Kannada NewsLatest

ಶಂಕರಾಚಾರ್ಯರ ತತ್ವಗಳು ಸಾಧನೆಗೆ ಪೂರಕ: ಶಾಸಕ ಅನೀಲ ಬೆನಕೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಯಾವುದೇ ಯಶಸ್ಸು ಕೈಗೂಡಬೇಕಾದರೆ ಶ್ರಮದ ಜೊತೆಗೆ ದೇವರ ಆಶೀರ್ವಾದವೂ ಇರಬೇಕಾಗುತ್ತದೆ. ಅಂತಹ ದೇವರ ಸಾನಿಧ್ಯವನ್ನು ಕರುಣಿಸುವಲ್ಲಿ ಶಂಕರಾಚಾರ್ಯರ ಚಿಂತನೆ, ತತ್ವಗಳು ಪೂರಕವಾಗಿವೆ ಎಂದು ಬೆಳಗಾವಿ ಉತ್ತರ ಶಾಸಕ ಅನೀಲ ಬೆನಕೆ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ನಗರದ ಬಸವರಾಜ ಕಟ್ಟೀಮನಿ ಸಭಾ ಭವನದಲ್ಲಿ ಶುಕ್ರವಾರ (ಮೇ.06) ನಡೆದ ಶ್ರೀ ಶಂಕರಾಚಾರ್ಯರ ಜಯಂತ್ಯೋತ್ಸವ-2022 ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಪೂರ್ತಿ ಸುತ್ತಿದ ಸಂತ ಶಂಕರಾಚಾರ್ಯರು ಹಿಂದೂ ಧರ್ಮದ ಕುರಿತಾಗಿ ಜಾಗೃತಿ ಮೂಡಿಸುವ ಜೊತೆಗೆ ಶಾಂತಿ, ಸಹನೆ, ಸಂಘಟನೆ, ಮಾನವತ್ವದ ತತ್ವಗಳನ್ನು ಸಾರಿದರು ಎಂದು ಹೇಳಿದರು.

ಜಯಂತ್ಯೋತ್ಸವದಲ್ಲಿ ಶಂಕರಾಚಾರ್ಯರ ಕುರಿತಾಗಿ ಉಪನ್ಯಾಸ ನೀಡಿದ ಶಂಕರಾಚಾರ್ಯರ ಅನುಯಾಯಿಗಳಾದ ಡಾ. ನರೇಂಧ್ರ ನಾರಾಯಣ ವಾಳೇಕರ ಅವರು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಸಂಚಾರ ಕೈಗೊಂಡ ಸಚ್ಚಿದಾನಂದ ಶಂಕರಾಚಾರ್ಯರು ಹಿಂದೂ ಧರ್ಮದ ಸಂಘಟನೆಗಾಗಿ ಅವಿರತ ಶ್ರಮಿಸಿದರು. ಆವತ್ತು ಶಂಕರಾಚಾರ್ಯರು ಪರಿಚಯಿಸಿ, ಪಸರಿಸಿದ ಉದಾತ್ತ ತತ್ವಗಳು ಇವತ್ತಿಗೂ ಸಮಾಜಕ್ಕೆ ಸೂಕ್ತವಾಗಿವೆ ಎಂದು ಡಾ. ನರೇಂದ್ರ ನಾರಾಯಣ ವಾಳೇಕರ ಅವರು ಹೇಳಿದರು.

ಅವರು ಹಿಂದೂ ಧರ್ಮದ ಜಾಗೃತಿ, ಸಂಘಟನೆಗಾಗಿ ಇವತ್ತು ನಡೆಯುತ್ತಿರುವ ಅನೇಕ ಹೋರಾಟಗಳಿಗೆ ಶಂಕರಾಚಾರ್ಯರ ಚಿಂತನೆಗಳು ಮಾರ್ಗದರ್ಶಕ ವಾಗಿವೆ ಎಂದು ಹೇಳಿದರು.

ಶಂಕರಾಚಾರ್ಯರ ಭಾವಚಿತ್ರ ಮೆರವಣಿಗೆ:
ಶಂಕರಾಚಾರ್ಯರ ಜಯಂತ್ಯೋತ್ಸವ ಹಿನ್ನೆಲೆಯಲ್ಲಿ ಕುಮಾರ ಗಂಧರ್ವ ರಂಗಮಂದಿರದಿಂದ ಬಸವರಾಜ ಕಟ್ಟೀಮನಿ ಸಭಾ ಭವನದವರೆಗೆ ಸಂತ ಶಂಕರಾಚಾರ್ಯರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.

ಶಂಕರ ನಾಮಕರಣ:
ಭಾವಚಿತ್ರ ಮೆರವಣಿಗೆ ನಂತರ ಸಭಾಭವನದಲ್ಲಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುನರ್ ರಚನೆ, ಪೂಜೆ ನೆರವೇರಿಸಲಾಯಿತು. ನಂತರದಲ್ಲಿ ಸಮಾಜದ ಸುಮಂಗಲೆಯರು ತೊಟ್ಟಿಲಲ್ಲಿ ಶಂಕರಾಚಾರ್ಯರ ಪುಟ್ಟ ಮೂರ್ತಿ ಇಟ್ಟು ತೂಗುವ ಮೂಲಕ ಸಾಂಪ್ರದಾಯಿಕವಾಗಿ ನಾಮಕರಣ ಮಾಡಿದರು.

ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾದ ಶ್ರೀರಂಗ ಜೋಶಿ ಪ್ರಾರ್ಥನೆ, ನಾಡಗೀತೆ, ಭಕ್ತಿಗೀತೆ ಪ್ರಸ್ತುತ ಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಕಾರ್ಯಕ್ರಮದಲ್ಲಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ವಮಂಗಳ ಅರಳೀಕಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಸಮಾಜದ ಮುಖಂಡರಾದ ಗುರುರಾಜ ಜೋಶಿ, ಬಿ.ಆರ್.ಪಾಟೀಲ, ವೆಂಕಟೇಶ ಕುಲಕರ್ಣಿ, ಪದ್ಮಜಾ ಕುಲಕರ್ಣಿ, ಉಮಾ ದೇಶಪಾಂಡೆ ಹಾಗೂ ಇತರರು ಉಪಸ್ಥಿತರಿದ್ದರು.

ಬಜೆಟ್ ಘೋಷಣೆ ಅನುಷ್ಠಾನ: ಜಿಲ್ಲಾಧಿಕಾರಿ ಪೂರ್ವಭಾವಿ ಸಭೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button