ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಜನವರಿ 26 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಗಣರಾಜ್ಯೋತ್ಸವವನ್ನು ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ(ಜ.13) ನಡೆದ ಗಣರಾಜ್ಯೋತ್ಸವ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದು ರಾಷ್ಟ್ರೀಯ ಹಬ್ಬವಾಗಿರುವುದರಿಂದ ಎಲ್ಲ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಹಾಜರಿರಬೇಕು. ಪರೇಡ್ ಗೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಹಾಗೂ ಪೂರ್ವಾಭ್ಯಾಸ ನಡೆಸಬೇಕು. ಈ ಬಾರಿ ಶಾಲಾ ಮಕ್ಕಳಿಂದ ಯಾವುದೇ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪರೇಡ್ ಕೂಡ ನಡೆಯುವುದಿಲ್ಲ ಎಂದರು.
ಸಮಾರಂಭದ ವೇದಿಕೆಯ ಸಿದ್ಧತೆ, ಆಸನ, ಧ್ವನಿವರ್ಧಕ, ಕುಡಿಯುವ ನೀರು ಮತ್ತಿತರ ಮೂಲಸೌಕರ್ಯವನ್ನು ಒದಗಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ವ್ಯವಸ್ಥೆ ಮಾಡಿಕೊಳ್ಳಬೇಕು. ಉಪ ಸಮಿತಿಗಳು ಸಭೆ ನಡೆಸಿ ಎಲ್ಲ ಪೂರ್ವಸಿದ್ಧತೆಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ಸೂಚನೆ ನೀಡಿದರು.
ಎಲ್ಲ ದೇವಾಲಯ, ಮಸೀದಿ, ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದರು. ನಗರದ ಪ್ರಮುಖ ವೃತ್ತಗಳನ್ನು ಸ್ವಚ್ಛಗೊಳಿಸಿ ದೀಪಾಲಂಕಾರ ಮಾಡಬೇಕು ಎಂದು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ತಿಳಿಸಿದರು.
ಸರ್ಕಾರಿ ಕಚೇರಿಗಳಿಗೂ ಕೂಡ ದೀಪಾಲಂಕಾರ ಮಾಡಬೇಕು. ಅದೇ ರೀತಿ ಸಾರ್ವಜನಿಕರು ಕೂಡ ತಮ್ಮ ಮನೆ, ಅಂಗಡಿ-ಮುಂಗಟ್ಟುಗಳನ್ನು ಕೂಡ ಅಲಂಕಾರ ಮಾಡಬೇಕು ಎಂದು ತಿಳಿಸಿದರು.
ಗಣರಾಜ್ಯೋತ್ಸವ ಸಂದರ್ಭದಲ್ಲಿ ಸಿಹಿ ಹಂಚಲು ಆಸಕ್ತರಾಗಿರುವ ಸಂಘ-ಸಂಸ್ಥೆಗಳು ಜಿಲ್ಲಾಡಳಿತದಿಂದ ಪೂರ್ವಾನುಮತಿ ಪಡೆದುಕೊಂಡು ಸಿಹಿ ವಿತರಿಸಬಹುದು.
ಧ್ವಜಸಂಹಿತೆ ಪಾಲನೆಗೆ ಸೂಚನೆ:
ಜಿಲ್ಲೆಯ ಎಲ್ಲ ಕಡೆಗಳಲ್ಲೂ ಧ್ವಜಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ರಾಷ್ಟ್ರಧ್ವಜಕ್ಕೆ ಯಾವುದೇ ಕಾರಣಕ್ಕೂ ಅವಮಾನ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ಸೂಚನೆ ನೀಡಿದರು.
ಸರ್ಕಾರಿ ಕಚೇರಿಗಳಲ್ಲಿ ಧ್ವಜ ಕಟ್ಟುವುದಕ್ಕೆ ಸಂಬಂಧಿಸಿದಂತೆ ಭಾರತ ಸೇವಾದಳ ವತಿಯಿಂದ ತರಬೇತಿ ನೀಡಲಾಗುವುದು. ಆದ್ದರಿಂದ ತರಬೇತಿ ಅಗತ್ಯವಿರುವವರು ಭಾರತ ಸೇವಾದಳವನ್ನು ಸಂಪರ್ಕಿಸಿ ತರಬೇತಿ ಪಡೆದುಕೊಳ್ಳಬೇಕು ಎಂದರು.
7.15 ರಿಂದ 8.15 ರೊಳಗೆ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳಲ್ಲಿ ಧ್ವಜಾರೋಹಣ ನೆರವೇರಿಸಿ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಬೇಕು.
ಕೋವಿಡ್-19 ಹಿನ್ನೆಲೆಯಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್ ಒಳಗೊಂಡ ಆರೋಗ್ಯ ಇಲಾಖೆಯ ತಂಡಗಳನ್ನು ನಿಯೋಜಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಾರ್ವಜನಿಕರು ಕೂಡ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿಕೊಂಡರು.
ಚಿಕ್ಕೋಡಿ ಉಪ ವಿಭಾಗಾಧಿಕಾರಿ ಯುಕೇಶ್ ಕುಮಾರ್, ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ.ಎಚ್. ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ