ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಧಾನಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಯಾರಿಗೂ ಅವಮಾನ ಮಾಡಬೇಕೆನ್ನುವ ಉದ್ದೇಶ ಸರ್ಕಾರದ್ದಲ್ಲ, ಭದ್ರತೆ ಸಂದರ್ಭದಲ್ಲಿ ಆ ರೀತಿಯ ಘಟನೆ ಉಂಟಾಗಿದೆ. ನಮಗೆ ಗೊತ್ತಾದ ತಕ್ಷಣ ಅದನ್ನು ಸರಿಪಡಿಸಿ ವಿಧಾನಮಂಡಲ ಸದಸ್ಯರಿದ್ದ ಟ್ರ್ಯಾಕ್ಟರ್ ಅನ್ನು ಒಳಗೆ ಬಿಡಲು ಕ್ರಮವಹಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಮಾಧುಸ್ವಾಮಿ ತಿಳಿಸಿದ್ದಾರೆ.
ವಿಧಾನಪರಿಷತ್‌ನಲ್ಲಿ ವಿರೋಧಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು ವಿಧಾನಮಂಡಲದ ಸದಸ್ಯರ ಟ್ರ್ಯಾಕ್ಟರ್ ಸುವರ್ಣಸೌಧದ ಒಳಗಡೆ ಬಿಡದೆ ಸದಸ್ಯರ ಹಕ್ಕುಗಳನ್ನು ಪೊಲೀಸರು ಕಿತ್ತುಕೊಂಡಿದ್ದಾರೆ ಮತ್ತು ಈ ಮೂಲಕ ನಮಗೆ ಹಾಗೂ ಸಭಾಪತಿಗಳಿಗೆ ಅಗೌರವ ತೋರಿದ್ದಾರೆ; ಉದ್ಧಟತನ ತೋರಿದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು ಎಂದು ಆರೋಪಿಸಿದ್ದಕ್ಕೆ ಅವರು ಉತ್ತರಿಸಿದರು.
ಸಚಿವರ ಮೇಲೆ ಗುರುತರವಾದ ಅಪಾದನೆ ಇದ್ದು,ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವಂತೆ ವಿರೋಧಪಕ್ಷದ ಸದಸ್ಯರು ಕೋರಿರುವುದರಿಂದ ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದು ವಿವರಿಸಿದ ಅವರು ನಿನ್ನೆ ಮಧ್ಯಾಹ್ನ ವಿಧಾನಪರಿಷತ್‌ನಲ್ಲಿ ನಡೆದ ಸದಸ್ಯರ ಅಮಾನತು ಘಟನೆಗೆ ವಿಷಾದ ವ್ಯಕ್ತಪಡಿಸಿದರು.
ಪ್ರಮುಖ ವಿಧೇಯಕಗಳ ಮಂಡನೆ ಮತ್ತು ಪ್ರಮುಖ ವಿಷಯಗಳ ಕುರಿತು ಸದನಲ್ಲಿ ಚರ್ಚಿಸಬೇಕಿರುವುದರಿಂದ ಸುಸೂತ್ರ ಕಲಾಪ ನಡೆಯಲಿಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ ಅವರು ಪೀಠದ ನಿರ್ಣಯ ಪ್ರಶ್ನೆ ಮಾಡುವುದು ಪ್ರಜಾಪ್ರಭುತ್ವದಲ್ಲಿ ಸರಿಯಲ್ಲ. ಬಹಳಷ್ಟು ಜನ ಅನುಭವಿಗಳು ಸದನಲ್ಲಿದ್ದು, ಅನೇಕರಿಗೆ ಈ ಅಧಿವೇಶನ ಕೊನೆಯದ್ದಾಗಿದೆ;ಎಲ್ಲರೂ ಸೇರಿ ಅತ್ಯಂತ ಹರ್ಷದಿಂದ ಈ ಕಲಾಪ ನಡೆಸೋಣ ಎಂದರು. ಈ ಮೂಲಕ ಸದನದ ಘನತೆ ಕಾಪಾಡಬೇಕು ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ