ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಧಿವೇಶನ ಆರಂಭಕ್ಕೆ ಕಡಿಮೆ ಸಮಯಾವಕಾಶ ಇರುವುದರಿಂದ ಇಂಟರ್ನೆಟ್ ಪೂರೈಕೆ, ಕಂಪ್ಯೂಟರ್ ಅಳವಡಿಕೆ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಬೇಕು. ಎರಡು ದಿನ ಮುಂಚಿತವಾಗಿ ಪ್ರತಿಯೊಂದು ವ್ಯವಸ್ಥೆಯನ್ನು ಸಜ್ಜುಗೊಳಿಸಿ ಪ್ರಾಯೋಗಿಕವಾಗಿ ಪರಿಶೀಲಿಸಬೇಕು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಪಿ.ಹೇಮಲತಾ ತಿಳಿಸಿದರು.
ಚಳಿಗಾಲ ಅಧಿವೇಶನದ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧಕ್ಕೆ ಬುಧವಾರ (ಡಿ.1) ಭೇಟಿ ನೀಡಿದ ಬಳಿಕ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಸುವರ್ಣ ವಿಧಾನಸೌಧದಲ್ಲಿ ಬಿಎಸ್ಎನ್ಎಲ್ ಹಾಗೂ ಕೇಸ್ವಾನ್ ಮೂಲಕವೂ ಇಂಟರ್ನೆಟ್ ಸೌಲಭ್ಯ ಕಲ್ಪಿಸಬೇಕು. ಡಿ.5 ರೊಳಗೆ ಇಂಟರ್ನೆಟ್ ಸೌಲಭ್ಯ ಕಲ್ಪಿಸಬೇಕು ಎಂದು ಬಿಎಸ್ಎನ್ಎಲ್ ಅಧಿಕಾರಿಗಳಿಗೆ ತಿಳಿಸಿದರು.
ಅಧಿವೇಶನ ಸಂದರ್ಭದಲ್ಲಿ ಸಚಿವಾಲಯ ಸಿಬ್ಬಂದಿಗೆ ಅಗತ್ಯ ಲೇಖನ ಸಾಮಗ್ರಿ, ಪ್ರಿಂಟರ್ ಮತ್ತಿತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು. ಸಂಬಂಧಿಸಿದ ಅಧಿಕಾರಿಗಳು ಅಥವಾ ಸಿಬ್ಬಂದಿ ಸಂಪರ್ಕಿಸಲು ಅನುಕೂಲವಾಗುವಂತೆ ದೂರವಾಣಿ ಸಂಖ್ಯೆ ಒಳಗೊಂಡಿರುವ ಮಾಹಿತಿ ಪುಸ್ತಕವನ್ನು ಮುದ್ರಿಸಬೇಕು.
ಕೋವಿಡ್: ವಿಶೇಷ ತಂಡ ನಿಯೋಜಿಸಲು ಸೂಚನೆ:
ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಪಾಲನೆಗೆ ಗಮನಹರಿಸಬೇಕು. ಕೋವಿಡ್ ಪರೀಕ್ಷೆ ಮಾಡಲು ಕೂಡ ವಿಶೇಷ ತಂಡಗಳನ್ನು ನಿಯೋಜಿಸಬೇಕು ಎಂದು ಹೇಮಲತಾ ನಿರ್ದೇಶನ ನೀಡಿದರು.
ಕಂಪ್ಯೂಟರ್, ಇಂಟರ್ನೆಟ್, ದೂರವಾಣಿ, ಕೇಂದ್ರೀಕೃತ ಮುದ್ರಣ ವ್ಯವಸ್ಥೆ, ಕುಡಿಯುವ ನೀರು, ಸಾರಿಗೆ, ವಸತಿ, ಲಿಫ್ಟ್ ನಿರ್ವಹಣೆ, ಅಗ್ನಿಶಾಮಕ ವ್ಯವಸ್ಥೆ, ಭದ್ರತೆ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.
ಸುವರ್ಣ ವಿಧಾನಸೌಧ ಸೇರಿದಂತೆ ಗಣ್ಯರು ವಾಸಿಸುವ ಕಡೆಗಳಲ್ಲಿ ಆಹಾರ ಗುಣಮಟ್ಟ ಪರಿಶೀಲನೆಗೆ ಪ್ರತ್ಯೇಕ ತಂಡಗಳನ್ನು ನಿಯೋಜಿಸಲಾಗುತ್ತದೆ. ಇದರೊಂದಿಗೆ ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ಆ್ಯಂಬ್ಯುಲೆನ್ಸ್ ಮತ್ತು ವೈದ್ಯಕೀಯ ತಂಡಗಳನ್ನು ಎಲ್ಲ ಕಡೆಗಳಲ್ಲಿ ನಿಯೋಜನೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ತಿಳಿಸಿದರು.
ಸುವರ್ಣ ವಿಧಾನಸೌಧದಲ್ಲಿ ಕುಡಿಯುವ ನೀರು ಸರಬರಾಜು, ಕಂಪ್ಯೂಟರ್ ನಿರ್ವಹಣೆ, ಊಟೋಪಹಾರ ಪೂರೈಕೆ ಸೇರಿದಂತೆ ಪ್ರತಿಯೊಂದು ವಿಭಾಗಕ್ಕೂ ಪ್ರತ್ಯೇಕ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜೀವಕುಮಾರ್ ಹುಲಕಾಯಿ ತಿಳಿಸಿದರು. ಇದಲ್ಲದೇ ಊಟೋಪಹಾರ, ಆಸನ ವ್ಯವಸ್ಥೆ, ಸ್ವಚ್ಛತೆ, ಇಂಟರ್ನೆಟ್ ಸೌಲಭ್ಯ ಸೇರಿದಂತೆ ಪ್ರತಿಯೊಂದು ಸಿದ್ಧತೆ ಕುರಿತು ಅವರು ವಿವರಿಸಿದರು.
ಸಾರಿಗೆ ಸೌಲಭ್ಯ ಒದಗಿಸುವುದಕ್ಕಾಗಿ ಬೇರೆ ಬೇರೆ ಜಿಲ್ಲೆಗಳಿಂದ ವಿವಿಧ ಬಗೆಯ ಮೂರುನೂರು ವಾಹನಗಳನ್ನು ತರಿಸಲು ಕ್ರಮ ಕೈಗೊಳ್ಳಲಾಗಿದೆ. ವಸತಿ, ಸಾರಿಗೆ ಮತ್ತು ಊಟೋಪಹಾರಕ್ಕೆ ಸಂಬಂಧಿಸಿದ ತಂಡಗಳು ಎಲ್ಲ ಸಿದ್ಧತೆಗಳನ್ನು ಮಾಡುತ್ತಿವೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ತಿಳಿಸಿದರು. ವಸತಿಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿದ್ದು, ಅಗತ್ಯ ವಸತಿಯನ್ನು ಒದಗಿಸಲಾಗುವುದು ಎಂದರು.
ನಗರ ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಅಧಿವೇಶನದ ವಿಶೇಷಾಧಿಕಾರಿ ಡಾ.ಸುರೇಶ್ ಇಟ್ನಾಳ, ಅಪರ ಜಿಲ್ಲಾಧಿಕಾರಿ ಡಾ.ಶಂಕರಪ್ಪ ವಣಕ್ಯಾಳ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನರನಾಥ್ ರೆಡ್ಡಿ, ಅಪರ ಪ್ರಾದೇಶಿಕ ಆಯುಕ್ತರಾದ ಗೀತಾ ಕೌಲಗಿ, ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ.ಕೊಡ್ಲಿ, ಪ್ರಾದೇಶಿಕ ಸಾರಿಗೆ ಇಲಾಖೆಯ ಜಂಟಿ ಆಯುಕ್ತರಾದ ಶೋಭಾ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜೀವಕುಮಾರ್ ಹುಲಕಾಯಿ, ವಾರ್ತಾಧಿಕಾರಿ ಗುರುನಾಥ ಕಡಬೂರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಬಾಲಕೃಷ್ಣ ತುಕ್ಕಾರ ಸೇರಿದಂತೆ ಸಮಿತಿಯ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.
ಚುನಾವಣೆ ಬಂದಾಗ ನಿಮ್ಮನ್ನು ಸುತ್ತುವರಿಯುವ ಅಭ್ಯರ್ಥಿಗಳು ಆಮೇಲೆ ಕಾಣೆಯಾಗಿಬಿಡುತ್ತಾರೆ. ಅಂತಹವರನ್ನು ದೂರವಿಡಿ -ಲಖನ್ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ