ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಶನಿವಾರ ಸಭೆ ನಡೆಸಿದರು.
ಮಾಜಿ ಸಚಿವ ಎಂ.ಬಿ.ಪಾಟೀಲ ನೇತೃತ್ವದಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಕೆಪಿಸಿಸಿ ಸಮಿತಿಯೊಂದನ್ನು ನೇಮಕ ಮಾಡಿದೆ. ಈ ಸಮಿತಿಯ ಸದಸ್ಯರು ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಬೆಳಗ್ಗೆ ಸೇರಿ ಮೊದಲ ಹಂತದ ಚರ್ಚೆ ನಡೆಸಿದರು.
ಕ್ಷೇತ್ರದಲ್ಲಿ ಯಾವ ಜಾತಿಯ ಮತದಾರರು ಎಷ್ಟೆಷ್ಟು ಪ್ರಮಾಣದಲ್ಲಿದ್ದಾರೆ? ಹಿಂದಿನ ಚುನಾವಣೆಗಳಲ್ಲಿ ಯಾವ ಜಾತಿಯವರು ಎಷ್ಟು ಮತಗಳನ್ನು ಪಡೆದಿದ್ದಾರೆ? ಜಾತಿಯ ಆಧಾರದಲ್ಲಿ ಅಭ್ಯರ್ಥಿ ನಿಲ್ಲಿಸಿದರೆ ಅದರ ಪರಿಣಾಮವೇನು? ಲಿಂಗಾಯತ, ಮರಾಠಾ, ಕುರುಬ ಮೊದಲಾದ ಜಾತಿಯವರು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಜಾತಿ ಸಮೀಕರಣವನ್ನು ಹೇಗೆ ಮಾಡಬೇಕು? ಬಿಜೆಪಿಯವರು ಯಾವ ಜಾತಿಯವರಿಗೆ ಈ ಬಾರಿ ಮಣೆಹಾಕಬಹುದು? ಬಿಜೆಪಿ ನಿಲ್ಲಿಸಿದ ಜಾತಿಯವರನ್ನೇ ನಿಲ್ಲಿಸಿದರೆ ಪರಿಣಾಮವೇನು? ಬೇರೆ ಜಾತಿಯವರನ್ನು ನಿಲ್ಲಿಸದರೆ ಏನಾಗಬಹುದು? ಎನ್ನುವ ಹಲವಾರು ವಿಷಯಗಳನ್ನಿಟ್ಟುಕೊಂಡು ಚರ್ಚೆ ನಡೆದಿದೆ.
ಕೆಲವರು ಮರಾಠಿ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆನ್ನುವ ಪ್ರಸ್ತಾಪವಿಟ್ಟರೆ, ಇನ್ನು ಕೆಲವರು ಹಿಂದುಳಿದ ಅಭ್ಯರ್ಥಿ ನಿಲ್ಲಿಸಬೇಕೆನ್ನುವ ಸಲಹೆ ನೀಡಿದರು. ಆದರೆ ಹೆಚ್ಚಿನವರು, ಲಿಂಗಾಯತ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಲಿಂಗಾಯತ ಸಮಾಜದ ಅಭ್ಯರ್ಥಿಯನ್ನೇ ನಿಲ್ಲಿಸಬೇಕೆನ್ನುವ ಅಭಿಪ್ರಾಯ ಮಂಡಿಸಿದರು.
ಮೊದಲ ಸಭೆಯಲ್ಲಿ ಕೇವಲ ಜಾತಿ ಸಮೀಕರಣ ಚರ್ಚೆಗೇ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಇನ್ನೊಂದು ವಾರದಲ್ಲಿ ಮತ್ತೆ ಸಭೆ ಸೇರಿ ಆಕಾಂಕ್ಷಿಗಳ ಪಟ್ಟಿ ತಯಾರಿಸಿ ಪ್ರತಿಯೊಬ್ಬರ ಸಾಮರ್ಥ್ಯ ಕುರಿತು ಚರ್ಚಿಸಲು ನಿರ್ಧರಿಸಲಾಯಿತು.
ಬೆಳಗಾವಿ ಲೋಕಸಭಾ ಕ್ಷೇತ್ರ ಮೂಲತಃ ಕಾಂಗ್ರೆಸ್ ಹಿಡಿತದಲ್ಲಿದ್ದ ಕ್ಷೇತ್ರ. ಕಳೆದ 3 -4 ಚುನಾವಣೆಯಲ್ಲಿ ಬೇರೆ ಬೇರೆ ಕಾರಣದಿಂದ ಬಿಜೆಪಿ ಅಭ್ಯರ್ಥಿ ಗೆದ್ದಿರಬಹುದು. ಆದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮತಗಳು ಸಾಕಷ್ಟು ಪ್ರಮಾಣದಲ್ಲಿದ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಗೆಲ್ಲುವುದು ಕಷ್ಟವಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.
ಯಾವುದೇ ಕ್ಷಣದಲ್ಲಿ ಚುನಾವಣೆ ಘೋಷಣೆಯಾದರೂ ಪಕ್ಷ ಸಂಘಟನಾತ್ಮಕವಾಗಿ ಸಿದ್ದವಾಗಬೇಕು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಇಡೀ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವ ಜವಾಬ್ದಾರಿ ಹೊರಬೇಕು. ಅಭ್ಯರ್ಥಿ ಯಾರಾದರೂ ಈಗಿನಿಂದಲೇ ಕೆಲಸ ಶುರುಮಾಡಬೇಕು ಎನ್ನುವ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.
ಎಂ.ಬಿ.ಪಾಟೀಲ, ಸತೀಶ್ ಜಾರಕಿಹೊಳಿ, ಕೆಪಿಸಿಸಿ ವಕ್ತಾರರಾಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಮಾಜಿ ಶಾಸಕ ಅಶೋಕ ಪಟ್ಟಣ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಶಾಸಕ ಮಹಾಂತೇಶ ಕೌಜಲಗಿ ಮೊದಲಾದವರಿದ್ದರು.
ಸತೀಶ್ ಜಾರಕಿಹೊಳಿ ಹೆಗಲಿಗೆ ಬೆಳಗಾವಿ ಚುನಾವಣೆ: ಅಭ್ಯರ್ಥಿ ಆಯ್ಕೆಗೆ ಮತ್ತೆ ಸಭೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ