ಸಿಎಂ ಬೊಮ್ಮಾಯಿ ಭೇಟಿಯಾದ ಬೆಳಗಾವಿ ನಿಯೋಗ; ಒಂದು ಗಂಟೆ ಕಾಲ ಚರ್ಚಿಸಿದ್ದೇನು?; ದೊರೆಯ ಬಳಿ ದೂರಿದ್ದೇನು? ಹಾಜರಿದ್ದವರ್ಯಾರು? ಕೈಕೊಟ್ಟವರ್ಯಾರು? ಇಲ್ಲಿದೆ ಸಮಗ್ರ ವಿವರ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಳಗಾವಿ ಶಾಸಕರು, ಸಚಿವರ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶುಕ್ರವಾರ ಬೆಂಗಳೂರಿನಲ್ಲಿ ಭೇಟಿಯಾಗಿದೆ.
ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಭೇಟಿಗೆ ಸಮಯ ನಿಗದಿಯಾಗಿತ್ತು. ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ನಿಯೋಗ ಚರ್ಚಿಸಲು ಸಮಯ ಪಡೆಯಲಾಗಿತ್ತು.
ಆದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗಳು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ 2 ಗಂಟೆಗೆ ಯಡಿಯೂರಪ್ಪ ಅವರ ಮನೆಗೆ ತೆರಳಿದರು. ಅಲ್ಲಿಂದ ಬರುವಾಗ ಸಮಯವಾಯಿತು. ಜೊತೆಗೆ ಬೊಮ್ಮಾಯಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಹಾಗೂ ಬೊಮ್ಮಾಯಿ ನೇತೃತ್ವದ ಸರಕಾರ 6 ತಿಂಗಳು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಶುಭಾಷಯ ಕೋರಲು ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ಇದರಿಂದಾಗಿ 3 ಗಂಟೆಗೆ ಭೇಟಿಯಾದ ನಿಯೋಗ ಸುಮಾರು ಒಂದು ಗಂಟೆಗಳ ಕಾಲ ಕ್ಲೋಸ್ ಡೋರ್ ಮೀಟಿಂಗ ಮಾಡಿತು. ಮಾಜಿ ಸಚಿವ ರಮೇಶ ಜಾರಕಿಹೊಳಿ ಮತ್ತು ಶಾಸಕ, ಕೆಎಂಎಫ್ ಚೇರಮನ್ ಬಾಲಚಂದ್ರ ಜಾರಕಿಹೊಳಿ ವಿರುದ್ಧ ಮುಖ್ಯಮಂತ್ರಿಗಳ ಬಳಿ ನಿಯೋಗದ ಸದಸ್ಯರು ದೂರು ಸಲ್ಲಿಸಿದರು.
ಲೋಕಸಭಾ ಚುನಾವಣೆ, ವಿಧಾನ ಪರಿಷತ್ ಚುನಾವಣೆ, ಪಟ್ಟಣ ಪಂಚಾಯಿತಿ ಚುನಾವಣೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಜಾರಕಿಹೊಳಿ ಸಹೋದರರಿಂದ ಪಕ್ಷಕ್ಕೆ ಮುಜುಗರ ಮತ್ತು ಹಿನ್ನಡೆಯಾಗಿದೆ. ಹಾಗಾಗಿ ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹಾನಿ ಅನುಭವಿಸಬೇಕಾದ ಅನಿವಾರ್ಯತೆ ಬರಲಿದೆ. ಈ ಹಿನ್ನೆಲೆಯಲ್ಲಿ ನಾವೆಲ್ಲ ಸೇರಿ ಚರ್ಚೆ ನಡೆಸಿದ್ದೇವೆ. 2023ರ ಚುನಾವಣೆಯಲ್ಲಿ ಪಕ್ಷ ಜಿಲ್ಲೆಯಲ್ಲಿ ಗೆಲುವು ಸಾಧಿಸಬೇಕೆಂದರೆ ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಎಲ್ಲವನ್ನೂ ಶಾಂತವಾಗಿ ಆಲಿಸಿದ ಬೊಮ್ಮಾಯಿ, ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಎಲ್ಲರೂ ಸೇರಿ ಪಕ್ಷ ಕಟ್ಟಬೇಕಿದೆ. ಆ ದಿಸೆಯಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಲು ಅಗತ್ಯ ಕ್ರಮ ತೆಗೆದುಕೊಳ್ಳೋಣ ಎನ್ನುವ ಭರವಸೆಯನ್ನು ನೀಡಿದರು.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಮಂಜುರಾಗಿರುವ 200 ಕೋಟಿ ರೂಗಳನ್ನು ತಕ್ಷಣ ಬಿಡುಗಡೆ ಮಾಡಬೇಕು. ಬೆಳಗಾವಿ – ಕಿತ್ತೂರು- ಧಾರವಾಡ ರೈಲ್ವೆ ಲೈನ್ ಕಾಮಗಾರಿ ತ್ವರಿತಗೊಳ್ಳಲು ರಾಜ್ಯ ಸರಕಾರ ಮುಂದಾಗಬೇಕು, ಆದಿ ಜಾಂಬವ ಅಭಿವೃದ್ಧಿ ನಿಗಮ ಮತ್ತು ತಾಂಡಾ ಅಭಿವೃದ್ಧಿ ನಿಗಮಗಳಿಗೆ ಹೆಚ್ಚಿನ ಅನುದಾನ ನೀಡಬೇಕು, ಸಂಗೊಳ್ಳಿ ರಾಯಣ್ಣ ವಸತಿ ಶಾಲೆ ಕಟ್ಟಡ ಕಾಮಗಾರಿ ಆರಂಭಕ್ಕೆ ಕ್ರಮ ತೆಗೆದುಕೊಳ್ಳಬೇಕು ಎನ್ನುವ ವಿಷಯಗಳನ್ನೂ ಮುಖ್ಯಮಂತ್ರಿಗಳ ಮುಂದಿಡಲಾಯಿತು.
ಸಚಿವ ಉಮೇಶ ಕತ್ತಿ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ ಪಾಟೀಲ, ಪಿ.ರಾಜೀವ, ದುರ್ಯೋಧನ ಐಹೊಳೆ, ಮಹಾದೇಪ್ಪ ಯಾದವಾಡ, ಪಿ.ರಾಜೀವ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ನಿಯೋಗದಲ್ಲಿದ್ದರು.
ಶಾಸಕ ಮಹಾಂತೇಶ ದೊಡ್ಡಗೌಡರಿಗೆ ಅನಾರೋಗ್ಯದ ಕಾರಣ ಬಂದಿರಲಿಲ್ಲ. ಸಚಿವೆ ಶಶಿಕಲಾ ಜೊಲ್ಲೆಗೆ ಕೊರೋನಾ ಪಾಸಿಟಿವ್ ಬಂದಿದ್ದರಿಂದ ಆಗಮಿಸಲಿಲ್ಲ. ಶಾಸಕ ಅನಿಲ ಬೆನಕೆಯವರ ತಾಯಿಯ ಅನಾರೋಗ್ಯದ ಕಾರಣದಿಂದ ಬೆಂಗಳೂರಿಗೆ ಹೋದವರು ನಿನ್ನೆಯೇ ವಾಪಸ್ಸಾದರು. ಡಾ.ಪ್ರಭಾಕರ ಕೋರೆ ಆಗಮಿಸರಲಿಲ್ಲ. ಶಾಸಕ ಆನಂದ ಮಾಮನಿ ಬೆಂಗಳೂರಿನಲ್ಲೇ ಇದ್ದರೂ ನಿಯೋಗದ ಜೊತೆ ಹೋಗಿರಲಿಲ್ಲ.
ಹೇಳಬೇಕಾಗಿದ್ದನ್ನೆಲ್ಲ ಸ್ಪಷ್ಟವಾಗಿ ಮುಖ್ಯಮಂತ್ರಿ ಬಳಿ ಹೇಳಿದ್ದೇವೆ. ಎಲ್ಲವನ್ನೂ ಸರಿಪಡಿಸಬೇಕೆನ್ನುವ ವಿನಂತಿಯನ್ನು ಮಾಡಿದ್ದೇವೆ. ಅವರು ಎಲ್ಲವನ್ನೂ ಕೇಳಿಸಿಕೊಂಡಿದ್ದಾರೆ.
-ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯ
ಯಡಿಯೂರಪ್ಪನವರ ಮೊಮ್ಮಗಳ ಆತ್ಮಹತ್ಯೆ ಕಾರಣದಿಂದಾಗಿ ಹಾಗೂ ಮುಖ್ಯಮಂತ್ರಿಗಳ ಜನ್ಮದಿನದ ಕಾರಣದಿಂದಾಗಿ ಕೇವಲ ಅಭಿವೃದ್ಧಿ ವಿಷಯವನ್ನಷ್ಟೇ ಇಂದು ಚರ್ಚಿಸಿದ್ದೇವೆ. ಉಳಿದ ವಿಷಯಗಳನ್ನು ಇನ್ನೊಮ್ಮೆ ಚರ್ಚಿಸಬೇಕೆಂದು ನಿರ್ಧರಿಸಿದ್ದೇವೆ.
-ಲಕ್ಷ್ಮಣ ಸವದಿ, ಮಾಜಿ ಡಿಸಿಎಂ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ