Belagavi NewsBelgaum NewsKannada NewsKarnataka NewsNationalPolitics

ಬೆಳಗಾವಿ -ಧಾರವಾಡ ರೈಲು ಮಾರ್ಗ ನಿರ್ಮಾಣ: ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ವಿ ಸೋಮಣ್ಣ ಸೂಚನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಿತ್ತೂರು ಮಾರ್ಗವಾಗಿ ಬೆಳಗಾವಿ-ಧಾರವಾಡ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದೆ. ಈ ಕಾಮಗಾರಿ ಅನುಷ್ಠಾನಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ಸಚಿವರಾದ ವಿ.ಸೋಮಣ್ಣ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಗುರುವಾರ (ನ.14) ಬೆಳಗಾವಿ-ಧಾರವಾಡ ರೈಲು ಮಾರ್ಗ ನಿರ್ಮಾಣ ಪ್ರಗತಿ ಕಾರ್ಯದ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೂತನ ರೈಲು ಮಾರ್ಗ ಕಾಮಗಾರಿ ಅನುಷ್ಠಾನಕ್ಕಾಗಿ ಧಾರವಾಡ ಜಿಲ್ಲಾ ವ್ಯಾಪ್ತಿಯ 42 ಎಕರೆ ಮಾತ್ರ ಸಮಸ್ಯೆಯಾಗುತ್ತಿದೆ. ಕೂಡಲೇ ಇಂತಹ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸ್ಥಳೀಯರೊಂದಿಗೆ ಆತ್ಮೀಯತೆಯಿಂದ ಚರ್ಚಿಸಿ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ವಹಿಸುವಂತೆ ತಿಳಿಸಿದರು.

ಕಿತ್ತೂರು ಮಾರ್ಗವಾಗಿ ಬೆಳಗಾವಿ-ಧಾರವಾಡ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಮಾಜಿ ಸಂಸದರು ಜಾರಿಗೆ ತಂದು ಸುಮಾರು 3 ವರ್ಷಗಳು ಕಳೆದಿವೆ. ಧಾರವಾಡ ಬೆಳಗಾವಿ ಜಿಲ್ಲಾಧಿಕಾರಿಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವದರ ಮೂಲಕ ಕೂಡಲೇ ಸರ್ವೇ ಕಾರ್ಯ ಪೂರ್ಣಗೊಳಿಸಲು ಮುಂದಾಗಬೇಕು.

ಕಿತ್ತೂರು ಮಾರ್ಗವಾಗಿ ಬೆಳಗಾವಿ-ಧಾರವಾಡ ರೈಲು ಮಾರ್ಗ ನಿರ್ಮಾಣಕ್ಕೆ ಈಗಾಗಲೇ ಭೂಮಿ ಸ್ವಾಧೀನ ಪ್ರಕ್ರಿಯೆ ಹಂತದಲ್ಲಿದೆ. ಮಮ್ಮಿಗಟ್ಟಿಯಲ್ಲಿ ಸ್ವಾಧೀನ ಕ್ರಿಯೆಯಲ್ಲಿ ಸುಮಾರು ದಿನಗಳಿಂದ ಸಮಸ್ಯೆ ಎದುರಾಗಿದ್ದು, ಸ್ಥಳೀಯರ ಜೊತೆ ಚರ್ಚಿಸಿ ಇತ್ಯರ್ಥ ಪಡಿಸಬೇಕು ಎಂದು ಸಚಿವ ವಿ.ಸೋಮಣ್ಣ ಹೇಳಿದರು.

ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜಿ ಅವರು ವಿಡಿಯೋ ಸಂವಾದ ಮೂಲಕ ಮಾತನಾಡಿ ಅಗತ್ಯ ರೈಲು ಮಾರ್ಗಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹುಬ್ಬಳ್ಳಿ ಧಾರವಾಡ ವ್ಯಾಪ್ತಿಗೆ 288 ಎಕರೆ ಒಳಪಟ್ಟಿದೆ ಅಳತೆ ಕಾರ್ಯ ಪ್ರಗತಿಯಲ್ಲಿದೆ ಆದರೆ ಅದರಲ್ಲಿ 42 ಎಕರೆ ಭೂಸ್ವಾಧೀನ ಪ್ರಕ್ರಿಯೆ ಸ್ಥಳೀಯ ಸಾರ್ವಜನಿಕರು ಹಾಗೂ ರೈತರಿಂದ ತಡೆ ಹಿಡಿಯಲಾಗಿದೆ. ಹಾಗಾಗಿ ಸ್ಥಳೀಯರೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಶೀಘ್ರದಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಮಾತನಾಡಿ ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಭೂ ಮಾಪನ ಕಾರ್ಯ ಪೂರ್ಣಗೊಳಿಸಿದಲ್ಲಿ, ಮುಂದಿನ ದಿನಗಳಲ್ಲಿ ರೈಲು ಸಂಚಾರಕ್ಕೆ ಅಡೆ- ತಡೆ ಉಂಟಾಗುವ ಸಾಧ್ಯತೆಗಳಿವೆ. ಹಾಗಾಗಿ ರೈಲ್ವೆ ಅಧಿಕಾರಿಗಳು, ಧಾರವಾಡ ಜಿಲ್ಲಾಧಿಕಾರಿಗಳು ಸ್ಥಳೀಯ ರೈತರೊಂದಿಗೆ ಆತ್ಮೀಯತೆಯಿಂದ ವರ್ತಿಸಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ರೈಲು ಮಾರ್ಗ ನಿರ್ಮಾಣಕ್ಕೆ ಬೆಳಗಾವಿ ವ್ಯಾಪ್ತಿಯಲ್ಲಿ ಅಡೆತಡೆಗಳಿಲ್ಲ

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 600.8 ಎಕರೆ ಜಮೀನು ಇದೆ. ಇದರಲ್ಲಿ ಎರಡು ಭಾಗವಾಗಿ ವಿಂಗಡನೆ ಮಾಡಲಾಗಿದೆ. 444 ಮತ್ತು 155 ಎಕರೆ ಬೇರ್ಪಡಿಸಲಾಗಿದೆ. ಕಿತ್ತೂರು, ಹುಲಿಕಟ್ಟಿ, ಎಂ.ಕೆ.ಹುಬ್ಬಳ್ಳಿ, ಬೆಳವಡಿ ಮತ್ತು ಕರವಿನಕೊಪ್ಪ ಮಾರ್ಗವಾಗಿ ಬೆಳಗಾವಿ ಧಾರವಾಡ ರೈಲ್ವೆ ಮಾರ್ಗವಾಗಿ ರೈಲು ಮಾರ್ಗ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದರು.

155 ಎಕರೆಯಲ್ಲಿ 8 ಗ್ರಾಮಗಳು ಬರುತ್ತವೆ. ರೈಲು ಮಾರ್ಗಗಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಸದ್ಯಕ್ಕೆ ಸರಿ ಸುಮಾರು 99 ಎಕರೆ ಜಿ.ಎಂ.ಸಿ ವರದಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸದ್ಯದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಭೂ ಸ್ವಾಧೀನ ಪ್ರಕ್ರಿಯೆಗೆ ಸರ್ಕಾರದಿಂದ ಅನುಮತಿ ಬಂದ ಕೂಡಲೇ ಟೆಂಡರ್ ಕರೆಯಲಾಗುವುದು. ಡಿಸೆಂಬರ ಅಂತ್ಯದೊಳಗಾಗಿ ರೈಲು ಮಾರ್ಗಕ್ಕಾಗಿ ಬೇಕಾದ ಭೂಮಿಯ ಪ್ರತಿಶತ 80 ರಷ್ಟು ಭೂಮಿಯನ್ನು ಒದಗಿಸಲಾಗುವದು ಎಂದು ಹೇಳಿದರು.

ಖಾನಾಪೂರ ದೇಸೂರು ಮಾರ್ಗವಾಗಿ ಬರುವ ರೈಲ್ವೆ ಮಾರ್ಗದ ಮೇಲ್ಲೇತುವೆ ಮತ್ತು ಕೆಳ ಸೇತುವೆ ನಿರ್ಮಾಣಕ್ಕೆ ಯಾವುದೇ ಸಮಸ್ಯೆಗಳಿಲ್ಲ. ಒಂದು ವೇಳೆ ಕಂಡುಬಂದರೆ ಅಂತಹವುಗಳನ್ನು ಸಮೀಕ್ಷೆ ನಡೆಸಿ ಸಮಸ್ಯೆಗಳನ್ನು ಪರಿಹರಿಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ರೈಲ್ವೆ ವಿಭಾಗೀಯ ನಿರ್ವಾಹಕ ಹರ್ಷ ಕಾರೆ, ಹಿರಿಯ ರೈಲ್ವೆ ವಿಭಾಗೀಯ ನಿರ್ವಾಹಕ ಸಂತೋಷ ಹೆಗಡೆ, ಕಟ್ಟಡ ವಿಭಾಗದ ಮುಖ್ಯ ಅಭಿಯಂತರ ಸದ್ಧರ್ಮದೇವ, ರೈಲ್ವೆ ಅಧಿಕಾರಿಗಳು, ಕೆಐಡಿಬಿ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button