1964ರಲ್ಲಿ ವಿಶ್ವ ಹಿಂದು ಪರಿಷತ್ ಸ್ಥಾಪನೆಯಾದ ಬಳಿಕ ರಾಮಜನ್ಮಭೂಮಿ ಹೋರಾಟಕ್ಕೆ ಒಂದು ರಚನಾತ್ಮಕ ಮತ್ತು ಸಂಘಟನಾತ್ಮಕ ಬೆಂಬಲ ದೊರೆಯಿತು ಎಂದರೆ ತಪ್ಪಾಗದು. ಅಯೋಧ್ಯೆ ಮತ್ತು ಉತ್ತರ ಪ್ರದೇಶಕ್ಕೆ ಸೀಮಿತವಾದ ಆ ಹೋರಾಟವನ್ನು ಭಾರತಾದ್ಯಂತ ಪಸರಿಸುವಂತೆ ಮಾಡುವಲ್ಲಿ ವಿಶ್ವ ಹಿಂದು ಪರಿಷತ್ ಪಾತ್ರ ಅನನ್ಯವಾಗಿದೆ.
ವಿಶ್ವ ಹಿಂದು ಪರಿಷತ್ ಆಯೋಜಿಸಿದ ಬಹುತೇಕ ಎಲ್ಲ ಹೋರಾಟಗಳು ಬೆಳಗಾವಿಯ ಹಿಂದು ಸಮಾಜ ಅದ್ಘುತವಾಗಿ ಸ್ಪಂದಿಸಿ, ಆ ಹೋರಾಟವನ್ನು ಯಶಸ್ವಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. 1989ರ ಲಾಲಕೃಷ್ಣ ಅಡ್ವಾಣಿ ಅವರ ಸೋಮನಾಥದಿಂದ ಅಯೋಧ್ಯೆವರೆಗಿನ ರಥಯಾತ್ರೆ ಮತ್ತು ಶಿಲಾಪೂಜನ ಕಾರ್ಯಕ್ರಮಕ್ಕೆ ಬೆಳಗಾವಿಯಲ್ಲಿ ಅಭೂತ ಪೂರ್ವ ಬೆಂಬಲ ದೊರೆಯಿತು. ಅಡ್ವಾಣಿ ಅವರ ರಥ ರಾಜ್ಯದ ಬೀದರ ಹುಮ್ನಾಬಾದ್ ಗೆ ಮಾತ್ರ ಬರುವುದಿತ್ತು. ಆದರೆ ಪ್ರತಿ ಗ್ರಾಮ, ಹೋಬಳಿ, ಪಟ್ಟಣ ಮತ್ತು ನಗರಗಳಿಂದ ಇಟ್ಟಿಗೆ ಪೂಜನ ಕಾರ್ಯಕ್ರಮ ಜರುಗಿತು.
ಈ ನಿಮಿತ್ತ ಉಡುಪಿಯಿಂದ ಹೊರಟ ರಥವು ಬೆಳಗಾವಿ ಜಿಲ್ಲೆಯಲ್ಲಿ ಸಂಚರಿಸಿತ್ತು. ಅಷ್ಟೇ ಅಲ್ಲದೆ ಆಗ ಬೆಳಗಾವಿ ಬಹುತೇಕ ಎಲ್ಲ ಗಲ್ಲಿ ಗಲ್ಲಿಗಳಲ್ಲಿ ಅಯ್ಯೋಧೆಗೆ ಕಳುಹಿಸುವ ಶಿಲೆಗಳನ್ನು ಪೂಜೆ ಮಾಡಿ, ಪಲ್ಲಕ್ಕಿಗಳ ಮೇಲೆ ಮೆರವಣಿಗೆ ಮಾಡಲಾಗುತ್ತಿತ್ತು. ಪಲ್ಲಕ್ಕಿಯನ್ನು ಹೊತ್ತಿಕೊಳ್ಳಲು ಎಲ್ಲರೂ ತಾ ಮುಂದು ನಾ ಮುಂದು ಎಂದು ಧಾವಿಸುತ್ತಿದ್ದರು. ಪಲ್ಲಕ್ಕಿ ಹೊತ್ತವರನ್ನೆ ಜನರು ಶ್ರೀರಾಮ ಎಂದು ಪಾದ ಸ್ಪರ್ಶಿಸಿ ನಮಸ್ಕರಿಸುತ್ತಿರುತ್ತಿದ್ದರು. ಆಗ ಕೂಡಾ ಅಯೋಧ್ಯೆಯಲ್ಲಿ ಕರಸೇವೆ ಹಮ್ಮಿಕೊಳ್ಳಲಾಗಿತ್ತು. ಆ ನಿಮಿತ್ತ ಬೆಳಗಾವಿ ಜಿಲ್ಲೆಯಿಂದ ವಿಎಚ್‍ಪಿ ಮತ್ತು ಬಜರಂಗದಳದ ನೂರಾರು ಕಾರ್ಯಕರ್ತರು ಅಯೋಧ್ಯೆಗೆ ತೆರಳಿದ್ದರು. ಆದರೆ ಮುಲಾಯಂ ಸಿಂಗ್ ಅವರ ಸರ್ಕಾರ ಅಯೋಧ್ಯೆಗೆ ಹೋಗಲು ಯಾರನ್ನ ಬಿಡದೆ, ಮಧ್ಯಪ್ರದೇಶದ ಗಡಿಯಲ್ಲಿ ಎಲ್ಲರನ್ನೂ ಬಂಧಿಸಿತ್ತು.
1992 ರಲ್ಲಿ ಅಯೋಧ್ಯೆಯ ರಾಮಜನ್ಮಭೂಮಿ ಕರಸೇವೆಗೆ ಬೆಳಗಾವಿ ನಗರದಿಂದ ವಿಶ್ವ ಹಿಂದು ಪರಿಷತ್ ನಿಂದ 16 ಜನರು ಎರಡು ತಂಡವಾಗಿ ತೆರಳಿದ್ದರು. ಕೃಷ್ಣ ಭಟ್, ಅಚ್ಯುತ್ ಕುಲಕರ್ಣಿ, ನಾಗಯ್ಯ ಕಾಡದೇವರಮಠ, ಸಂಜಯ ಸವ್ವಾಶೇರಿ, ಪಾಂಡು ನಿರ್ಖಾಗೆ, ಸುರೇಶ ರಣಸುಭೆ, ಮೋತಿಲಾಲ ಧೋಂಗಡಿ, ಪ್ರಮೋದ ಕಡೋಲಕರ್, ಬಾಳು ಭಾತಖಂಡೆ, ಮುಕುಂದ ಸೋನವಾಲಕರ್, ಸಂಪತ್ ಹೇರೆಕರ್, ಉದಯ ಜೋಶಿ, ದತ್ತಾ ಭಟ್, ಸುರೇಶಕುಮಾರ, ಜ್ಞಾನದೇವ ಠಕ್ಕೇಕರ್ ಮತ್ತು ಲಕ್ಷ್ಮಿಕಾಂತ ಹೆಗಡೆ ಭಾಗವಹಿಸಿದ್ದರು. ಆಗ ರಾಮದುರ್ಗದ ಮಲ್ಲಿಕಾರ್ಜುನ ಭಾವಿಕಟ್ಟಿ ಅವರೇ ಕರ್ನಾಟಕದ ಬಜರಂಗದಳದ ಪ್ರಾಂತ ಸಂಚಾಲಕರಾಗಿದ್ದರು. ಅವರು ಕರ್ನಾಟಕದೆಲ್ಲಡೆ ಪ್ರವಾಸ ಕೈಗೊಂಡು ಕರಸೇವೆಯ ಜಾಗೃತಿ ಮೂಡಿಸಿದ್ದರು. ಅಷ್ಟೇ ಅಲ್ಲದೆ ಬಿಜೆಪಿಯ ನೂರಾರು ಕಾರ್ಯಕರ್ತರು ಆಗ ಅಯೋಧ್ಯೆಗೆ ತೆರಳಿಸಿದ್ದರು.
2003ರಲ್ಲಿ ಮತ್ತೊಮ್ಮೆ ಕರಸೇವೆ ಏರ್ಪಡಿಸಿದಾಗ, 1500ಕ್ಕೂ ಹೆಚ್ಚು ವಿಎಚ್‍ಪಿ ಮತ್ತು ಬಜರಂಗದಳದ ಕಾರ್ಯಕರ್ತರು ಭಾಗವಹಿಸಿದ್ದರು. ಇಷ್ಟೇ ಅಲ್ಲದೆ ಪಿ.ವಿ.ನರಸಿಂಹರಾವ್ ನೇತೃತ್ವದ ಕೇಂದ್ರ ಸರ್ಕಾರ ರಚಿಸಿದ್ದ ರಾಮ ವನಾಗಮನ ಆಯೋಗದ ಸದಸ್ಯರಾಗಿ ರಾಮದುರ್ಗದ ಸಂಘದ ಸ್ವಯಂಸೇವಕರಾದ ಮಲ್ಲಿಕಾರ್ಜುನ ಭಾವಿಕಟ್ಟಿ ಮತ್ತು ದತ್ತಾ ನಾಯಕ ನೇಮಕವಾಗಿದ್ದರು. ಶ್ರೀರಾಮ ವನವಾಸದ ಸಂದರ್ಭದಲ್ಲಿ ಸಂಚರಿಸಿದ ಬೆಳಗಾವಿ ಜಿಲ್ಲೆಯ ರಾಮದುರ್ಗದ ಸ್ಥಳಗಳಿಗೆ ಭೇಟಿ ನೀಡಿ ಅವುಗಳನ್ನು ಗುರುತಿಸಿದ್ದರು.
1992ರಲ್ಲಿ ಡಿಸೆಂಬರ್ 6ರಂದು ಜರುಗುವ ಕರಸೇವೆ ಸೇವೆ ನಿಮಿತ್ತ ರಾಮದುರ್ಗದ ವಿಎಚ್‍ಪಿ ಕಾರ್ಯಕರ್ತರು ಬ್ಯಾನರ್ ತೆಗೆದುಕೊಂಡು ಹೋಗಿದ್ದರು. ಅಯ್ಯೋಧೆಯಲ್ಲಿ ಜರುಗಿದ ಶೋಭಾಯಾತ್ರೆಯಲ್ಲಿ ಆ ಬ್ಯಾನರನ್ನೆ ಹಿಂದುಗಡೆ ಸಮಸ್ತ ಕರ್ನಾಟಕದ ಹೋಗಿದ್ದ ಎಲ್ಲ ಕರಸೇವಕರು ಸಾಲಾಗಿ ನಿಂತು, ಕರಸೇವೆ ಅರ್ಪಿಸಿದ್ದರು. ಅಷ್ಟೆ ಅಲ್ಲದೆ, ಕರ್ನಾಟಕದ ಕರಸೇವಕರು ಬೃಹತ್ ಭಗವಾ ಧ್ವಜವನ್ನು ತೆಗೆದುಕೊಂಡು ಹೋಗಿದ್ದರು. ಕರಸೇವೆ ಜರುಗುತ್ತಿದ್ದ ಸಂದರ್ಭದಲ್ಲಿ ವಿಎಚ್‍ಪಿ ಕೇಂದ್ರದ ಆಯೋಜಕರಿಗೆ ಅದು ತಿಳಿದು, ಶೋಭಾಯಾತ್ರೆಯ ಮುಂಭಾಗದಲ್ಲಿ ತರುವಂತೆ ಸೂಚನೆ ನೀಡಿದ್ದರು. ಶ್ರೀರಾಮನ ಚರಿತ್ರೆಯಲ್ಲಿ ಕರ್ನಾಟಕದ ಅತಿ ಮಹತ್ವ ನಾವು ಕಾಣಬಹುದು. ಸೀತಾನ್ವೇಷಣೆಯ ಸಂದರ್ಭದಲ್ಲಿ ಶಬರಿ ಮಾತೆಯೆ ಶ್ರೀರಾಮನಿಗೆ ಸುಗ್ರೀವ್ ಮತ್ತು ಹನುಮಂತನ ವಾಸವಿರುವ ಸ್ಥಾನದ ಬಗ್ಗೆ ತಿಳಿಸಿರುತ್ತಾಳೆ. ಅದೇ ರೀತಿ ಹನುಮಂತ ಮತ್ತು ಸುಗ್ರೀವ್ ವಾನರ ಸೇನೆಯ ಸಹಾಯದಿಂದ ರಾವಣನ ಸಂಹಾರ ಶ್ರೀರಾಮ ಮಾಡುತ್ತಾನೆ. ಅದೇ ರೀತಿ, ರಾಮಜನ್ಮಭೂಮಿ ಹೋರಾಟ ಮತ್ತು ಮಂದಿರ ನಿರ್ಮಾಣದಲ್ಲಿ ಕೂಡಾ ಬೆಳಗಾವಿಯ ಮತ್ತು ಕರ್ನಾಟಕದ ಅತಿ ಮಹತ್ವ ಪಾತ್ರವಿದೆ.
ನೂರಾರು ಪ್ರಚಾರಕರು, ಸಾವಿರಾರು ಸ್ವಯಂಸೇವಕರು, ಕಾರ್ಯಕರ್ತರು ಮತ್ತು ಬಜರಂಗಿಗಳ 5 ದಶಕಗಳ ಸತತ ಹೋರಾಟದ ಫಲವಾಗಿ ಇಂದು ರಾಮಜನ್ಮಭೂಮಿ ಹೋರಾಟಕ್ಕೆ ಗೆಲುವು ಲಭಿಸಿದ್ದು ಅಷ್ಟೇ ಅಲ್ಲದೆ ಶ್ರೀರಾಮನ ಭವ್ಯ ಮಂದಿರದ ಕನಸು ಸಾಕಾರಗೊಳ್ಳುತ್ತಿದೆ.
(ಫೋಟೊ ಸಂಗ್ರಹ: ದತ್ತಾ ನಾಯಕ, ರಾಮದುರ್ಗ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ