟ್ಟುವುದು ದೊಡ್ಡ ಸವಾಲು ಅಲ್ಲ. ಆದ್ದರಿಂದ ಎಲ್ಲರೂ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡಿಕೊಂಡರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button