Kannada NewsLatest

ಸ್ವಾತಂತ್ರ್ಯದ ಅಮೃತ ಮಹೋತ್ಸವ: ಮಹಾತ್ಮಾ ಗಾಂಧಿ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮಹಾನಗರ ಪಾಲಿಕೆಯ ವತಿಯಿಂದ ನಗರದ ವೀರಸೌಧ(ಕಾಂಗ್ರೆಸ್ ಬಾವಿ) ಆವರಣದಲ್ಲಿ ಶುಕ್ರವಾರ (ಮಾ.12) ಮಹಾತ್ಮಾ ಗಾಂಧೀಜಿಯವರ ಛಾಯಾಚಿತ್ರ ಹಾಗೂ ವಿವಿಧ ಮಹನೀಯರ ಕುರಿತ ಪುಸ್ತಕಗಳ ಪ್ರದರ್ಶನ ನಡೆಯಿತು.

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಭಯ್ ಪಾಟೀಲ ಅವರು, ಪ್ರದರ್ಶನವನ್ನು ಉದ್ಘಾಟಿಸಿದರು.

ಪುಸ್ತಕಗಳ ಪ್ರದರ್ಶನ ಹಾಗೂ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿದ ಅವರು, ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶದಾದ್ಯಂತ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಇದಕ್ಕೂ ಮುಂಚೆ ಚನ್ನಮ್ಮನ ಕಿತ್ತೂರಿನಿಂದ ಆರಂಭಗೊಂಡ ಸೈಕಲ್ ರ್ಯಾಲಿ ಯನ್ನು ನಗರದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಬರಮಾಡಿಕೊಂಡು ಮಾತನಾಡಿದ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ್ ಬೆನಕೆ ಅವರು, ಮುಂದಿನ 75 ವಾರಗಳ ಕಾಲ ಸ್ವಾತಂತ್ರ್ಯ ಹೋರಾಟದ ಮಹತ್ವವನ್ನು ತಿಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಅಮೃತ ಮಹೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗಾಗಿ ಪ್ರಬಂಧ, ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಸ್ಥಳದಲ್ಲಿಯೇ ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ.ಎಚ್.ಅವರು ಬಹುಮಾನಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಂಬರುವ 75 ವಾರಗಳಲ್ಲಿ ನಗರದ ಉದ್ಯಾನಗಳು ಹಾಗೂ ನವೀಕೃತ ಕೆರೆಗಳ ಆವರಣದಲ್ಲಿ ವಿಶಿಷ್ಟವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ವೀರಸೌಧ ಆವರಣದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವೀರ ಸಾವರಕರ ಗ್ರಂಥಾಲಯ ಸೇರಿದಂತೆ ವಿವಿಧ ಸಂಸ್ಥೆಗಳ ವತಿಯಿಂದ ಸ್ವಾತಂತ್ರ್ಯ ಹೋರಾಟದ ಮಹನೀಉರ ಕುರಿತ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ಆರಂಭಿಸಲಾಗಿತ್ತು.

ಕಿತ್ತೂರು ಚೆನ್ನಮ್ಮ ವೃತ್ತದಿಂದ ನಂದಗಡ ತೆರಳುವ ಮಾರ್ಗದಲ್ಲಿ ವೀರಸೌಧಕ್ಕೆ ಭೇಟಿ ನೀಡಿದ ಸೈಕ್ಲಿಸ್ಟ್ ಗಳನ್ನು ಆತ್ಮೀಯವಾಗಿ ಸ್ವಾಗತಿಸಿ ಅವರಿಗೆ ಫಲ ಹಾಗೂ ಉಪಾಹಾರ ಒದಗಿಸಲಾಯಿತು.

ಬೆಳಗಾವಿ ಉಪ ವಿಭಾಗಾಧಿಕಾರಿಗಳಾದ ಅಶೋಕ ತೇಲಿ, ಮಾಜಿ‌ ಶಾಸಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಪ್ರಮುಖರೂ ಆಗಿರುವ ಪರಶುರಾಮ ನಂದಿಹಳ್ಳಿ, ಮಹಾನಗರ ಪಾಲಿಕೆಯ ಅಭಿಯಂತರರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ವಿವಿಧ ಶಾಲಾ ಮಕ್ಕಳಿಂದ ದೇಶಭಕ್ತಿ ಗೀತೆಗಳು, ನೃತ್ಯಗಾಯನ ಸೇರಿದಂತೆ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆಯವರೆಗೂ ನಡೆದವು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button