ಅಧಿವೇಶನದ ನಡುವೆ ರಂಗೇರಿದ ಪಂಚಾಯತ್ ಚುನಾವಣಾ ಅಖಾಡ; ಕಾಂಗ್ರೆಸ್ ಅಭ್ಯರ್ಥಿಗಳ ಪರ ಸತೀಶ್ ಜಾರಕಿಹೊಳಿ ಅಬ್ಬರದ ಪ್ರಚಾರ
ಪ್ರಗತಿವಾಹಿನಿ ಸುದ್ದಿ; ಚನ್ನಮ್ಮನ ಕಿತ್ತೂರು : ರಾಜ್ಯದಲ್ಲಿ ಎಲ್ಲ ಸಮಾಜ, ಸಾರ್ವಜನಿಕರ ಪರ ಚಿಂತನೆ ಮಾಡುವಂತ ಸರ್ಕಾರದ ಅವಶ್ಯಕತೆ ಇದೆ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ಅಧಿವೇಶನದ ನಡುವೆಯೂ ಪಟ್ಟಣ ಪಂಚಾಯ್ತಿ ಚುನಾವಣೆ ಕಾವು ಹೆಚ್ಚಾಗಿದ್ದು, ಬುಧವಾರ ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿ ಅವರು ಮಾತನಾಡಿ, ಇದೇ 27ರಂದು ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯ್ತಿ ಚುನಾವಣೆಯ ಮತದಾನ ನಡೆಯಲಿದ್ದು, ಕಾಂಗ್ರೆಸ್ ಪಕ್ಷದಿಂದ 18 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಅವರೆಲ್ಲರ ಪರ ಇಂದು ಪರ ಪ್ರಚಾರ ನಡೆಸಲಾಗುತ್ತಿದೆ ಎಂದರು.
ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆಯಬೇಕು. ಈ ನಿಟ್ಟಿನಲ್ಲಿ ಕೈ ಪಡೆ ಕಾರ್ಯಕರ್ತರು ಕೆಲಸ ಮಾಡಬೇಕು. ಈ ಚುನಾವಣೆಯೂ ಮುಂಬರುವ 2023ರ ಚುನಾವಣೆಯ ಗೆಲುವಿಗೆ ಮೆಟ್ಟಿಲಾಗಬೇಕು ಎಂದು ಕರೆ ನೀಡಿದರು.
ಪ್ರತಿಯೊಂದು ಸಮಾಜವನ್ನು ಒಂದೇ ಎಂದು ಕಾಣುವ ಪಕ್ಷ ಅಂದ್ರೆ ಅದು ಕಾಂಗ್ರೆಸ್ ಮಾತ್ರ. ಇದಕ್ಕೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ ಯೋಜನೆಗಳೇ ಸಾಕ್ಷಿ. ಆದರೆ ಈಗಿರುವ ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಿಂದ ಅನುದಾನ ಕೊರತೆ ಸಮಸ್ಯೆ ಹೇಳಿಕೊಂಡು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಕಾಲಹರಣ ಮಾಡುತ್ತಿದೆ ಎಂದು ಮಾತಿನಲ್ಲಿಯೇ ತಿವಿದರು.
ಎಲ್ಲ ಸಮಾಜದ, ಬಡಜನರ, ಸಾರ್ವಜನಿಕರ ಪರ ಚಿಂತನೆ ಮಾಡುವುದನ್ನು ಸರ್ಕಾರ ಅಂತಾ ಕರೆಯಲಾಗುತ್ತೇ. ಈಗ ರಾಜ್ಯದಲ್ಲಿ ಅಂತಹ ಸರ್ಕಾರದ ಅವಶ್ಯಕತೆ ಇದೆ. ಬಡವರ ಪರ ಸರ್ಕಾರ ಬರಬೇಕಾದ್ರೆ ಕಾಂಗ್ರೆಸ್ ಗೆಲ್ಲಿಸಿ ಎಂದು ಮನವಿ ಮಾಡಿದರು.
ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ನಿಯೋಜನ ಅಧಿವೇಶನದಲ್ಲಿ ನಡೆಯುವ ಪ್ರತಿಭಟನಾಕಾರರನ್ನು ಭೇಟಿ ಮಾಡಿ, ಸಮಸ್ಯೆಗಳನ್ನು ಆಲಿಸುತ್ತಿದೆ. ಜನರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತಿದೆ. ಈ ಕಾರ್ಯವೇ ಕಾಂಗ್ರೆಸ್ ಪಕ್ಷ ಜನರ ಪರ ಎಂಬುವುದು ಸಾಕ್ಷಿ ಎಂದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಯಾಸ್ಮೀನ್ ದಾಸ್ತಿಕೋಪ, ಸಾಹೀನ್ ತುಗದೋಳ್ಳಿ ಸೇರಿದಂತೆ ವಿವಿಧ ವಾರ್ಡ್ ಗಳಲ್ಲಿ ಕಾಂಗ್ರೆಸ್ ದಿಂದ ಸ್ಪರ್ಧೆ ಮಾಡಿರುವ ಇನ್ನುಳಿದ ಅಭ್ಯರ್ಥಿಗಳ ಪರ ವಾರ್ಡ್ ವಾರ್ಡ್ ಗಳಿಗೆ ತೆರಳಿ ಬಹಿರಂಗ ಪ್ರಚಾರ ನಡೆಸಿದರು.
ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಮುಖಂಡರಾದ ಹಬೀಬ್ ಶಿಲ್ಲೆದಾರ್, ಬಾಬಾಸಾಹೇಬ ಪಾಟೀಲ, ಮನ್ನಸೂರ ಸೈಯದ್, ಬಂಗಾರೀಶ್ ಹಿರೇಮಠ, ಸಂಗನಗೌಡ ಪಾಟೀಲ, ಫಜಲ್ ಮಕಾಂದಾರ್ ಸೇರಿದಂತೆ ಮುಖಂಡರು, ನೂರಾರು ಕಾರ್ಯಕರ್ತರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
ಭವಿಷ್ಯದಲ್ಲಿ ಮಹಿಳೆಯರ ಆರೋಗ್ಯ: ಡಿಜಿಟಲೀಕರಣಕ್ಕೆ ARTIST ಹೆಜ್ಜೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ