ಪ್ರಗತಿವಾಹಿನಿ ಸುದ್ದಿ; ಚನ್ನಮ್ಮನ ಕಿತ್ತೂರು: ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೋಗಿ-ಬರಲು ಸಮರ್ಪಕವಾಗಿ ಬಸ್ ವ್ಯವಸ್ಥೆ ಇಲ್ಲದೇ ಟ್ರ್ಯಾಕ್ಟರ್ ಮತ್ತು ತರಕಾರಿ ತುಂಬುವ ವಾಹನಗಳನ್ನೇರಿ ಹೋಗುವ ಪರಿಸ್ಥಿತಿ ಬಂದೊದಗಿದೆ.
ಕಿತ್ತೂರು ತಾಲೂಕಿನ ಬೈಲೂರು ಹಾಗೂ ಹೊನ್ನಾಪುರ ಸೇರಿದಂತೆ ಸುತ್ತಲಿನ ಗ್ರಾಮದ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ನಾಗರಿಕರು ಪ್ರತಿದಿನ ಕಿತ್ತೂರು ಪಟ್ಟಣಕ್ಕೆ ಬಂದು, ಬೆಳಗಾವಿ ಮತ್ತು ಧಾರವಾಡ, ಹುಬ್ಬಳ್ಳಿ ನಗರಕ್ಕೆ ಹೊಗುತ್ತಾರೆ. ಆದರೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದ ಪರಿಣಾಮ ಕೆಲ ವಿದ್ಯಾರ್ಥಿಗಳು ಹಾಗೂ ಜನರು ಟ್ರ್ಯಾಕ್ಟರ್ ಮತ್ತು ತರಕಾರಿ ತುಂಬುವ ವಾಹನಗಳ ಮುಖಾಂತರ ಕಿತ್ತೂರಿಗೆ ಬರುತ್ತಿದ್ದಾರೆ.
ಮಾತು ಕೇಳದ ಅಧಿಕಾರಿಗಳು:
ಬಸ್ ಸಮಸ್ಯೆ ಬಗ್ಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಕ್ಯಾರೇ ಅನ್ನುತ್ತಿಲ್ಲ. ಬೈಲಹೊಂಗಲದಿಂದ ಬಸ್ ಬಂದಿಲ್ಲ, ನಾವು ಏನ್ ಮಾಡೋದು ಅಂತಾ ವಿದ್ಯಾರ್ಥಿಗಳ ಮುಂದೆ ಸಿದ್ಧ ಉತ್ತರ ನೀಡಿ ಕಳಿಸುತ್ತಾರೆ. ಹೆಸರಿಗಷ್ಟೇ ತಾಲೂಕು ಕೇಂದ್ರವಾಗಿರುವ ಕಿತ್ತೂರು ಇದುವರೆಗೂ ಹಳ್ಳಿಗಳಿಗೆ ತೆರಳಲು ಯಾವುದೇ ರೀತಿ ಬಸ್ ವ್ಯವಸ್ಥೆ ಸರಿಯಾಗಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.
ಕೆಡಿಪಿ ಸಭೆಯಲ್ಲಿ ಶಾಸಕ ಮಹಾಂತೇಶ ದೊಡ್ಡಗೌಡರ ಸಮಸ್ಯೆ ಪರಿಹರಿಸಲು ವಾರ್ನಿಂಗ್ ಕೊಟ್ಟರೂ ಡೋಂಟ್ ಕೇರ್ ಎನ್ನುತ್ತಿದ್ದಾರೆ ಅಧಿಕಾರಿಗಳು.
ಶಾಲಾ-ಕಾಲೇಜುಗಳು ಪ್ರಾರಂಭವಾಗಿವೆ. ಎಲ್ಲ ಹಳ್ಳಿಗಳಿಗೂ ಸಮಯಕ್ಕೆ ಸರಿಯಾಗಿ ಬಸ್ ಓಡಿಸಬೇಕು ಅಂತಾ ಮೊನ್ನೆ ನಡೆದ ಕೆಡಿಪಿ ಸಭೆಯಲ್ಲಿ ಸಾರಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳೆದ 15 ದಿನಗಳ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ವಾರ್ನಿಂಗ್ ಮಾಡಿದ್ದಾರೆ. ಆದರೆ ಜಾಣ ಕಿವುಡರಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಒಂದು ಕಿವಿಯಲ್ಲಿ ಕೇಳಿ ಮತ್ತೊಂದು ಕಿವಿಯಲ್ಲಿ ಅಲ್ಲೆ ಬಿಟ್ಟು ಹೋಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ವಿದ್ಯಾರ್ಥಿಗಳ ಅಳಲು:
ಲಾಕ್‍ಡೌನ್ ಮುಗಿದಾಗಿನಿಂದಲೂ ಸಮರ್ಕಪವಾಗಿ ಬಸ್‍ಗಳು ಬರುತ್ತಿಲ್ಲ. ಈಗ ಶಾಲಾ-ಕಾಲೇಜುಗಳು ಪ್ರಾರಂಭವಾಗಿವೆ. ಪ್ರತಿದಿನ ಶಾಲೆಗೆ ಹೊಗಬೇಕಾದ್ರೆ ಖಾಸಗಿ ವಾಹನಗಳ ಮೂಲಕ ಹೋಗಿ ಬರಬೇಕು. ಈ ವಿಷಯದ ಬಗ್ಗೆ ಸಾರಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೂ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾಥಿಗಳು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ಸರಿಯಾಗಿ ಎಲ್ಲ ಹಳ್ಳಿಗಳಿಗೂ ಬಸ್ ಬಿಡದೇ ಇದ್ದರೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ಸಾರ್ವಜನಿಕರು ಹಾಗೂ ವಿದ್ಯಾಥಿಗಳು ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ