Kannada NewsLatest

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ; ಮಿಂಚಿನ ನೋಂದಣಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮಿಂಚಿನ ನೋಂದಣಿ ಅಭಿಯಾನದ ಸಂದರ್ಭದಲ್ಲಿ ಅರ್ಹ ಯುವ ಜನತೆಯನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಆದ್ಯತೆ ನೀಡಬೇಕು ಎಂದು ಜಿಲ್ಲೆಯ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೀಕ್ಷಕ(ರೋಲ್ ಅಬ್ಸರ್ವರ್)ರಾದ ಎಲ್.ಕೆ.ಅತೀಕ್ ಸೂಚನೆ ನೀಡಿದರು.

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ (ನ.27) ನಡೆದ ಬಿ.ಎಲ್.ಓ. ಸಭೆಯಲ್ಲಿ ಅವರು ಮಾತನಾಡಿದರು.

ಮಿಂಚಿನ ನೋಂದಣಿ ಅಭಿಯಾನದಲ್ಲಿ ಕೇವಲ ಹನ್ನೊಂದು ದಿನಗಳ ಅವಕಾಶ ಇರುವುದರಿಂದ ಇತ್ತೀಚೆಗೆ ಹದಿನೆಂಟು ವಯೋಮಿತಿ ‌ತಲುಪಿದ ಯುವ ಜನರನ್ನು ಮತದಾರರ ಒಟ್ಟಿಗೆ ಸೇರ್ಪಡೆಗೊಳಿಸಲು ವಿಶೇಷ ಮುತುವರ್ಜಿ ವಹಿಸಬೇಕು.
ಈಚೆಗೆ ಹದಿನೆಂಟು ‌ವಯೋಮಿತಿ ಪೂರ್ಣಗೊಳಿಸಿರುವ ಒಂದು ಲಕ್ಷಕ್ಕೂ ಅಧಿಕ ಯುವಜನರು ಸದ್ಯಕ್ಕೆ ಜಿಲ್ಲೆಯಲ್ಲಿದ್ದಾರೆ. ಅವರನ್ನು ಕಡ್ಡಾಯವಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ವಿಶೇಷ ಆಸಕ್ತಿ ವಹಿಸಬೇಕು.
ಪದವಿ ಕಾಲೇಜುಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಹೆಸರು ಸೇರ್ಪಡೆ ಕುರಿತು ಜಾಗೃತಿಯನ್ನು ಮೂಡಿಸಬೇಕು.

ವಿಕಲಚೇತನರಿಗೆ ಮತದಾನದ ಹಕ್ಕು ಕಲ್ಪಿಸಲು ಸೂಚನೆ:

Home add -Advt

ಇದಲ್ಲದೇ ಹದಿನೆಂಟು ವರ್ಷ ವಯೋಮಾನದ ಯಾವುದೇ ವಿಕಲಚೇತನರು ಕೂಡ ಮತದಾನದ ಹಕ್ಕಿನಿಂದ‌ ವಂಚಿತಗೊಳ್ಳಬಾರದು. ಪ್ರತಿ ಬೂತ್ ಮಟ್ಟದಲ್ಲಿ ಮನೆ ಮನೆಗೆ ತೆರಳಿ ಹೆಸರು ಸೇರ್ಪಡೆ, ಕಡಿಮೆಗೊಳಿಸಲು ಕ್ರಮಕೈಗೊಳ್ಳಬೇಕು. ಶೂನ್ಯ ಸೇರ್ಪಡೆ ಅಥವಾ ಕಡಿಮೆಗೊಳಿಸುವಿಕೆ ಇರುವ ಬೂತ್ ಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಪರಿಶೀಲನೆ ‌ನಡೆಸಿ ಕಾರಣಗಳನ್ನು ತಿಳಿದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಮುಂಬರುವ ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದ ಮತದಾರರ ಪಟ್ಟಿ ಪರಿಷ್ಕರಣೆಗೆ ಹೆಚ್ಚಿನ ಮಹತ್ವವಿದೆ.
ಒಂದೇ ಬೂತ್ ನಲ್ಲಿ ನೂರಾರು ಜನರ ಹೆಸರು ಸೇರ್ಪಡೆ ಅಥವಾ ಹೆಸರು ಕಡಿಮೆಗೊಳಿಸುವಂತಹ ಸಂದರ್ಭದಲ್ಲಿ ಸಂಶಯಗಳು ಉಂಟಾಗುತ್ತವೆ. ಆದ್ದರಿಂದ ಇಂತಹ ವೇಳೆ ಹೆಚ್ಚಿನ ಗಮನಹರಿಸಬೇಕು ಎಂದು ಹೇಳಿದರು.

ಮತದಾರರ ಪಟ್ಟಿಯಲ್ಲಿ ಲಿಂಗಾನುಪಾತ ಪ್ರಮಾಣ ಹಾಗೂ ಎಪಿಕ್ ಅನುಪಾತ ಪ್ರಮಾಣ ಕೂಡ ಸ್ವಲ್ಪಮಟ್ಟಿಗೆ ಕಡಿಮೆ ಕಂಡುಬರುತ್ತಿದೆ. ಈ ಬಗ್ಗೆ ಬಿಎಲ್ಓ ಗಳು ಗಮನಹರಿಸಬೇಕು ಎಂದು ಎಲ್.ಕೆ. ಅತೀಕ್ ತಿಳಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಿ ಅವುಗಳನ್ನು ಪರಿಹರಿಸಲು ಕ್ರಮ ವಹಿಸಬೇಕು. ಮತದಾರರ ಪಟ್ಟಿಯಲ್ಲಿ ಲಿಂಗಾನುಪಾತ ಸ್ವಲ್ಪಮಟ್ಟಿಗೆ ಕಡಿಮೆಯಿದೆ. ಈ ಬಗ್ಗೆ ಪರಿಶೀಲಿಸಬೇಕು.

ಶೂನ್ಯ ಸಾಧನೆ; ಬಿಎಲ್ಓ ಗಳಿಗೆ ಎಚ್ಚರಿಕೆ:

ಜಿಲ್ಲೆಯಲ್ಲಿ ಎಲ್ಲ ಬೂತ್ ಮಟ್ಟದ ಅಧಿಕಾರಿಗಳ(ಬಿಎಲ್ಓ‌) ಸಭೆ ನಡೆಸಲಾಗಿದ್ದು, ಯಾವುದೇ ಬೂತ್ ಮಟ್ಟದಲ್ಲಿ ಹೆಸರು ಸೇರ್ಪಡೆ ಅಥವಾ ಕಡಿಮೆಗೊಳಿಸುವಿಕೆ ಪ್ರಮಾಣ ಶೂನ್ಯವಾಗಿರದಂತೆ ನೋಡಿಕೊಳ್ಳಬೇಕು ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಅವರು ತಿಳಿಸಿದರು.
ಮತದಾರರ ಸಾಕ್ಷರತೆ ಕ್ಲಬ್ ಗಳ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸುವ ಮೂಲಕ ಮತದಾರರ ಸೇರ್ಪಡೆ ಪ್ರಮಾಣ ಹೆಚ್ಚಿಸಬೇಕು ಎಂದು ತಿಳಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಎಲ್ಲಾ ಅಧಿಕಾರಿಗಳು ಸಿಬ್ಬಂದಿಗೆ ತರಬೇತಿಯನ್ನು ನೀಡಿ, ನಿಗದಿತ ನಮೂನೆಗಳನ್ನು ಕೂಡ ಒದಗಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಶಂಕರಪ್ಪ ವಣಿಕ್ಯಾಳ ತಿಳಿಸಿದರು.
ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯನ್ನು ಈಗಾಗಲೇ ‌ನಡೆಸಲಾಗಿದೆ ಎಂದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಉಪ ವಿಭಾಗಾಧಿಕಾರಿ ರವೀ ಕರಲಿಂಗಣ್ಣವರ, ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ, ಸ್ವೀಪ್ ಸಮಿತಿಯ ಕಾರ್ಯದರ್ಶಿ ಪರಶುರಾಮ್ ದುಡಗುಂಟಿ ಮತ್ತಿತರರು ಉಪಸ್ಥಿತರಿದ್ದರು.

ಚಳಿಗಾಲ ಅಧಿವೇಶನ; ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್ ಸಭೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button