೫ ವರ್ಷಗಳವರೆಗೆ ರೂ.೧೩,೩೪೩ ಕೋಟಿಗಳ ಆರ್ಥಿಕ ಬೆಂಬಲ

ರಾಷ್ಟ್ರೀಯ ಜಾನುವಾರುಗಳ ರೋಗ ನಿಯಂತ್ರಣ ಕಾರ್ಯಕ್ರಮದ ಉದ್ಘಾಟನೆ

ರಾಷ್ಟ್ರೀಯ ಜಾನುವಾರುಗಳ ರೋಗ ನಿಯಂತ್ರಣ ಕಾರ್ಯಕ್ರಮದ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮತ್ತಿಕೊಪ್ಪದ ಐಸಿಎಆರ್- ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇಂದು ರಾಷ್ಟ್ರೀಯ ಜಾನುವಾರುಗಳ ರೋಗ ನಿಯಂತ್ರಣ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೆಳಗಾವಿ ಹಾಗೂ ಭಾರತ ಸರಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮಂತ್ರಾಲಯ ನವದೆಹಲಿ ಇವರ ಸಹಯೋಗದಲ್ಲಿ ನಡೆದ ಜಾನುವಾರುಗಳ ಕಾಲುಬಾಯಿ ಜ್ವರ ಮತ್ತು ಕಂದು ರೋಗಗಳ ನಿಯಂತ್ರಣ ಹಾಗೂ ರಾಷ್ಟ್ರೀಯ ಕೃತಕ ಗರ್ಭಧಾರಣೆ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯಸಭಾ ಸದಸ್ಯ ಹಾಗೂ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರವು ೨೦೧೯ ರಿಂದ ೨೦೨೪ ರ ವರೆಗೆ ೫ ವರ್ಷಗಳವರೆಗೆ ರೂ.೧೩,೩೪೩ ಕೋಟಿಗಳ ಆರ್ಥಿಕ ಬೆಂಬಲವನ್ನು ರಾಜ್ಯ ಸರ್ಕಾರಗಳಿಗೆ ನೀಡಲಿದೆ ಹಾಗೂ ೨೦೨೫ ರ ಹೊತ್ತಿಗೆ ಕಾಲುಬಾಯಿ ರೋಗದ ಸಂಪೂರ್ಣ ಹತೋಟಿ ಹಾಗೂ ೨೦೩೦ರ ಹೊತ್ತಿಗೆ ನಿರ್ಮೂಲನೆ ಉದ್ಧೇಶವನ್ನು ಹೊಂದಲಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಹಸು ಮತ್ತು ಎಮ್ಮೆ ಕರುಗಳಲ್ಲಿ ತೀವ್ರಗತಿಯಲ್ಲಿ ಕಂದು ರೋಗದ ಪರಿಣಾಮಕಾರಿ ನಿರ್ವಹಣೆ ಮಾಡಲಾಗುವದು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಪ್ರಥಮವಾಗಿ ಚಾಲನೆ ನೀಡಿದ ಈ ಮಹತ್ವಕಾಂಕ್ಷೆ ಯೋಜನೆಯಲ್ಲಿ ದೇಶದ ೫೧ ಕೋಟಿ ಜಾನುವಾರುಗಳಿಗೆ (ಹಸು, ಎಮ್ಮೆ, ಕುರಿ, ಮೇಕೆ ಮತ್ತು ಹಂದಿ) ಕಾಲುಬಾಯಿ ರೋಗದ ವಿರುದ್ಧ ವರ್ಷಕ್ಕೆ ೨ ಬಾರಿ ಲಸಿಕೆ ನೀಡುವುದು ಹಾಗೂ ೩.೬ ಕೋಟಿ ಹೆಣ್ಣು ಕರುಗಳಿಗೆ ಕಂದು ರೋಗದ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರದ ರೈತ ಪರ ಯೋಜನೆಯ ಕುರಿತು ಗಮನ ಸೆಳೆದ ಡಾ. ಪ್ರಭಾಕರ ಕೋರೆ, ಜಮೀನು ಹೊಂದಿರುವ ದೇಶದ ಎಲ್ಲಾ ರೈತ ಕುಟುಂಬಗಳಿಗೆ ಆದಾಯದ ಬೆಂಬಲವನ್ನು ನೀಡುವ ದೃಷ್ಟಿಯಿಂದ, ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು ಮತ್ತು ಮನೆಯ ಅಗತ್ಯಗಳಿಗೆ ಸಂಬಂಧಿಸಿದ ಖರ್ಚುಗಳನ್ನು ನಿಭಾಯಿಸಲು ಅವರಿಗೆ ಅನುಕೂಲ ಮಾಡಿಕೊಡುವ ಕಾರಣ ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ  ಯೋಜನೆಯನ್ನು ಪ್ರಾರಂಭಿಸಿದೆ.

ಅದೇ ರೀತಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಮ್ಮ ವೃದ್ಯಾಪ್ಯದಲ್ಲಿ ಜೀವನೋಪಾಯ ಮತ್ತು ಯಾವುದೇ ಖರ್ಚುಗಳನ್ನು ನೋಡಿಕೊಳ್ಳಲು ಕನಿಷ್ಠ ಹಣ ಅಥವಾ ಉಳಿತಾಯವಿಲ್ಲದಾಗ ಅವರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ದೃಷ್ಟಿಯಿಂದ ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯನ್ನು ಪ್ರಾರಂಭ ಮಾಡುವ ಉದ್ಧೇಶವಿರುತ್ತದೆ ಎಂದು ತಿಳಿಸಿದರು.

ಡಾ. ಪ್ರಭಾಕರ ಕೋರೆಯವರ ಪ್ರಯತ್ನ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಿತ್ತೂರ ಶಾಸಕ  ಮಹಾಂತೇಶ ದೊಡಗೌಡರ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರವು ಮತ್ತಿಕೊಪ್ಪದಲ್ಲಿ ಸ್ಥಾಪನೆಯಾಗುವಲ್ಲಿ ಡಾ. ಪ್ರಭಾಕರ ಕೋರೆಯವರ ಪ್ರಯತ್ನ ಪ್ರಶಂಸನೀಯವಾಗಿದೆ. ಕೇಂದ್ರವು ಅವರ ಕನಸಿನ ಕೂಸಾಗಿದ್ದು, ಈ ಭಾಗದ ರೈತರಿಗೆ ವಿವಿಧ ಪ್ರಾತ್ಯಕ್ಷಿಕೆ ಹಾಗೂ ತರಬೇತಿಗಳನ್ನು ಕೈಗೊಂಡು ಅನೇಕ ಗ್ರಾಮಗಳಲ್ಲಿ ಕೃಷಿ ತಂತ್ರಜ್ಞಾನಗಳನ್ನು ವಿಸ್ತರಿಸುವಲ್ಲಿ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಅಭಿಪ್ರಾಯಪಟ್ಟರು.

ಜಾನುವಾರುಗಳಿಗೆ ಕಾಲುಬಾಯಿ ರೋಗ ಮತ್ತು ಕಂದು ರೋಗಗಳ ಸಂಪೂರ್ಣ ನಿಯಂತ್ರಣ ಮತ್ತು ನಿರ್ಮೂಲನೆ ಕಾರ್ಯಕ್ರಮದಲ್ಲಿ ಹಸುಗಳಿಗೆ, ಜಾನುವಾರುಗಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ತಪ್ಪದೇ ಲಸಿಕೆ ಹಾಕುವುದರಿಂದ ಕಾಲುಬಾಯಿ ರೋಗವನ್ನು ಸಮರ್ಥವಾಗಿ ತಡೆಗಟ್ಟಲಾಗುವುದು ಎಂದು ತಿಳಿಸಿದರು. ಈ ದಿಸೆಯಲ್ಲಿ ಪಶುಪಾಲನೆ ಇಲಾಖೆಯ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮಿಸಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ  ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಮಥುರಾದ ಪಶು ವಿಶ್ವವಿದ್ಯಾಲಯದಲ್ಲಿ ಉದ್ಘಾಟಿಸಿದ ರಾಷ್ಟ್ರೀಯ ಜಾನುವಾರುಗಳ ರೋಗ ನಿಯಂತ್ರಣ ಕಾರ್ಯಕ್ರಮ ಹಾಗೂ ರಾಷ್ಟ್ರವ್ಯಾಪಿ ಕೃತಕ ಗರ್ಭಧಾರಣಾ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆಯನ್ನು ಕೇಂದ್ರದಲ್ಲಿ ಮಾಡಲಾಗಿತ್ತು.

ಸಮಗ್ರ ಕೃಷಿ ಪದ್ಧತಿ

ಕೃಷಿ ವಿಜ್ಞಾನ ಕೇಂದ್ರದ ಸಲಹೆಗಾರರಾದ ಡಾ. ವ್ಹಿ. ಎಸ್. ಕೋರಿಕಂಥಿಮಠ ಮಾತನಾಡಿ, ಜಾನುವಾರುಗಳು ಪರಿಸರದಲ್ಲಿ ಮನುಷ್ಯನಂತೆ ಮಹತ್ವವಾದ ಜೀವಿಯಾಗಿದ್ದು, ಅದರ ಆರೋಗ್ಯವು ಮುಖ್ಯವಾಗಿದೆ. ರೈತರು ಈ ಬೃಹತ್ ಕಾರ್ಯಕ್ರಮದಡಿ ಲಸಿಕೆ ಹಾಕಿಸುವುದರ ಮೂಲಕ ತಮ್ಮ ಜಾನುವಾರುಗಳಿಗೆ ರೋಗ ಬರದಂತೆ ಕಾಪಾಡಿಕೊಂಡು ಹಾಲಿನ ಉತ್ಪನ್ನವನ್ನು ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಿದರು. ಮುಂದುವರೆದು ರೈತರು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಆರ್ಥಿಕ ಸಬಲತೆಯನ್ನು ಪಡೆಯಬೇಕೆಂದು ತಿಳಿಸಿದರು.

ನಂತರ ನಡೆದ ವಿಚಾರಗೋಷ್ಠಿಯಲ್ಲಿ ಡಾ. ಜಿ. ಪಿ. ಮನಗೂಳಿ ಇವರು ಕಾಲುಬಾಯಿ ಹಾಗೂ ಕಂದು ರೋಗದ ನಿವಾರಣೆಗೆ ಲಸಿಕೆ ಮಹತ್ವ ಹಾಗೂ ಗರ್ಭಧಾರಣೆ ಕುರಿತು ರೈತರಿಗೆ ಮಾರ್ಗದರ್ಶನ ಮಾಡಿದರು ಹಾಗೂ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.
ಕಾರ್ಯಕ್ರಮದಲ್ಲಿ ನಾಗನೂರ ಜಿಲ್ಲಾ ಪಂಚಾಯತ ಸದಸ್ಯೆ  ಲಾವಣ್ಯ ಶೀಲೆದಾರ, ಸುತಗಟ್ಟಿ ತಾಲೂಕ ಪಂಚಾಯತ ಸದಸ್ಯೆ  ಸುಜಾತಾ ಬಾಳಿಗಟಿ,. ಸುತಗಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷೆ ದ್ರಾಕ್ಷಾಯಿಣಿ ರಾಚನ್ನವರ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ  ಶ್ರೀದೇವಿ, ಜಂಟಿ ಕೃಷಿ ನಿರ್ದೇಶಕ, ಮೋಕಾಶಿ ಜಲಾನಿ ಹಾಗೂ ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ
ಡಾ. ಆಯ್. ಎಸ್. ಕೋಲಾರ ಇವರು ಉಪಸ್ಥಿತರಿದ್ದರು.

ಡಾ. ಅಶೋಕ ಕೊಳ್ಳಾ, ಉಪ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆ ಇಲಾಖೆ, ಬೆಳಗಾವಿ ಇವರು ಪ್ರಾಸ್ತಾವಿಕ ಮಾತನಾಡಿ ಲಸಿಕಾ ಯೋಜನೆಯ ಕುರಿತು ಮಾಹಿತಿ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ಚೇರ್‌ಮನ್ ಬಿ. ಆರ್. ಪಾಟೀಲ ಸ್ವಾಗತ ಕೋರಿದರು.
ಡಾ. ಮನಗೂಳಿ ವಂದಿಸಿದರು. ವಿಜ್ಞಾನಿ ಎಸ್. ಎಮ್. ವಾರದ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಸುತ್ತಮುತ್ತ ಗ್ರಾಮದ ೫೩ ಜಾನುವಾರುಗಳಿಗೆ ಕಾಲುಬಾಯಿ ಹಾಗೂ ಕುಂದುರೋಗಗಳ ಲಸಿಕೆಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಸುಮಾರು ೩೫೦ ರೈತರು ಭಾಗವಹಿಸಿದ್ದರು.