Kannada NewsKarnataka NewsLatest

ಬೆಳಗಾವಿ : ಲಂಚ ಸ್ವೀಕರಿಸಿದ ಗಂಡ, ಹೆಂಡತಿ ಇಬ್ಬರಿಗೂ ಜೈಲು ಶಿಕ್ಷೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮನೆಯ ಗಣಕೀಕೃತ ಉತಾರ ನೀಡಲು ಲಂಚ ಪಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ತು ಆಕೆಯ ಪತಿ ಇಬ್ಬರಿಗೂ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
4ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ   ಎಸ್.ವಿ.ವಿಜಯ ತೀರ್ಪು ನೀಡಿದ್ದಾರೆ. ಮಚ್ಚೆ ಗ್ರಾಮ ಪಂಚಾಯಿತಿ ಅಂದಿನ ಅಧ್ಯಕ್ಷೆ ಪದ್ಮಶ್ರೀ ಮತ್ತು ಅವರ ಪತಿ ಮಹಾವೀರ ಸಾವಂತ ಶಿಕ್ಷೆಗೊಳಗಾದವರು.

 

ಪ್ರಕರಣದ ವಿವರ

೪ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎನ್.ವಿ.ವಿಜಯ ಅವರು ಆರೋಪಿ-೧ ಪದ್ಮಶ್ರೀ ಮಹಾವೀರ ಹುಡೇದ, ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯತ ಮಚ್ಛೆ ಬೆಳಗಾವಿ ಇವರನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿ ಕಲಂ.೭ ಪಿಸಿ ಕಾಯ್ದೆ-೧೯೮೮ ರಲ್ಲಿ ೦೩ ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ.೫೦೦೦/- ದಂಡ, ಒಂದು ವೇಳೆ ದಂಡ ಕಟ್ಟಲು ತಪ್ಪಿದರೆ ೨ ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಹಾಗೂ ಕಲಂ.೧೩(೧)(ಡಿ) ಸಹ ಕಲಂ.೧೩(೨) ಪಿಸಿ ಕಾಯ್ದೆ-೧೯೮೮ ನೇದ್ದರಡಿಯಲ್ಲಿ ೦೪ ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ.೧೦,೦೦೦/-ದಂಡ, ಒಂದು ವೇಳೆ ದಂಡ ಕಟ್ಟಲು ತಪ್ಪಿದರೆ ೦೩ ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿರುತ್ತಾರೆ.

ಆರೋಪಿ-೨ ಮಹಾವೀರ ಸಾವಂತ ಹುಡೇದ ಇವರನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿ ಕಲಂ.೮ ಪಿಸಿ ಕಾಯ್ದೆ-೧೯೮೮ ರಲ್ಲಿ ೦೩ ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ.೫೦೦೦/- ದಂಡ, ಒಂದು ವೇಳೆ ದಂಡ ಕಟ್ಟಲು ತಪ್ಪಿದರೆ ೨ ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಹಾಗೂ ಕಲಂ.೧೨ ಪಿಸಿ ಕಾಯ್ದೆ-೧೯೮೮ ನೇದ್ದರಡಿಯಲ್ಲಿ ೦೩ ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ.೧೦,೦೦೦/- ದಂಡ, ಒಂದು ವೇಳೆ ದಂಡ ಕಟ್ಟಲು ತಪ್ಪಿದರೆ ೦೩ ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

೨೮.೦೧.೨೦೧೭ರಂದು ಫಿರ್ಯಾಧಿದಾರರಾದ ಕಸ್ತೂರಿ ಪ್ರಕಾಶ ಕೋಲಕಾರ ಸಾ|| ಮನೆ ನಂ.೨೧೭೯, ಶಿವಾಜಿ ನಗರ, ಮಚ್ಛೆ, ತಾಃ ಜಿಃ ಬೆಳಗಾವಿ ಇವರಿಗೆ ಆರೋಪಿ-೧ ಪದ್ಮಶ್ರೀ ಮಹಾವೀರ ಹುಡೇದ, ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ, ಮಚ್ಛೆ ತಾಃ ಜಿಃ ಬೆಳಗಾವಿ ರವರು ಮನೆಯ ಗಣಕೀಕೃತ ಉತಾರ ನೀಡಲು ರೂ.೩೦೦೦ ಲಂಚದ ಬೇಡಿಕೆ ಇಟ್ಟು ಮುಂಗಡವಾಗಿ ರೂ.೫೦೦ ಸ್ವತ: ಸ್ವೀಕರಿಸಿ, ಉಳಿದ ಹಣ ರೂ.೨೫.೦೦೦ನ್ನು ತನ್ನ ಗಂಡ ಆರೋಪಿತ-೨ ಮಹಾವೀರ ಸಾವಂತ ಹುಡೇದ ಇವನ ಮೂಲಕ ಸ್ವೀಕರಿಸಿಕೊಂಡಾಗ ಎಸಿಬಿ ಅಧಿಕಾರಿಗಳು ಯಶಸ್ವಿಯಾಗಿ ಟ್ರ್ಯಾಪ್ ಮಾಡಿ ಆರೋಪಿತನನ್ನು ದಸ್ತಗೀರ ಮಾಡಿ ಲಂಚದ ಹಣವನ್ನು ಯತಾವತ್ತಾಗಿ ವಶಪಡಿಸಿಕೊಂಡಿದ್ದು, ಘನ ೪ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ, ಬೆಳಗಾವಿಯಲ್ಲಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

ವಿಶ್ವನಾಥ ಡಿ.ಕಬ್ಬೂರಿ, ಪೊಲೀಸ್ ಇನ್ಸಪೆಕ್ಟರ್‌ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಹಾಗೂ ಬಿ.ಸಿ.ಗೌಡರ, ಸಿ.ಎಚ್.ಸಿ ಇವರು ತನಿಖಾ ಸಹಾಯಕರಾಗಿ ಪ್ರಕರಣದ ತನಿಖೆ ಕೈಕೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿರುತ್ತಾರೆ. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕರಾದ ಪ್ರವೀಣ ಅಗಸಗಿ ರವರು ಘನ ನ್ಯಾಯಾಲಯದಲ್ಲಿ ಪ್ರಕರಣವನ್ನು ನಡೆಯಿಸಿ ವಾದ ಮಂಡಿಸಿದ್ದರು. ಈ ಪ್ರಕರಣದಲ್ಲಿ ಬಿ. ಎಸ್. ನೇಮಗೌಡ, ಪೊಲೀಸ್ ಅಧೀಕ್ಷಕರು ಉತ್ತರ ವಲಯ ಬೆಳಗಾವಿ ಇವರ ಮಾರ್ಗದರ್ಶನಲ್ಲಿ, ಜೆ. ಎಮ್. ಕರುಣಾಕರಶೆಟ್ಟಿ, ಪೊಲೀಸ್ ಉಪಾಧೀಕ್ಷಕರು, ಎ.ಸಿ.ಬಿ ಪೊಲೀಸ್ ಠಾಣೆ ಬೆಳಗಾವಿರವರ ನೇತೃತ್ವದಲ್ಲಿ ಹೆಚ್. ಸುನೀಲ್‌ಕುಮಾರ್, ಪೊಲೀಸ್ ನಿರೀಕ್ಷಕರು ಹಾಗೂ ಬಿ. ಬಿ. ಹುದ್ದಾರ, ಸಿಪಿಸಿ ಇವರು ಕೋರ್ಟ ಮಾನಿಟರಿಂಗ್ ಕರ್ತವ್ಯ ನಿರ್ವಹಿಸಿರುತ್ತಾರೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಉತ್ತರ ವಲಯದ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button