ಬೆಳಗಾವಿ ಮಹಾನಗರ ಪಾಲಿಕೆ ಬಜೆಟ್ : ಶಾಸಕ ಅಭಯ ಪಾಟೀಲ ಮೊದಲ ಪ್ರತಿಕ್ರಿಯೆ; ಪೂರಕ ಬಜೆಟ್ ಮಂಡಿಸುವ ಘೋಷಣೆ
ಪ್ರಗತಿವಾಹಿನಿ ವಿಶೇಷ
ಆರೋಗ್ಯ ಮತ್ತು ಸ್ವಚ್ಛತೆಗೆ ಬಜೆಟ್ ನಲ್ಲಿ ಆದ್ಯತೆ ನೀಡಬೇಕಿತ್ತು. ಅದು ಆಗಿಲ್ಲ. ಈ ಬಜೆಟ್ ಬಗ್ಗೆ ನನಗೆ ಸಮಾಧಾನವಿಲ್ಲ. ಮೇಯರ್, ಉಪಮೇಯರ್ ಆಯ್ಕೆಯಾದ ನಂತರ ಪೂರಕ ಬಜೆಟ್ ಮಂಡಿಸುವ ಮೂಲಕ ಲೋಪ ಸರಿಪಡಿಸಲಾಗುವುದು
-ಅಭಯ ಪಾಟೀಲ, ಶಾಸಕ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಮಹಾನಗರ ಪಾಲಿಕೆಯ 2022 -23ನೇ ಸಾಲಿನ ಬಜೆಟ್ ನ್ನು ಪಾಲಿಕೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ 4 ದಿನದ ಹಿಂದೆ ಮಂಡಿಸಿದ್ದಾರೆ.
ಕಳೆದ ಸೆಪ್ಟಂಬರ್ ತಿಂಗಳಲ್ಲೇ ಪಾಲಿಕೆಗೆ ಚುನಾವಣೆ ನಡೆದಿದ್ದರೂ ಮೇಯರ್, ಉಪಮೇಯರ್ ಆಯ್ಕೆ ನಡೆಯದಿರುವುದರಿಂದ, ನೂತನ ಸದಸ್ಯರ ಪ್ರತಿಜ್ಞಾ ವಿಧಿ ಕಾರ್ಯಕ್ರಮ ನಡೆಯದಿರುವುದರಿಂದ ನೂತನ ಸದಸ್ಯರಿಗೆ ಇನ್ನೂ ಅಧಿಕಾರ ಪ್ರಾಪ್ತವಾಗಿಲ್ಲ. ಹಾಗಾಗಿ ಆಡಳಿತಾಧಿಕಾರಿಯೇ ಮುಂದುವರಿದಿದ್ದಾರೆ.
ಒಟ್ಟೂ 447 ಕೋಟಿ ರೂ. ವೆಚ್ಚದ ಬಜೆಟ್ ನ್ನು ಮಂಡಿಸಲಾಗಿದೆ. 6 ಲಕ್ಷ ರೂ. ಉಳಿತಾಯ ಮಾಡಲಾಗಿದೆ. ಈ ಬಜೆಟ್ ಕುರಿತಂತೆ ಶಾಸಕ ಅಭಯ ಪಾಟೀಲ ಇದೀಗ ಮೊದಲ ಬಾರಿಗೆ ಪ್ರಗತಿವಾಹಿನಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪಾಲಿಕೆ ಬಜೆಟ್ ಮಂಡನೆ ಕುರಿತು ಅಧಿಕಾರಿಗಳು ಶಾಸಕರೊಂದಿಗೆ ಸೂಕ್ತ ರೀತಿಯಲ್ಲಿ ಚರ್ಚೆ ನಡೆಸಿಲ್ಲ. ಒಂದೆರಡು ವಿಷಯಗಳ ಕುರಿತು ಅಭಿಪ್ರಾಯ ಕೇಳಿದ್ದರು. ಅವುಗಳನ್ನೂ ಸರಿಯಾಗಿ ಅಳವಡಿಸಿಲ್ಲ. ಈಗ ಮಂಡಿಸಿರುವ ಬಜೆಟ್ ಸಮಗ್ರವಾಗಿಲ್ಲ ಎಂದು ಅಭಯ ಪಾಟೀಲ ಹೇಳಿದ್ದಾರೆ.
ಆರೋಗ್ಯ ಮತ್ತು ಸ್ವಚ್ಛತೆಗೆ ಬಜೆಟ್ ನಲ್ಲಿ ಆದ್ಯತೆ ನೀಡಬೇಕಿತ್ತು. ಅದು ಆಗಿಲ್ಲ. ಈ ಬಜೆಟ್ ಬಗ್ಗೆ ನನಗೆ ಸಮಾಧಾನವಿಲ್ಲ. ಮೇಯರ್, ಉಪಮೇಯರ್ ಆಯ್ಕೆಯಾದ ನಂತರ ಪೂರಕ ಬಜೆಟ್ ಮಂಡಿಸುವ ಮೂಲಕ ಬಜೆಟ್ ಸರಿಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ನಿರಂತರ ನೀರು ಪೂರೈಕೆ ಯೋಜನೆ, ಒಳಚರಂಡಿ ಯೋಜನೆಗಳನ್ನು ನೇರವಾಗಿ ಸರಕಾರದಿಂದ ಮಂಜೂರು ಮಾಡಿಸಿದ್ದೇನೆ. ಇವುಗಳ ಹೊರೆ ಪಾಲಿಕೆಯ ಮೇಲಿಲ್ಲ. ಇವುಗಳನ್ನು ಹೊರತುಪಡಿಸಿ ಸರಿಯಾದ ಆದ್ಯತೆಯ ಮೇಲೆ ಬಜೆಟ್ ಮಂಡಿಸಬೇಕಿತ್ತು. ಆರೋಗ್ಯ ಮತ್ತು ಸ್ವಚ್ಛತೆ ಬಹು ಮುಖ್ಯವಾಗಿದೆ. ಇವುಗಳ ಆಧಾರದ ಮೇಲೆ ಪಾಲಿಕೆಯ ಪೂರಕ ಬಜೆಟ್ ಮಂಡಿಸಲಾಗುವುದು ಎಂದು ಅಭಯ ಪಾಟೀಲ ತಿಳಿಸಿದ್ದಾರೆ.
2022-23 ನೇ ಸಾಲಿನ ಬೆಳಗಾವಿ ಮಹಾನಗರ ಪಾಲಿಕೆಯ ಬಜೆಟ್ ಮಂಡನೆ: ಇಲ್ಲಿದೆ ಸಮಗ್ರ ವಿವರ
ಬೆಳಗಾವಿ ಮನಪಾ: ಚುನಾಯಿತ ಪ್ರತಿನಿಧಿಗಳಿದ್ದರೂ ಅಧಿಕಾರಿಗಳಿಂದ ಬಜೆಟ್ ಮಂಡನೆ!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ