Latest

ಮಾ.14 ರಿಂದ ಬೆಳಗಾವಿಯಲ್ಲಿ ಮಹಿಳಾ ಚಲನಚಿತ್ರೋತ್ಸವ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ತರಕಾರಿ ಮಾರಲು ನಗರಕ್ಕೆ ಆಗಮಿಸುವ ಗ್ರಾಮೀಣ ಪ್ರದೇಶದ ಮಹಿಳೆಯರ ಘನತೆ ಕಾಪಾಡಲು ನೆರವಾಗುವ ಉದ್ಧೇಶದಿಂದ ಸರಕಾರಿ ಅಧಿಕಾರಿಗಳ “ಮೈತ್ರಿ” ಮಹಿಳಾ ಕ್ಲಬ್ ವತಿಯಿಂದ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಹಿಳಾ ಚಲನಚಿತ್ರೋತ್ಸವ ಏರ್ಪಡಿಸಲಾಗಿದೆ.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿರುವ “ಮೈತ್ರಿ” ಕ್ಲಬ್, ಬೆಳಗಾವಿ ನಗರದ ರವಿವಾರಪೇಟೆ ಹಾಗೂ ಕಂಬಳಿಕೂಟದಲ್ಲಿ ತರಕಾರಿ ಮಾರಾಟ ಮಾಡುವ ಮಹಿಳೆಯರಿಗಾಗಿಯೇ ಪ್ರತ್ಯೇಕ ಶೌಚಾಲಯವನ್ನು ನಿರ್ಮಿಸಿಕೊಡಲು ಮುಂದಾಗಿದೆ.

ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಆಗಮಿಸುವ ನೂರಾರು ಮಹಿಳೆಯರು ಪ್ರತಿದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ರವಿವಾರ ಪೇಟೆ ಹಾಗೂ ಕಂಬಳಿಕೂಟದ ಸುತ್ತಮುತ್ತಲು ತರಕಾರಿ ಮಾರಾಟ ಮಾಡುತ್ತಾರೆ. ಆದರೆ ಇವರಿಗಾಗಿ ಸಾರ್ವಜನಿಕ ಶೌಚಾಲಯ ಇಲ್ಲದಿರುವುದನ್ನು ಗಮನಿಸಿದ “ಮೈತ್ರಿ” ಕ್ಲಬ್, ಇವರಿಗಾಗಿ ಶೌಚಾಲಯ ನಿರ್ಮಿಸಿಕೊಡಲು ನಿರ್ಧರಿಸಿದೆ ಎಂದು ಕ್ಲಬ್ ನ ಪದಾಧಿಕಾರಿಗಳು ತಿಳಿಸಿದ್ದಾರೆ.

ಹಣ ಸಂಗ್ರಹಕ್ಕೆ ಮಹಿಳಾ ಚಲನಚಿತ್ರೋತ್ಸವ:

ಶೌಚಾಲಯ ನಿರ್ಮಾಣದ ಹಣವನ್ನು ಹೊಂದಿಸಲು ಮೂರು ದಿನಗಳ “ಮಹಿಳಾ ಚಲನಚಿತ್ರೋತ್ಸವ”ವನ್ನು ಮೈತ್ರಿ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದೆ.

ಮಹಿಳೆಯರ ಸಾಧನೆಯನ್ನು ಸಾರುವ ಹಾಗೂ ಮಹಿಳೆಯರೇ ಪ್ರಮುಖ ಭೂಮಿಕೆಯಲ್ಲಿರುವ ಕನ್ನಡ ಮತ್ತು ಹಿಂದಿ ಭಾಷೆಯ ಆಯ್ದ ಏಳು ಚಲನಚಿತ್ರಗಳನ್ನು ಮೂರು ದಿನಗಳ ಕಾಲ ಪ್ರದರ್ಶಿಸಲಾಗುತ್ತಿದೆ.

ಬೆಳಗಾವಿಯ ಶಿವಬಸವ ನಗರದಲ್ಲಿ ಇರುವ ಎಸ್.ಜಿ.ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜಿನ ಸೆಮಿನಾರ್ ಹಾಲ್ ನಂ.1 ರಲ್ಲಿ ಮಾರ್ಚ್ 14 ರಿಂದ ಮೂರು ದಿನಗಳ ಕಾಲ ಚಿತ್ರಪ್ರದರ್ಶನ ನಡೆಯಲಿದೆ.

ಮಾರ್ಚ್ 14 ರಂದು ಬೆಳಿಗ್ಗೆ 10.45 ಗಂಟೆಗೆ ಗುಲಾಬಿ ಟಾಕೀಸ್; ಮಧ್ಯಾಹ್ನ 1.40 ಗಂಟೆಗೆ ಮರ್ದಾನಿ -2 ಹಾಗೂ 4.20 ಗಂಟೆಗೆ ಟಾಯ್ಲೆಟ್ ಚಿತ್ರ ಪ್ರದರ್ಶನ‌ ನಡೆಯಲಿದೆ.

ಅದೇ ರೀತಿ ಮಾರ್ಚ್ 15 ರಂದು ಬೆಳಿಗ್ಗೆ 9.20 ಗಂಟೆಗೆ ಅಸ್ತಿತ್ವ; 12.30 ಗಂಟೆಗೆ ಚಾಕ್ ಆಂಡ್‌ ಡಸ್ಟರ್ ಹಾಗೂ ಮಧ್ಯಾಹ್ನ 3.30 ಗಂಟೆಗೆ ರಾಜೀ ಚಿತ್ರ ಪ್ರದರ್ಶನ ನಡೆಯಲಿದೆ.

ಮಹಿಳಾ ಚಲನಚಿತ್ರೋತ್ಸವದ ಕೊನೆಯ ದಿನವಾದ ಮಾರ್ಚ್ 16 ರಂದು ವಿಶೇಷ ಪ್ರದರ್ಶನದಲ್ಲಿ ಬೆಳಿಗ್ಗೆ 10.30 ಗಂಟೆಗೆ ಶಕುಂತಲಾ ದೇವಿ ಚಲನಚಿತ್ರವನ್ನು ಪ್ರದರ್ಶಿಸಲಾಗುವುದು. ಮಾರ್ಚ್ 16 ರಂದು ನಡೆಯಲಿರುವ ವಿಶೇಷ ಪ್ರದರ್ಶನಕ್ಕೆ ನಾಗನೂರು‌ ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಮುಖ್ಯ ಅತಿಥಿಗಳಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಫೆಮಿನಾ‌ಮಿಸ್ ಇಂಡಿಯಾ ಕರ್ನಾಟಕ-2020 ರಾಟಿ ಹುಲಜಿ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಈ ಎಲ್ಲ ಚಿತ್ರಗಳ ಪ್ರತಿ‌ ಪ್ರದರ್ಶನಕ್ಕೆ 200 ರೂಪಾಯಿ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಪ್ರದರ್ಶನದಿಂದ ಸಂಗ್ರಹವಾಗುವ ಹಣವನ್ನು ಮಹಿಳೆಯರ ಶೌಚಾಲಯ ನಿರ್ಮಾಣಕ್ಕೆ ಬಳಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಮೈತ್ರಿ ಕ್ಲಬ್‌ನ ಸಾಂಸ್ಕೃತಿಕ ನಿರ್ದೇಶಕರಾದ ಆರತಿ ಅಂಗಡಿ(ಮೊಬೈಲ್: 94488 54743) ಅಥವಾ ವಿನೋದ್ (ಮೊಬೈಲ್: 74117 36323) ಸಂಪರ್ಕಿಸಬಹುದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button