ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಉತ್ತರ ಕರ್ನಾಟಕದ ಬಹುದಿನಗಳ ಬೇಡಿಕೆಯಾಗಿದ್ದ ಬೆಳಗಾವಿ-ಧಾರವಾಡ -ಹುಬ್ಬಳ್ಳಿ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿರುವುದು ಅತ್ಯಂತ ಹರ್ಷವನ್ನುಂಟುಮಾಡಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ತಿಳಿಸಿದ್ದಾರೆ.
ಬೆಳಗಾವಿ -ಧಾರವಾಡ-ಹುಬ್ಬಳ್ಳಿ ಮಹಾನಗರಗಳು ವಾಣಿಜ್ಯ, ಔದ್ಯಮಿಕವಾಗಿ ಶರವೇಗದಲ್ಲಿ ಬೆಳೆಯುತ್ತಿವೆ. ಇಂತಹ ಘಳಿಗೆಯಲ್ಲಿ ಈ ಭಾಗದ ಸಾರಿಗೆ ವ್ಯವಸ್ಥೆಯಲ್ಲಿಯೂ ಕ್ರಾಂತಿಕಾರಿ ಬದಲಾವಣೆಯಾದರೆ ಅಭಿವೃದ್ಧಿಗೆ ಮತ್ತಷ್ಟು ಪೂರಕವಾಗುವುದರಲ್ಲಿ ಸಂದೇಹವಿಲ್ಲ. ಇದರೊಂದಿಗೆ ಜನರ ಆರ್ಥಿಕಮಟ್ಟವು ಪ್ರಗತಿ ಹೊಂದುವುದು. ನಿತ್ಯ ಬೆಳಗಾವಿ-ಧಾರವಾಡ-ಹುಬ್ಬಳ್ಳಿಯಿಂದ ಸಂಚರಿಸುವ ಪ್ರಯಾಣಿಕರಿಗೂ ಅನುಕೂಲವಾಗುವುದು.
ಈ ಕುರಿತು ಕೇಂದ್ರ ಸರ್ಕಾರವು ಮಂಜೂರಾತಿಗೆ ಒಪ್ಪಿಗೆ ನೀಡಿರುವುದು ಹರ್ಷತಂದಿದೆ. ೭೩ ಕಿ.ಮೀ. ಉದ್ದದ ಬೆಳಗಾವಿ -ಧಾರವಾಡ ನೇರ ರೈಲು ಮಾರ್ಗದ ಕಾಮಗಾರಿಯು ಶೀಘ್ರವಾಗಿ ಪೂರ್ಣಗೊಳ್ಳಲಿ.
ಇಲ್ಲಿಯವರೆಗೆ ಹಲವಾರು ಜನ ರಾಜ್ಯ ರೈಲ್ವೆ ಸಚಿವರಾಗಿ ಹೋಗಿದ್ದರೂ ಯಾರೊಬ್ಬರೂ ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸಿರಲಿಲ್ಲ, ಆದರೆ ರೈಲ್ವೆ ರಾಜ್ಯ ಸಚಿವರಾದ ಸುರೇಶ ಅಂಗಡಿ ಈ ಭಾಗದ ಜನರ ಧ್ವನಿಯಾಗಿ ಪ್ರಧಾನಿಗಳಿಂದ ಪ್ರಸ್ತುತ ರೈಲು ಮಾರ್ಗ ನಿರ್ಮಾಣಕ್ಕೆ ಮಂಜೂರಾತಿ ತಂದಿರುವುದು ಆನಂದ ಹೆಚ್ಚಿಸಿದೆ. ಅವರಿಗೆ ಸಮಸ್ತ ಉತ್ತರ ಕರ್ನಾಟಕದ ಜನತೆಯ ಪರವಾಗಿ ಹಾಗೂ ವೈಯಕ್ತಿಕವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು, ಕೃತಜ್ಞತೆಗಳನ್ನು ಸಲ್ಲಿಸುತ್ತೇನೆಂದು ಡಾ.ಪ್ರಭಾಕರ ಕೋರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ -ಕಿತ್ತೂರು – ಧಾರವಾಡ ರೈಲ್ವೆ ಯೋಜನೆಗೆ ಕೇಂದ್ರ ಒಪ್ಪಿಗೆ – ಸುರೇಶ ಅಂಗಡಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ