Kannada NewsLatest

ವಿಶ್ವದಲ್ಲೇ ಮೊದಲ ಬಾರಿಗೆ ಸಮಾಜವಾದದ ಮೂಲ ಕಲ್ಪನೆ ನೀಡಿದವರು ಬಸವಣ್ಣನವರು; ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಜಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ:  ಒಂಬೈನೂರು ವರ್ಷಗಳಿಗಿಂತ ಮೊದಲೇ ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ ಸಮಾಜವಾದದ ಮೂಲ ಕಲ್ಪನೆಯನ್ನು ನಮ್ಮ ನೆಲದ ಬಸವಾದಿ ಶರಣರು ಕೊಟ್ಟಿದ್ದಾರೆ. ಮಹಾ ಮಾನವತಾವಾದಿ ಬಸವಣ್ಣನವರ ನೇತೃತ್ವದಲ್ಲಿ ಸಮಾಜದ ನಿರ್ಲಕ್ಷಕ್ಕೊಳಗಾದ ಎಲ್ಲ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಮುಖೇನ ಸಮ ಸಮಾಜ ನಿರ್ಮಿಸಿದರು” ಎಂದು ಹಾವೇರಿ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಗಳು ನುಡಿದರು.

ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ರಾಷ್ಟ್ರೀಯ ಬಸವ ಸೇನೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿಯ ಶಿವಬಸವ ನಗರದ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಆವರಣದಲ್ಲಿ ಜರುಗಿದ ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ ನಿಮಿತ್ಯ ಜರುಗಿದ ಬಸವ ದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ” ಜಾತಿ ವ್ಯವಸ್ಥೆ, ಮೂಢನಂಬಿಕೆ, ಅಂಧ: ಶ್ರದ್ಧೆ, ವರ್ಣಾಶ್ರಮ ವ್ಯವಸ್ಥೆಯ ವಿರುದ್ಧ ಚಳುವಳಿ ಹುಟ್ಟು ಹಾಕಿ ಮೇಲು-ಕೀಳು, ಬಡವ-ಬಲ್ಲಿದ, ಲಿಂಗ ತಾರತಮ್ಯವಿಲ್ಲದ ಸಮಾನತೆಯ ಧರ್ಮ ಸ್ಥಾಪಿಸಿದ ಕೀರ್ತಿ ವಿಶ್ವಗುರು ಬಸವಣ್ಣನವರದ್ದು. ಅಂಥ ಮಹಾತ್ಮಾ ಬಸವಣ್ಣನವರ ದರ್ಶನ ಪ್ರವಚನ ಆಯೋಜಿಸಿದ್ದು ಅರ್ಥಪೂರ್ಣ. ಒಂಭತ್ತು ನೂರು ವರ್ಷಗಳ ಹಿಂದೆಯೇ ಸ್ಥಾಪಿತವಾದ ಲಿಂಗಾಯತ ಧರ್ಮ ಅನೇಕ ಕಾರಣಗಳಿಂದ ಜನ ಸಾಮಾನ್ಯರಿಂದ ದೂರವಾಗಿತ್ತು. ಫ. ಗು. ಹಳಕಟ್ಟಿಯವರು ವಚನ ಸಂಪುಟ ರೂಪಿಸಿ ಕೊಟ್ಟ ನಂತರ ಬಸವಾದಿ ಶರಣರ ವಚನ ಸಿದ್ಧಾಂತಗಳು ಮನೆ ಮನ ತಲುಪುತ್ತಿವೆ. ಬಸವ ಧರ್ಮದ ವಿವಿಧ ಮಠಾಧೀಶ್ವರರು ಮನೆ ಮನೆಗೆ ಬರಲು ಸಿದ್ಧರಿದ್ದೇವೆ. ಹೀಗಾಗಿ ಲಿಂಗಾಯತ ಧರ್ಮದ ಶರಣರೆಲ್ಲ ಜಾಗೃತಿಯ ಜ್ಯೋತಿ ಹೊತ್ತು ಸಾಗಬೇಕು” ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ, ” ಮತಾಂಧತೆಯಿಂದ ಸೌಹಾರ್ದತೆ ಹಾಳಾಗುತ್ತಿರುವ ಇಂದಿನ ಸಂದರ್ಭದಲ್ಲಿ ಬಸವಣ್ಣನವರ ಕಲ್ಯಾಣ ರಾಜ್ಯದತ್ತ ಮತ್ತೆ ನಾವು ಸಾಗಬೇಕಿದೆ. ಆ ನಿಟ್ಟಿನಲ್ಲಿ ಶರಣರ ತತ್ವಗಳತ್ತ ಹೆಚ್ಚಿನ ಜನರು ಬರುವಂತಾಗಿ ಮತ್ತೆ ಕಲ್ಯಾಣ ರಾಜ್ಯ ನಿರ್ಮಾಣವಾಗಲಿ. ತನ್ಮೂಲಕ ಜಗದ ತುಂಬ ಶಾಂತಿ ನೆಲೆಸಲಿ” ಎಂದು ಹೇಳಿದರು.

ಮುಮ್ಮಿಗಟ್ಟಿಯ ಡಾ. ಬಸವಾನಂದ ಮಹಾಸ್ವಾಮಿಗಳು ‘ಬಸವ ದರ್ಶನ ಪ್ರವಚನ’ ಪ್ರಾರಂಭಿಸಿದರು. ಕಾರ್ಯಕ್ರಮದಲ್ಲಿ ಕವಲಗಿಯ ಷಣ್ಮುಖ ಶಿವಯೋಗಿ ಮಠದ ವೀರಸಿದ್ಧ ದೇವರು, ಶಾಸಕರಾದ ಅನಿಲ ಬೆನಕೆ, ಜಾಗತಿಕ ಲಿಂಗಾಯತ ಮಹಾಸಭಾದ ಬೆಳಗಾವಿ ಜಿಲ್ಲಾಧ್ಯಕ್ಷರಾದ ಬಸವರಾಜ ರೊಟ್ಟಿ, ಬಸವರಾಜ ಸುಲ್ತಾನಪುರಿ, ವಿಜಯ ಧಾಮನೇಕರ, ಎ. ವೈ. ಬೆಂಡಿಗೇರಿ, ಎಸ್. ಜಿ. ಸಿದ್ನಾಳ, ರಾಜು ಪದ್ಮಣ್ಣವರ, ಶಿವಾನಂದ ವಾಘರವಾಡಿ, ಸತೀಶ ಚೌಗಲಾ ಮುಂತಾದವರು ಉಪಸ್ಥಿತರಿದ್ದರು.

ಸಿ. ಎಂ. ಬೂದಿಹಾಳ ಕಾರ್ಯಕ್ರಮ ನಿರ್ವಹಿಸಿದರು. ರಾಷ್ಟೀಯ ಬಸವ ಸೇನೆಯ ಅಧ್ಯಕ್ಷ ರಾದ ಶಂಕರ ಗುಡಸ ವಂದಿಸಿದರು.
ಖಿಳೇಗಾವ ಗ್ರಾಮದಲ್ಲಿ ಮಂಗಲ ಕಾರ್ಯಲಯ ಭೂಮಿಪೂಜೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button