ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ನಗರದಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್ ಆರಂಭಿಸಲು ರಕ್ಷಣಾ ಇಲಾಖೆಯ ವಶದಲ್ಲಿರುವ ಜಾಗವನ್ನು ನೀಡುವಂತೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮತ್ತು ರಾಜ್ಯಸಭೆಯ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ನೇತೃತ್ವದ ಶಾಸಕರ ನಿಯೋಗ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಮನವಿ ಸಲ್ಲಿಸಿದೆ.
ಬೆಂಗಳೂರಿನಲ್ಲಿ ಮಂಗಳವಾರ ನಿಯೋಗ ರಾಜನಾಥ ಸಿಂಗ್ ಅವರನ್ನು ಭೇಟಿಯಾಗಿತ್ತು.
ಈ ಕುರಿತು ಪ್ರಗತಿವಾಹಿನಿಗೆ ಮಾಹಿತಿ ನೀಡಿರುವ ಸಚಿವ ರಮೇಶ ಜಾರಕಿಹೊಳಿ, ಹಿಂಡಾಲ್ಕೋ ಪಕ್ಕದಲ್ಲಿ ಖಾಲಿ ಇರುವ, ರಕ್ಷಣಾ ಇಲಾಖೆಯ ವಶದಲ್ಲಿರುವ ಜಾಗವನ್ನು ಐಟಿ ಬಿಟಿ ಕೇಂದ್ರ ಸ್ಥಾಪಿಸಲು ಬಿಟ್ಟುಕೊಡುವಂತೆ ಮನವಿ ಮಾಡಲಾಗಿದೆ. ರಾಜನಾಥ ಸಿಂಗ್ ಅವರು ಪೂರಕವಾಗಿ ಪ್ರಕ್ರಿಯಿಸಿದ್ದಾರೆ ಎಂದು ತಿಳಿಸಿದರು.
ಡಾ.ಪ್ರಭಾಕರ ಕೋರೆ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮಹಾಂತೇಶ ದೊಡ್ಡಗೌಡರ್, ಮಹೇಶ್ ಕುಮಟಳ್ಳಿ, ಮಹಾದೇವಪ್ಪ ಯಾದವಾಡ ಕೂಡ ಜೊತೆಗಿದ್ದರು ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.
ಅಭಯ ಪಾಟೀಲ ಹೇಳಿಕೆ
ಈ ಕುರಿತು ಶಾಸಕ ಅಭಯ ಪಾಟೀಲ ಸಹ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಅದರ ಪೂರ್ಣ ವಿವರ ಹೀಗಿದೆ –
ಬೆಳಗಾವಿ ನಗರದ 774 ಎಕರೆಯಲ್ಲಿ ಐ. ಟಿ. ಪಾರ್ಕ ನಿರ್ಮಾಣ ಮಾಡಲು ಶಾಸಕ ಅಭಯ ಪಾಟೀಲ ಇವರು ಕಳೆದ ವಿಧಾನಸಭೆಯ ಅಧಿವೇಶನದಲ್ಲಿ ಖಾಸಗಿ ನಿರ್ಣಯ ಮಂಡಿಸಿದ್ದರು. ಸದನದಲ್ಲಿ ಸದರಿ ಜಾಗೆಯಲ್ಲಿ ಐ. ಟಿ. ಪಾರ್ಕ ನಿರ್ಮಾಣಕ್ಕೆ ಸರಕಾರವು ಒಪ್ಪಿಗೆ ಸೂಚಿಸಿತ್ತು. ಇದರ ಅನುಗುಣವಾಗಿ ಉಪ ಮುಖ್ಯಮಂತ್ರಿಗಳು ಹಾಗೂ ಐ. ಟಿ. ಬಿ. ಟಿ. ಮಂತ್ರಿ ಅಶ್ವಥ್ ನಾರಾಯಣ ಕೇಂದ್ರದ ಮಾನ್ಯ ರಕ್ಷಣಾ ಸಚಿವರಾದ ರಾಜನಾಥ ಸಿಂಗ ರವರನ್ನು ಭೆಟ್ಟಿ ಮಾಡಿ, ಐ. ಟಿ. ಪಾರ್ಕ ನಿರ್ಮಾಣ ಮಾಡಲು ಸಹಕಾರ ಕೋರಿದ್ದರು.
ಇಂದು ದಿನಾಂಕ: 02-02-2021 ರಂದು ಬೆಳಗಾವಿ ಜಿಲ್ಲೆಯ ಶಾಸಕರ ನಿಯೋಗವು ಬೆಳಗಾವಿ ಜಿಲ್ಲೆಯ ಉಸ್ತುವರಿ ಸಚಿವ ರಮೇಶ ಜಾರಕಿಹೋಳಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ರಾಜನಾಥ ಸಿಂಗ ರವರನ್ನು ಭೆಟ್ಟಿಯಾಗಿ ಐ. ಟಿ. ಪಾರ್ಕ ನಿರ್ಮಾಣದ ಕುರಿತು ಚರ್ಚಿಸಿದರು.
ನಂತರ ಅಭಯ ಪಾಟೀಲ ಮಾತನಾಡುತ್ತಾ, ರಕ್ಷಣಾ ಮಂತ್ರಿಗಳಿಗೆ ಬೆಳಗಾವಿ ನಗರದ 774 ಎಕರೆ ಜಾಗೆಯು ಕರ್ನಾಟಕ ಸರಕಾರದ್ದಾಗಿದ್ದು, ರಕ್ಷಣಾ ಇಲಾಖೆಯ ಅಧೀನದಲ್ಲಿರುವುದರಿಂದ ಅದನ್ನು ಶೀಘ್ರವೇ ಕರ್ನಾಟಕ ಸರಕಾರಕ್ಕೆ ಹಸ್ತಾಂತತರಿಸಿ, ಬೃಹತd ಪ್ರಮಾಣದ ಐ. ಟಿ. ಪಾರ್ಕ ನಿರ್ಮಾಣ ಮಾಡಲು ಸಹಕರಿಸುವಂತೆ ಮತ್ತು ಐ. ಟಿ. ಪಾರ್ಕ ನಿರ್ಮಾಣವಾದಲ್ಲಿ ಉತ್ತರ ಕರ್ನಾಟಕದ ಯುವಕರಿಗೆ 1 ಲಕ್ಷ ಉದ್ಯೋಗಾವಕಾಶಗಳು ಲಭಿಸುತ್ತವೆಂದು ತಿಳಿಸಿದರು.
ಸುಮಾರು 50 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಸಹಿ ಮಾಡಿದ ಮನವಿ ಪತ್ರವನ್ನು ಸಲ್ಲಿಸಲಾಯಿತು. ಕೇಂದ್ರ ಮಂತ್ರಿಗಳು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ, ಶೀಘ್ರ ಕ್ರಮಕೈಕೊಳ್ಳಲಾಗುವುದೆಂದು ಆಶ್ವಾಸನೆ ನೀಡಿದರು.
ಸೈನಿಕ ಶಾಲೆ ಪ್ರಾರಂಭಿಸಲು ಒತ್ತಾಯ
ಇದೇ ವೇಳೆ ಬೆಳಗಾವಿಯಲ್ಲಿ ಸೈನಿಕ ಶಾಲೆ ಆರಂಭಿಸುವಂತೆಯೂ ನಿಯೋಗ ಮನವಿ ಮಾಡಿತು.
ನಿನ್ನೆಯ ಕೇಂದ್ರ ಬಜೆಟ್ ನಲ್ಲಿ ಘೋಷಿಸಿದಂತೆ ದೇಶದಾದ್ಯಂತ ಸೈನಿಕ ಶಾಲೆಗಳನ್ನು ಪ್ರಾರಂಭಿಸುವ ಪ್ರಸ್ತಾವನೆಗೆ ಹರ್ಷ ವ್ಯಕ್ತಪಡಿಸಿದ ನಿಯೋಗ, ಕಿತ್ತೂರು ರಾಣಿ ಚೆನ್ನಮ್ಮ ಅವರ ಹೆಸರಿನಲ್ಲಿ ಹೆಣ್ಣು ಮಕ್ಕಳಿಗೆ ಮತ್ತು ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ಗಂಡು ಮಕ್ಕಳಿಗೆ ಬೆಳಗಾವಿ ಭಾಗದಲ್ಲಿ ಆದ್ಯತೆಯ ಮೇರೆಗೆ ಸೈನಿಕ ಶಾಲೆ ಪ್ರಾರಂಭಿಸಬೇಕೆಂದು ಮನವಿ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ