Belagavi NewsBelgaum NewsKannada NewsKarnataka NewsLatestPolitics

*ಬಿಜೆಪಿಗೆ ರಾಜಕೀಯ ಮುಖ್ಯವೇ ಹೊರತು ಜನರ ಸಮಸ್ಯೆ, ರಾಜ್ಯದ ಅಭಿವೃದ್ಧಿಯಲ್ಲ: ಡಿಸಿಎಂ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: “ಬಿಜೆಪಿ ನಾಯಕರಿಗೆ ರಾಜಕಾರಣ ಮುಖ್ಯವೇ ಹೊರತು ರಾಜ್ಯದ ಅಭಿವೃದ್ಧಿಯಾಗಲಿ, ಜನರ ಸಮಸ್ಯೆಯಾಗಲಿ ಅಲ್ಲ. ಅವರಿಗೆ ಜನರ ಸಮಸ್ಯೆ ಬಗ್ಗೆ ಆಸಕ್ತಿ ಇಲ್ಲವೆಂದರೆ ನಾವೇನು ಮಾಡೋಕಾಗುತ್ತೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

ಸುವರ್ಣಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಉತ್ತರಿಸಿದರು.

“ಬಿಜೆಪಿ ಹಾಗೂ ಜನತಾದಳದವರಿಗೆ ಜನರ ಸಮಸ್ಯೆ ಬಗ್ಗೆ ಎಷ್ಟು ಕಾಳಜಿ ಇದೆ ಎಂಬುದು ಮುಖ್ಯ. ಆದರೆ ಬಿಜೆಪಿಯವರಿಗೆ ಈ ಬಗ್ಗೆ ಚರ್ಚೆ ಮಾಡಲು ಆಸಕ್ತಿ ಇಲ್ಲದಿದ್ದರೆ ನಾವೇನು ಮಾಡಲು ಸಾಧ್ಯ? ಬಿಜೆಪಿಗೆ ಕೇವಲ ರಾಜಕಾರಣ ಬೇಕು. ಅವರು ರಾಜಕಾರಣ ಮಾಡಿಕೊಂಡಿರಲಿ, ನಾವು ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸುತ್ತೇವೆ” ಎಂದರು.

ಭೋಜನಕೂಟದಲ್ಲಿ ಅನ್ಯ ಪಕ್ಷಗಳ ಶಾಸಕರ ಭಾಗಿ ವಿಚಾರವಾಗಿ ಕೇಳಿದಾಗ, “ಮದುವೆ, ಶುಭ ಸಮಾರಂಭ, ಭೋಜನ ಕೂಟದಲ್ಲಿ ನಾಯಕರು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಸೇರುತ್ತಾರೆ. ಅದರಲ್ಲಿ ತಪ್ಪೇನಿದೆ? ಬಿಜೆಪಿಯವರು ನನ್ನ ಜೊತೆ ಮಾತನಾಡುವುದು, ನಮ್ಮ ಪಕ್ಷದ ನಾಯಕರು ಅವರ ಜೊತೆ ಮಾತನಾಡುವುದು ಸಹಜವಾದುದ್ದು. ರಾಜಕೀಯವಾಗಿ ಏನೇ ಭಿನ್ನಾಭಿಪ್ರಾಯವಿದ್ದರೂ ಮನುಷ್ಯರ ನಡುವಣ ಬಾಂಧವ್ಯ ಮುಖ್ಯವಾದುದು. ಸದನದ ಕಲಾಪ ಸಮಯದಲ್ಲೂ ಕೆಲವು ವಿಚಾರಗಳ ಚರ್ಚೆಗೆ ಸಭೆ ಕರೆದಾಗ ವಿರೋಧ ಪಕ್ಷಗಳ ನಾಯಕರನ್ನೂ ಆಹ್ವಾನಿಸುತ್ತೇವೆ. ರಾಜಕೀಯ ಮಾಡಲು ಬಯಸುವವರು ಸಭೆಗೆ ಬರುವುದಿಲ್ಲ. ನಾವು ಸಹಜವಾಗಿ ಭೋಜನ ಕೂಟಕ್ಕೆ ಎಲ್ಲಾ ಶಾಸಕರನ್ನು ಆಹ್ವಾನಿಸುತ್ತೇವೆ. ಕೆಲವರು ಬರುತ್ತಾರೆ, ಕೆಲವರು ನಿರಾಕರಿಸುತ್ತಾರೆ. ನಮಗೆ ಆತ್ಮೀಯರಾಗಿರುವವರನ್ನು ನಾವು ಕರೆಯುತ್ತೇವೆ. ಅದರಲ್ಲಿ ತಪ್ಪೇನಿದೆ” ಎಂದರು.

ಶಾಸಕ ಪ್ರಸಾದ್ ಅಬ್ಬಯ್ಯ ಅವರು ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ಬಗ್ಗೆ ಪ್ರಸ್ತಾಪ ಮಾಡಿದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ಪ್ರತಿಕ್ರಿಯಿಸಲು ನಿರಾಕರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button