Kannada NewsLatest

ನಿಗದಿತ ಅವಧಿಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಿಇಓ ದರ್ಶನ್ ಸೂಚನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕುಡಿಯುವ ನೀರು ಪೂರೈಕೆ, ಮೂಲಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಚಾಲ್ತಿಯಲ್ಲಿರುವ ಎಲ್ಲ ಕಾಮಗಾರಿಗಳನ್ನು ಸಕಾಲಕ್ಕೆ ಪೂರ್ಣಗೊಳಿಸುವುದರ ಜತೆಗೆ ಬಿಲ್ ಕೂಡ ಪಾವತಿಸಬೇಕು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ದರ್ಶನ್ ಹೆಚ್.ವಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ (ಜ.29) ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಚಿಕ್ಕೋಡಿ ಶಾಲೆಗಳ ದುರಸ್ತಿ ಕಾಮಗಾರಿಗಳು ಸರಿಯಾದ ರೀತಿಯಲ್ಲಿ ಆಗಿಲ್ಲ ಎಂಬ ಸದಸ್ಯರ ದೂರಿಗೆ ಸಂಬಂಧಿಸಿದಂತೆ ಕ್ಷೇತ್ರಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರೊಂದಿಗೆ ಸ್ಥಳಗಳಿಗೆ ಹೋಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.

ಸಾರ್ವಜನಿಕ ಹಾಗೂ ಗ್ರಾಮೀಣ ಪ್ರದೇಶದ ವೈಯಕ್ತಿಕ ಶೌಚಾಲಯ ನಿರ್ಮಾಣದ ಬಗ್ಗೆ ಜಿಲ್ಲಾ ಪಂಚಾಯತ್ ಸದಸ್ಯರಿಂದ ಮಾಹಿತಿ ಪಡೆದ ಅವರು, ರೆಡಿಮೇಡ್ ಶೌಚಾಲಯಗಳ ಬದಲಾಗಿ ಗುಣಮಟ್ಟದ ಶೌಚಾಲಯ ನಿರ್ಮಾಣ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು

ಸಾರ್ವಜನಿಕರ ವೈಯಕ್ತಿಕ ಯಾವುದೇ ಸಾಲ ಇದ್ದರೂ ಶೌಚಾಲಯಕ್ಕೆ ಬಿಡುಗಡೆಯಾದ ಮೊತ್ತವನ್ನು ಕಡಿತ ಮಾಡಬಾರದು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಸ್ತುತ ಶೌಚಾಲಯ ನಿರ್ಮಾಣ ಮೊತ್ತ 12 ಸಾವಿರ ಆಗಿದ್ದು, ಮೊತ್ತವನ್ನು ಹೆಚ್ಚಿಸಬೇಕು ಮತ್ತು ವಾರ್ಷಿಕ ನಿರ್ದಿಷ್ಟ ಗುರಿ ನೀಡದೆ ಗುಣಮಟ್ಟದ ಶೌಚಾಲಯಕ್ಕೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯರು ಮನವಿ ಮಾಡಿಕೊಂಡರು ಇದಕ್ಕೆ ಸ್ಪಂದಿಸಿದ ದರ್ಶನ್ ಹೆಚ್.ವಿ ಅವರು ಮುಂದಿನ ದಿನಗಳಲ್ಲಿ ಬದಲಾವಣೆ ತರುವ ಬಗ್ಗೆ ಭರವಸೆ ನೀಡಿದರು.

ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ:

ಸಾರ್ವಜನಿಕರು ಹಾಗೂ ಸರಕಾರಿ ನೌಕರರಿಗೆ ಸರಿಯಾದ ಆರೋಗ್ಯ ಸೌಲಭ್ಯ ಕಲ್ಪಿಸಬೇಕು. ವೈದ್ಯಕೀಯ ಸೌಲಭ್ಯದ ಬಾಕಿ ಇರುವ ಬಿಲ್ ಕೂಡಲೇ ಪಾವತಿಸಬೇಕು ಎಂದು ಸಂಬಂದ ಪಟ್ಟ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಿಇಓ ಸೂಚನೆ ನೀಡಿದರು.

ಕಳೆದ ವರ್ಷ ಕೊವಿಡ್-19 ನಿಂದ ಅನೇಕ ಕಾಮಗಾರಿಗಳು ಪ್ರಗತಿ ಹೊಂದಿಲ್ಲ; ಹೊಸ ವರ್ಷ ಹುಮ್ಮಸ್ಸಿನಿಂದ ಎಲ್ಲರೂ ಒಟ್ಟಿಗೆ ಕೆಲಸ ಮಾಡೋಣ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಆಶಾ ಐಹೊಳೆ ಅವರು ಅಧಿಕಾರಿಗಳಿಗೆ ತಿಳಿಸಿದರು.

ಶಿಕ್ಷಣ, ನೀರು ಸರಬರಾಜು, ಮತ್ತು ಸಾರ್ವಜನಿಕ ಕಾಮಗಾರಿಗಳು ಕಳೆದ ವರ್ಷ ವಿಳಂಬವಾಗಿವೆ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಬಿಲ್ ಪಾವತಿಸಬೇಕು ಎಂದು ಹೇಳಿದರು.

ಅನುದಾನ ತಲುಪದ ಕ್ಷೇತ್ರಕ್ಕೆ ಅನುದಾನ ತಲುಪಿಸುವುದು ಜಿಲ್ಲಾ ಪಂಚಾಯತ್ ಜವಾಬ್ದಾರಿಯಾಗಿದೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ದೂರುಗಳು ಬರದಂತೆ ನಿಮ್ಮ ಕರ್ತವ್ಯವನ್ನು ನಿರ್ವಹಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯರು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button