ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಿಯಮಾವಳಿ ಮೀರಿ ಅಕ್ರಮವಾಗಿ ಬಿಪಿಎಲ್ ಕಾರ್ಡುಗಳನ್ನು ಪಡೆದಿರುವ ಕುಟುಂಬಗಳನ್ನು ಗುರುತಿಸಿ ಕಾರ್ಡುಗಳನ್ನು ಕಾಲಮಿತಿಯಲ್ಲಿ ರದ್ದುಪಡಿಸಲು ಕೂಡಲೇ ವಿಶೇಷ ಅಭಿಯಾನ ಕೈಗೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವ ಉಮೇಶ್ ಕತ್ತಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ (ಫೆ.6) ನಡೆದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರದ ಮಾರ್ಗಸೂಚಿ ಮೀರಿ ಅನೇಕ ಕುಟುಂಬಗಳು ಬಿಪಿಎಲ್ ಕಾರ್ಡುಗಳನ್ನು ಪಡೆದುಕೊಂಡಿದ್ಧಾರೆ. ಕೂಡಲೇ ಇಂತಹ ಕಾರ್ಡುಗಳನ್ನು ರದ್ದುಪಡಿಸಬೇಕು ಎಂದರು.
ಜನಸಂಖ್ಯೆಗಿಂತ ಅಧಿಕ ಕಾರ್ಡು ವಿತರಿಸಿರುವ ಬಗ್ಗೆ ದೂರುಗಳಿವೆ. ಆರೋಗ್ಯ ಭಾಗ್ಯ ಸೇರಿದಂತೆ ಇತರೆ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಎಲ್ಲರೂ ಬಿಪಿಎಲ್ ಕಾರ್ಡುಗಳನ್ನು ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ.
ಇದರಿಂದ ಬಿಪಿಎಲ್ ಕಾರ್ಡುಗಳನ್ನು ಪಡೆದುಕೊಳ್ಳಲು ಹಾತೊರೆಯುತ್ತಿದ್ದಾರೆ.
ಸೀಮೆ ಎಣ್ಣೆ ವಿತರಣೆ; ಪರಿಶೀಲಿಸಿ ನಿರ್ಧಾರ:
ಸಿಲಿಂಡರ್ ನೀಡುತ್ತಿರುವಾಗ ಸೀಮೆ ಎಣ್ಣೆ ವಿತರಿಸುತ್ತಿರುವುದರ ಔಚಿತ್ಯವೇನು ಎಂದು ಸಚಿವರು ಪ್ರಶ್ನಿಸಿದರು.
ಮುಂಬರುವ ದಿನಗಳಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಿ ಏಪ್ರಿಲ್ ವೇಳೆಗೆ ಸೀಮೆ ಎಣ್ಣೆ ನೀಡುವುದನ್ನು ಮುಂದುವರಿಸುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಉಮೇಶ್ ಕತ್ತಿ ತಿಳಿಸಿದರು.
ಮುಖ್ಯಮಂತ್ರಿ ಅನಿಲ್ ಭಾಗ್ಯ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯವನ್ನು ಒದಗಿಸಬೇಕು.
ಸ್ಥಳೀಯವಾಗಿ ಗೋದಿ ಮತ್ತು ಅಕ್ಕಿ ಖರೀದಿಸಲು ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮನೆ ಮನೆಗೆ ಭೇಟಿ ನೀಡಿ ಜನರಿಗೆ ಜೋಳ, ಅಕ್ಕಿ, ಗೋದಿ ಸೇರಿಂದತೆ ಯಾವ ರೀತಿಯ ಆಹಾರಧಾನ್ಯ ಬೇಕು ಎಂಬುದರ ಬಗ್ಗೆ ಸಮೀಕ್ಷೆ ನಡೆಸಬೇಕು ಎಂದು ಆಹಾರ ಇಲಾಖೆಯ ನಿರೀಕ್ಷಕರಿಗೆ ಸಚಿವರು ಸೂಚನೆ ನೀಡಿದರು.
ಬಿಪಿಎಲ್ ಕಾರ್ಡು ಬಳಕೆ; ಮಾರ್ಗಸೂಚಿ ಅಗತ್ಯ:
ಸರ್ಕಾರಕ್ಕೆ ತಪ್ಪು ಮಾಹಿತಿಯನ್ನು ನೀಡಿ ಬಿಪಿಎಲ್ ಕಾರ್ಡುಗಳನ್ನು ಪಡೆದ ಕುಟುಂಬಗಳನ್ನು ಗುರುತಿಸಿ ಕಾರ್ಡು ಹಿಂಪಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದರು.
ಬಿಪಿಎಲ್ ಕಾರ್ಡುಗಳ ಬಳಕೆಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ಸ್ಥಳೀಯ ಜನರ ಆಹಾರ ಪದ್ಧತಿಯನ್ನು ಆಧರಿಸಿ ಆಹಾರಧಾನ್ಯ ವಿತರಿಸಲು ಕ್ರಮ ಕೈಗೊಳ್ಳಬೇಕು ಸಚಿವರಿಗೆ ಸಲಹೆ ನೀಡಿದರು.
ಜಿಲ್ಲೆಯಲ್ಲಿ ಇರುವ ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಆಹಾರ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಅನರ್ಹ ಪಡಿತರ ಚೀಟಿ ರದ್ದುಪಡಿಸಲು ನಿರಂತರ ಸಮೀಕ್ಷೆ ಕೈಗೊಂಡಾಗ ರದ್ದು ಪ್ರಕ್ರಿಯೆ ಸರಳವಾಗಲಿದೆ ಎಂದರು.
14.40 ಲಕ್ಷ ಪಡಿತರ ಚೀಟಿಗಳಿವೆ. ಅದರಲ್ಲಿ ಒಟ್ಟಾರೆ 34 ಲಕ್ಷ ಜನರು ಬಿಪಿಎಲ್ ಪಡಿತರ ಚೀಟಿಯ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ.ಕೊಡ್ಲಿ ವಿವರಿಸಿದರು.
ಪಡಿತರ ಚೀಟಿಗಾಗಿ ಒಟ್ಟು 45 ಸಾವಿರ ಹೊಸ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 42 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.
ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ತಿಂಗಳು ಜಿಲ್ಲೆಯಲ್ಲಿ 1.71 ಲಕ್ಷ ಕ್ವಿಂಟಲ್ ಅಕ್ಕಿಯನ್ನು ವಿತರಿಸಲಾಗುತ್ತಿದೆ.
ಐದಕ್ಕಿಂತ ಹೆಚ್ಚು ಸದಸ್ಯರ ಬಿಪಿಎಲ್ ಕುಟುಂಬವನ್ನು ಅಂತ್ಯೋದಯ ಕಾರ್ಡುದಾರರನ್ನಾಗಿ ಪರಿವರ್ತಿಸಲಾಗಿದೆ.
ಕುಟುಂಬ ವಿಭಜನೆ ಆಗಿರುವುದರಿಂದ ಜನಸಂಖ್ಯೆಗೆ ಹೋಲಿಸಿದರೆ ಅಧಿಕ ಸಂಖ್ಯೆಯ ಕಾರ್ಡುಗಳು ಕಂಡುಬರುತ್ತಿವೆ ಎಂದು ವಿವರಿಸಿದರು.
ಡಿಸೆಂಬರ್ ನಲ್ಲಿ 738 ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿ ರದ್ದುಪಡಿಸಲಾಗಿದೆ. ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿ ರದ್ದುಪಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಮುಂದಿನ ಮೂರು ತಿಂಗಳಲ್ಲಿ ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗುವುದು ಎಂದು ತಿಳಿಸಿದರು.
ಬೆಳಗಾವಿ(ಉತ್ತರ) ಮತ ಕ್ಷೇತ್ರದ ಶಾಸಕ ಅನಿಲ್ ಬೆನಕೆ ಉಪಸ್ಥಿತರಿದ್ದರು. ಉಪ ವಿಭಾಗಾಧಿಕಾರಿಗಳಾದ ಯುಕೇಶ್ ಕುಮಾರ್, ಅಶೋಕ ತೇಲಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ