ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಪರಿಣಾಮಕಾರಿ ಲಸಿಕೆ ಸ್ಪುಟ್ನಿಕ್ ವ್ಯಾಕ್ಸಿನ್ ಬೆಳಗಾವಿ ಜಿಲ್ಲೆಯಲ್ಲಿಯೂ ಲಭ್ಯವಿದ್ದು, ಶಾಸ್ತ್ರಿ ನಗರದ ಅಪೂರ್ವ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಸ್ಪುಟ್ನಿಕ್ ಲಸಿಕೆ ಬಿಡುಗಡೆ ಮಾಡಲಾಯಿತು.
ತಾಲೂಕಾ ಆರೋಗ್ಯಾಧಿಕಾರಿ ಡಾ. ಶಿವಾನಂದ ಮಾಸ್ತಿಹೊಳಿ ಸ್ಪುಟ್ನಿಕ್ ಲಸಿಕೆಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಎರಡು ಕರೋನಾ ಅಲೆಗಳಿಂದ ಜನತೆಗೆ ಸಾಕಷ್ಟು ತೊಂದರೆಯಾಗಿದೆ. ಇಡೀ ಮನುಕುಲವೇ ನಲುಗಿ ಹೋಗಿದೆ. ಕೊರೋನಾದಂತಹ ಮಾರಕ ವೈರಾಣು ವಿರುದ್ಧ ಹೋರಾಡಲು ಲಸಿಕೆಯೊಂದೆ ಅಸ್ತ್ರವಾಗಿದ್ದು, ಎಲ್ಲರೂ ಲಸಿಕೆ ಪಡೆಯಬೇಕಿದೆ ಎಂದು ಹೇಳಿದರು.
ಕೊವ್ಯಾಕ್ಸಿನ್, ಕೋವಿಶಿಲ್ಡ್, ಮಾರ‍್ನ್, ಸ್ಪುಟ್ನಿಕ್ ಎಲ್ಲ ಲಸಿಕೆಗಳು ಈಗ ಜನತೆಗೆ ಲಭ್ಯವಿದೆ. ಸ್ಪುಟ್ನಿಕ್ ಹೆಚ್ಚು ಪರಿಣಾಮಕಾರಿ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಉತ್ತರ ಕರ್ನಾಟಕದಲ್ಲಿ ಹುಬ್ಬಳ್ಳಿ, ವಿಜಯಪುರ ನಂತರದಲ್ಲಿ ಬೆಳಗಾವಿಯಲ್ಲಿ ಪ್ರಥಮ ಬಾರಿಗೆ ಸ್ಪುಟ್ನಿಕ್ ಲಭ್ಯವಾಗಿದೆ. ಹೀಗಾಗಿ ಅಪೂರ್ವ ಆಸ್ಪತ್ರೆ ಇಡೀ ತಂಡಕ್ಕೆ ಆರೋಗ್ಯ ಇಲಾಖೆ ವತಿಯಿಂದ ಅಭಿನಂದನೆಗಳು ಎಂದರು.
ಕೊವಿಡ್ 2ನೇ ಅಲೆ ಸಂಕಷ್ಟದ ಸಮಯದಲ್ಲೂ ಅಪೂರ್ವ ಆಸ್ಪತ್ರೆ ಎಂ.ಡಿ. ಶಿವಾನಂದ ಹಳಿಗೌಡ್ರ ಹಾಗೂ ಇಡೀ ಆಸ್ಪತ್ರೆ ಸೇವೆ ಶ್ಲಾಘನೀಯವಾಗಿದೆ. ಇದೇ 17 ರಂದು ಬೆಳಗಾವಿ ತಾಲೂಕಿನಾದ್ಯಂತ ಬೃಹತ್ ಲಸಿಕೆ ಅಭಿಯಾನ ಏರ್ಪಡಿಸಲಾಗಿದೆ. ಎಲ್ಲ ಆಸ್ಪತ್ರೆಗಳು ಇದಕ್ಕೆ ಕೈಜೋಡಿಸಬೇಕು. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಹೇಳಿದರು.
ಹಿರಿಯ ವೈದ್ಯರಾದ ಡಾ.ಶ್ರೀಕಾಂತ ಮೈತ್ರಿ ಮಾತನಾಡಿ ಸ್ಪುಟ್ನಿಕ್ ಉಳಿದ ಎಲ್ಲ ಲಸಿಕೆಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಲಸಿಕೆ ಪಡೆದ 21 ದಿನಗಳಲ್ಲಿ ದೇಹದಲ್ಲಿ ಶೇ. 99 ರಷ್ಟು ಪ್ರತಿಕಾಯ ಶಕ್ತಿ ಬಲವರ್ಧನೆಯಾಗುತ್ತದೆ. ಇಡೀ ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ಪ್ರಮಾಣದ ಅಡ್ಡಪರಿಣಾಮಗಳು ವರದಿಯಾಗಿರುವುದು ಸ್ಪುಟ್ನಿಕ್ ವಿಶೇಷತೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಸ್ಪತ್ರೆ ಎಂ.ಡಿ. ಶಿವಾನಂದ ಹಳಿಗೌಡ್ರ, ಡಾ. ಆನಂದತೋಟಗಿ, ಡಾ. ಅಮೀತ, ಡಾ. ಶ್ರೀಶೈಲ್ಹನಗಂಡಿ, ಡಾ. ಸುಧೀರ ಭಟ್, ಡಾ. ಸದಾನಂದ ಎನ್. ಹಾಗೂ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.
ಸೆ.17 ರಂದು ಲಸಿಕಾಮೇಳ: ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ