Kannada NewsKarnataka NewsLatest

ಬೆಳಗಾವಿಗೆ ಬೇಕಿದೆ 50 ವರ್ಷ ಮುಂದಿನ ಗುರಿ – ಶಾಸಕಿ ಲಕ್ಷ್ಮೀ ಹೆಬ್ಬಾಳಕರ್

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 50 ವರ್ಷ ಮುಂದಿನ ಗುರಿಯಿಟ್ಟುಕೊಂಡು ಬೆಳಗಾವಿಯನ್ನು ಬೆಳೆಸಬೇಕಿದೆ. ಅದಕ್ಕಾಗಿ ಈಗಲೇ ಯೋಜನೆ ರೂಪಿಸಬೇಕಾಗಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಶನಿವಾರ ಕನ್ನಡಪ್ರಭ ಬೆಳಗಾವಿ ಆವೃತ್ತಿಯ ರಜತಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕನ್ನಡ ಪ್ರಭ, ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಅವರ ಪ್ರಾಸ್ತಾವಿಕ ಮಾತುಗಳನ್ನು ವಿಸ್ತರಿಸಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್, ಬೆಂಗಳೂರಿನಲ್ಲಿ ಆಗುತ್ತಿರುವ ಅಧ್ವಾನಗಳು ಬೆಳಗಾವಿಯಲ್ಲಿ ಆಗಬಾರದೆಂದರೆ ಈಗಲೇ ಯೋಚಿಸಬೇಕಾಗಿದೆ. ಇದಕ್ಕಾಗಿ ನನ್ನಿಂದ ಏನು ಸಾಧ್ಯವೋ ಅದನ್ನು ಮಾಡಲು ಸಿದ್ಧ ಎಂದು ಹೇಳಿದರು.

ನನ್ನನ್ನು ನಿರಂತವಾಗಿ ತಿದ್ದಿತೀಡುವ ಕಾರ್ಯವನ್ನು ಕನ್ನಡಪ್ರಭ ನಿರಂತರವಾಗಿ ಮಾಡಿದೆ.   ಪತ್ರಿಕೆಯ ಯಾವುದೋ ಒಂದು ಸುದ್ದಿಯಲ್ಲಿ ನಾನು ಉಪಸ್ಥಿತಳಿದ್ದೆ ಎಂಬ ಉಲ್ಲೇಖವನ್ನು ಕಂಡು ಸಂಭ್ರಮಿಸುತ್ತಿದ್ದ ನಾನು, ಇಂದು ಕನ್ನಡಪ್ರಭ ಬೆಳಗಾವಿ ಆವೃತ್ತಿಯ ರಜತೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು.

ಗದಗ-ಡಂಬಳ ತೋಂಟದಾರ್ಯ ಮಠದ ಶ್ರೀ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ  ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕನ್ನಡಪ್ರಭ ಪತ್ರಿಕೆಯಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪ್ರಗತಿವಾಹಿನಿ ಸಂಪಾದಕ ಎಂ.ಕೆ.ಹೆಗಡೆ ಅವರಿಗೆ ಕನ್ನಡಪ್ರಭ, ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಸ್ಮರಣಿಕೆ ನೀಡಿದರು.

ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಅತ್ಯಂತ ಸೂಕ್ಷ್ಮ ಸಂವೇದನೆಯುಳ್ಳ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಭಾಷೆ ಹಾಗೂ ಗಡಿಗೆ ಸಂಬಂಧಪಟ್ಟ ವಿವಾದಗಳು ಉಚ್ಛ್ರಾಯವಾಗಿದ್ದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ತನ್ನ ಆವೃತ್ತಿಯನ್ನು ಆರಂಭಿಸಿ ಕನ್ನಡ ಭಾಷೆ, ನೆಲ, ಜಲದ ಪರವಾಗಿ ದನಿ ಎತ್ತಿ ಕನ್ನಡಕ್ಕೆ ಶಕ್ತಿ ತುಂಬಿದ ಹಿರಿಮೆ ಕನ್ನಡಪ್ರಭದ್ದಾಗಿದೆ ಎಂದರು.

 ಕನ್ನಡಪ್ರಭ ಮತ್ತು ಏಷಿಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ,
ವೇಗವಾಗಿ ಬೆಳೆಯುತ್ತಿರುವ ಬೆಳಗಾವಿಯಲ್ಲಿ ಬೆಂಗಳೂರಿನ ಸಮಸ್ಯೆಗಳು ಉದ್ಭವಿಸದಂತೆ ನೋಡಿಕೊಳ್ಳುವ ಮುಂದಾಲೋಚನೆ  ಅಗತ್ಯ. ಆ ಯೋಚನೆಗಳು ಬೆಳಗಾವಿಯ ರಾಜಕಾರಣಿಗಳಿಗೂ ಇರಲಿ ಎಂದು ಹೇಳಿದರು.
ಜೆ.ಎಚ್.ಪಟೇಲರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ, ೭ ಹೊಸ ಜಿಲ್ಲೆಗಳನ್ನು ಘೋಷಿಸಲು ತೀರ್ಮಾನಿಸಿದ್ದರು. ಆ ಪಟ್ಟಿಯಲ್ಲಿ ಗೋಕಾಕ ಸಹ ಸೇರಿತ್ತು. ಆದರೆ, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಅಭಿಪ್ರಾಯ ಆಧರಿಸಿ ಕನ್ನಡಪ್ರಭ ವರದಿಯನ್ನು ಪರಿಗಣಿಸಿದ ಜಿ.ಎಚ್.ಪಟೇಲರು ಆ ಕುರಿತು ಸಭೆಯನ್ನು ಸಹ ಮಾಡದೇ ಹೊಸ ಜಿಲ್ಲೆಗಳ ಪಟ್ಟಿಯಿಂದ ಗೋಕಾಕನ್ನು ಕೈಬಿಟ್ಟಿದ್ದರು. ಜಿಲ್ಲೆಯನ್ನು ಇಬ್ಭಾಗ ಮಾಡಿದರೆ, ಕನ್ನಡಕ್ಕೆ ಹಿನ್ನೆಡೆಯಾಗುತ್ತಿದೆ ಎಂಬ ದೃಷ್ಟಿಯಿಂದ ಆ ಪ್ರಸ್ತಾಪ ಕೈಬಿಡಲಾಗಿತ್ತು. ಇದೇ ಕಾರಣಕ್ಕೆ ಇವತ್ತಿಗೂ ಜಿಲ್ಲೆ ವಿಭಜನೆ ನಿರ್ಧಾರವನ್ನು ಯಾರಿಂದಲೂ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ವಿಶೇಷ ಅಂಚೆ ಲಕೋಟೆ ಬಿಡುಗಡೆ:
ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಸಹಯೋಗದಲ್ಲಿ  ಬೆಳಗಾವಿ ಕನ್ನಡಪ್ರಭ ಆವೃತ್ತಿಯನ್ನು ಪ್ರತಿನಿಧಿಸುವ ವಿಶೇಷ ಲಕೋಟೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಲೋಕಾರ್ಪಣೆ ಮಾಡಿದರು.
ಈ ವೇಳೆ ಅಂಚೆ ಇಲಾಖೆಯ ಬೆಳಗಾವಿ ವಿಭಾಗದ ಅಧೀಕ್ಷಕ ಎಸ್.ವಿಜಯನರಸಿಂಹ ಅವರು ಮಾತನಾಡಿದರು.
 ಕನ್ನಡಪ್ರಭ ಪತ್ರಿಕೆ ಕನ್ನಡತನ ಬೆಳೆಸುವ ಕಾರ್ಯ ಮಾಡುತ್ತಿದೆ. ವಿವಿಧ ಕ್ಷೇತ್ರದ ಸಾಧಕರನ್ನು, ರೈತರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಕಾರ್ಯ ಮಾಡುವ ಮೂಲಕ ಸಾಮಾಜಿಕ ಬದ್ಧತೆ ಮೆರೆದಿದೆ. ಇದರೊಟ್ಟಿಗೆ ಗಡಿಯಲ್ಲಿ ಕನ್ನಡ ಕಟ್ಟುವ ಕಾರ್ಯ ಮಾಡುತ್ತಿರುವುದು ಅಭಿಮಾನದ ಸಂಗತಿ. ಕನ್ನಡಪ್ರಭ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಸರ್ಕಾರವನ್ನು, ಅಧಿಕಾರಿಗಳನ್ನು ಎಚ್ಚರಿಸುವ ಕಾರ್ಯ ಮಾಡಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಬಾಳಾಸಾಹೇಬ ಲೋಕಾಪುರ ಹೇಳಿದರು.

 

https://pragati.taskdun.com/belagavi-news/people-in-the-entire-constituency-are-happy-about-my-work-mla-lakshmi-hebbalkar/

 

https://pragati.taskdun.com/latest/haverikannada-sahiya-sammelanameetingdr-nadoja-mahesh-joshi/

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button