ಪ್ರವಾಹ ಸಂತ್ರಸ್ತರಿಗೆ ದಂಡದಿಂದ ವಿನಾಯಿತಿ ಕೊಡಿ -ಲಕ್ಷ್ಮಿ ಹೆಬ್ಬಾಳಕರ್

ಈ ಸಂದರ್ಭದಲ್ಲಿ ದುಭಾರಿ ದಂಡ ವಿಧಿಸುವುದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.  

ಪ್ರವಾಹ ಸಂತ್ರಸ್ತರಿಗೆ ದಂಡದಿಂದ ವಿನಾಯಿತಿ ಕೊಡಿ -ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ವಾಹನ ಸವಾರರಿಗೆ ಪ್ರಸ್ತುತ ಜಾರಿಯಲ್ಲಿರುವ ದಂಡದ ಪ್ರಮಾಣದಲ್ಲಿ ಪ್ರವಾಹ ಸಂತ್ರಸ್ತರಿಗೆ ವಿನಾಯಿತಿ ನೀಡುವಂತೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ವಿನಂತಿಸಿದ್ದಾರೆ.
ಈ ಸಂಬಂಧ ಬೆಳಗಾವಿ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿರುವ ಅವರು, ವಿಶೇಷವಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರು ಪ್ರವಾಹದಿಂದ ಕಂಗೆಟ್ಟಿದ್ದಾರೆ. ಮನೆಗಳನ್ನು ಕಳೆದುಕೊಂಡಿದ್ದಾರೆ.
ಹಲವಾರು ದಾಖಲೆಗಳನ್ನು ಕಳೆದುಕೊಂಡಿದ್ದಾರೆ. ಮನೆಯಲ್ಲಿರುವ ಸಾಮಗ್ರಿಗಳನ್ನು, ಬಟ್ಟೆಗಳನ್ನು ಕಳೆದುಕೊಂಡಿದ್ದಾರೆ. ಸಂಪೂರ್ಣ ಬದುಕನ್ನು ಹೊಸದಾಗಿ ಕಟ್ಟಿಕೊಳ್ಳಲು ಹೋರಾಡುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಧವಸ ಧಾನ್ಯ ಸೇರಿದಂತೆ ಬೇಕಾದ ಸಾಮಗ್ರಿಗಳನ್ನು ಬೈಕ್ ಮತ್ತಿತರ ಸ್ವಂತ ವಾಹನಗಳಲ್ಲಿ ಸಾಗಿಸಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಈಗ ಅವರಿಗೆ ದುಭಾರಿ ದಂಡ ವಿಧಿಸಿದರೆ ಅವರು ತುಂಬುವಷ್ಟು ಅವರ ಆರ್ಥಿಕ ಸ್ಥಿತಿ ಗಟ್ಟಿಯಾಗಿರುವುದಿಲ್ಲ. ಹಾಗಾಗಿ ಅವರಿಗೆ ಈ ಸಂದರ್ಭದಲ್ಲಿ ದುಭಾರಿ ದಂಡ ವಿಧಿಸುವುದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಮಾನವೀಯತೆಯ ದೃಷ್ಟಿಯಿಂದ ಅವರಿಗೆ ಸಂಚಾರ ನಿಯಮ ಉಲ್ಲಂಘನೆಯ ದಂಡ ವಿಧಿಸುವಾಗ ವಿನಾಯಿತಿ ನೀಡಬೇಕು ಎಂದು ವಿನಂತಿಸಿದ್ದಾರೆ.
ಲಕ್ಷ್ಮಿ ಹೆಬ್ಬಾಳಕರ್ ಪರವಾಗಿ ಅವರ ಪುತ್ರ, ಯುವಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಹಾಗೂ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಪೊಲೀಸ್ ಆಯುಕ್ತ ಲೋಕೇಶ್ ಕುಮಾರ ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿದರು. ಪೊಲೀಸ್ ಆಯುಕ್ತರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೆಬ್ಬಾಳಕರ್ ತಿಳಿಸಿದ್ದಾರೆ.