ಪ್ರಗತಿವಾಹಿನಿ ಸುದ್ದಿ, ಗೋಕಾಕ: ಪ್ರತಿ ಚುನಾವಣೆಯಲ್ಲಿ ನಮಗೆ ಮತ ನೀಡಿ ಆಶೀರ್ವದಿಸುತ್ತಿರುವ ಮತದಾರ ಪ್ರಭುಗಳಿಗೆ ಸದಾ ಚಿರಋಣಿಯಾಗಿದ್ದೇವೆ. ಅವರು ಮಾಡುತ್ತಿರುವ ಉಪಕಾರವನ್ನು ಯಾವ ಕಾಲಕ್ಕೂ ತೀರಿಸಲು ಸಾಧ್ಯವಿಲ್ಲ.
ಸದಾ ನಮ್ಮನ್ನು ಹರಸಿ, ಬೆಂಬಲಿಸುತ್ತಿರುವ ಇಂತಹ ಮತದಾರರನ್ನು ಪಡೆದಿರುವುದು ನಮ್ಮ ಪುಣ್ಯವೆಂದು ಕೆಎಮ್‌ಎಫ್ ಅಧ್ಯಕ್ಷ ಮತ್ತು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ರವಿವಾರದಂದು ಇಲ್ಲಿಯ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಗೋಕಾಕ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.
ಜನರ ಪ್ರೀತಿ-ವಿಶ್ವಾಸಕ್ಕೆ ಆಭಾರಿಯಾಗಿದ್ದೇವೆ. ಜನರು ನೀಡುತ್ತಿರುವ ಅಭೂತಪೂರ್ವ ಬೆಂಬಲವನ್ನು ನೋಡಿ ಏನೆಂದು ಹೇಳಬೇಕೆಂದು ನನ್ನಲ್ಲಿ ಮಾತುಗಳು ಹೊರಡುತ್ತಿಲ್ಲ. ದೇವರು, ತಾಯಿ-ತಂದೆ ಹಾಗೂ ಜನರ ಆಶೀರ್ವಾದದಿಂದ ಡಿ.೫ ರಂದು ನಡೆದ ಉಪ-ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ಆಯ್ಕೆಯಾಗಿ ಶೀಘ್ರದಲ್ಲಿಯೇ ಸಚಿವರಾಗಲಿದ್ದಾರೆ. ಇದರಿಂದ ಗೋಕಾಕ-ಅರಭಾಂವಿ ಕ್ಷೇತ್ರಗಳು ಸೇರಿದಂತೆ ಇಡೀ ಬೆಳಗಾವಿ ಜಿಲ್ಲೆಯೂ ಸರ್ವಾಂಗೀಣ ಅಭಿವೃದ್ದಿ ಪಥದತ್ತ ಸಾಗುತ್ತದೆ. ನಾಳೆ ಚುನಾವಣಾ ಫಲಿತಾಂಶ ಪ್ರಕಟವಾಗುವ ಮುನ್ನವೇ ನಾವುಗಳು ಕಾರ್ಯಕರ್ತರಿಗೆ ಮುಂಚಿತವಾಗಿಯೇ ಅಭಿನಂದನೆ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.
ಕಳೆದ ೨೦ ವರ್ಷಗಳಿಂದ ಗೋಕಾಕ ಕ್ಷೇತ್ರದ ಸಮಗ್ರ ಏಳ್ಗೆಗೆ ರಮೇಶ ಜಾರಕಿಹೊಳಿ ಅವರು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಎಲ್ಲ ಸಮಾಜಗಳನ್ನು, ಹಿರಿಯರನ್ನು ಒಗ್ಗೂಡಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ಷೇತ್ರದ ಮತದಾರರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಮಗ್ರ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದ್ದಾರೆ.
ಕ್ಷೇತ್ರವನ್ನು ಸಂಪೂರ್ಣವಾಗಿ ನೀರಾವರಿ ಪ್ರದೇಶವನ್ನಾಗಿ ಮಾಡುವ ಸಂಕಲ್ಪ ನಮ್ಮದಾಗಿದೆ. ಕ್ಷೇತ್ರದಲ್ಲಿರುವ ಪ್ರತಿ ಗ್ರಾಮಗಳ ಸಮಸ್ಯೆಗಳ ಪಟ್ಟಿಯನ್ನು ಈಗಾಗಲೇ ಸಿದ್ದಪಡಿಸಿದ್ದು, ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಗೋಕಾಕ ಹಾಗೂ ಅರಭಾಂವಿ ಮತಕ್ಷೇತ್ರಗಳ ಅಭಿವೃದ್ದಿಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹೆಚ್ಚಿನ ಅನುದಾನ ನೀಡಲಿದ್ದಾರೆ. ರಮೇಶ ಜಾರಕಿಹೊಳಿ, ಶ್ರೀಮಂತ ಪಾಟೀಲ ಮತ್ತು ಮಹೇಶ ಕುಮಟಳ್ಳಿ ಅವರು ಸಚಿವರಾಗುವುದರಿಂದ ಬೆಳಗಾವಿ ಜಿಲ್ಲೆ ಮತ್ತಷ್ಟು ಶಕ್ತಿಶಾಲಿಯಾಗಲಿದೆ. ಮುಂದಿನ ಮೂರುವರೆ ವರ್ಷಗಳ ಕಾಲ ಯಡಿಯೂರಪ್ಪನವರು ಈ ರಾಜ್ಯದ ಮುಖ್ಯಮಂತ್ರಿಯಾಗಿ ನಾಡಿನ ಸೇವೆಯನ್ನು ಮಾಡಲಿದ್ದಾರೆಂದು ಅವರು ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಮತ್ತು ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಮಾತನಾಡಿ, ಚುನಾವಣೆಯಲ್ಲಿ ಶ್ರಮಿಸಿರುವ ಎಲ್ಲ ಕಾರ್ಯಕರ್ತರನ್ನು ಅಭಿನಂದಿಸಿದರು. ಸಿಎಮ್ ಯಡಿಯೂರಪ್ಪ ಅವರಿಂದ ಮಾತ್ರ ಕಲ್ಯಾಣ ಕರ್ನಾಟಕವಾಗಲು ಸಾಧ್ಯ. ಬಿಜೆಪಿಯಿಂದ ಅಭಿವೃದ್ದಿ ಪರ್ವ ಆರಂಭವಾಗಲಿದೆ. ೫ಬಾರಿ ಶಾಸಕನಾಗಿ, ೨ಬಾರಿ ಸಚಿವನಾಗಿ ಸಾಕಷ್ಟು ಅಭಿವೃದ್ದಿಪರ ಕೆಲಸಗಳನ್ನು ಮಾಡಿದ್ದೇನೆ. ೬ನೇ ಬಾರಿಗೆ ವಿಧಾನಸಭೆಗೆ ಆರಿಸಿ ಕಳುಹಿಸುತ್ತಿರುವ ಜನರ ಪ್ರೀತಿ ವಿಶ್ವಾಸಕ್ಕೆ ಚ್ಯುತಿ ತರದೇ ಸರ್ವಾಂಗೀಣ ಅಭಿವೃದ್ದಿಗೆ ಹಿರಿಯರು, ಸಮಾಜಗಳ ಮುಖಂಡರ ಮಾರ್ಗದರ್ಶನದಲ್ಲಿ ಶ್ರಮಿಸುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ಮುಖಂಡರಾದ ಡಿ.ಎಮ್.ದಳವಾಯಿ, ಸುಭಾಶ ಹುಕ್ಕೇರಿ, ಅಡಿವೆಪ್ಪ ನಾವಲಗಟ್ಟಿ, ಭೀಮಗೌಡ ಪಾಟೀಲ, ಅಡಿವೆಪ್ಪ ಕಿತ್ತೂರ, ಲಕ್ಕಪ್ಪ ತಹಶೀಲದಾರ, ಪ್ರಕಾಶ ಕರನಿಂಗ, ಎಸ್.ಎ.ಕೋತವಾಲ, ಅಬ್ಬಾಸ ದೇಸಾಯಿ, ಬಿಜೆಪಿ ಗ್ರಾಮೀಣ ಅಧ್ಯಕ್ಷ ವೀರುಪಾಕ್ಷ ಯಲಿಗಾರ, ರವಿ ಪತ್ರಾವಳಿ, ಬಸನಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಿಜೆಪಿ ನಗರ ಘಟಕ ಅಧ್ಯಕ್ಷ ಎಸ್.ವಿ.ದೇಮಶೆಟ್ಟಿ ಸ್ವಾಗತಿಸಿದರು, ಜಿ.ಪಂ ಸದಸ್ಯ ಗೋವಿಂದ ಕೊಪ್ಪದ ನಿರೂಪಿಸಿದರು. ಸುಭಾಶ ಪಾಟೀಲ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ