ನನ್ನ ಕಷ್ಟ ನನಗಿರಲಿ; ಅಭಿವೃದ್ಧಿ ನಿಮಗಿರಲಿ -11 ಕೋಟಿ ರೂ ಕಾಮಗಾರಿಗಳಿಗೆ ಚಾಲನೆ

20 ವರ್ಷದ ಬೇಡಿಕೆ ಈಡೇರಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕೊಂಡಾಡಿದ ಗ್ರಾಮಸ್ಥರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಯಾವುದೇ ಕಾರಣದಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಿಲ್ಲುವುದಿಲ್ಲ ಎಂದು ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಸ್ಮಾರ್ಟ್ ಸಿಟಿ ಯೋಜನೆಯ 4 ಕೋಟಿ ರೂ. ಹಾಗೂ ಲೋಕೋಪಯೋಗಿ ಇಲಾಖೆಯ ಸುಮಾರು 7 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗಳಿಗೆ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಸುಳಗಾ -ಬೆನಕನಳ್ಳಿ-ಸಾವಗಾಂವ್ -ಮಂಡೋಳಿ ಗ್ರಾಮದ ಜನರು ಕಳೆದ 20 ವರ್ಷಗಳಿಂದ ರಸ್ತೆ ಕಾಮಗಾರಿಗೆ ಒತ್ತಾಯಿಸುತ್ತಿದ್ದರು. ಆದರೆ ಅವರ ಬೇಡಿಕೆ ಬೇಡಿಕೆಯಾಗಿಯೇ ಉಳಿದಿತ್ತು. ಇದೀಗ ಲಕ್ಷ್ಮಿ ಹೆಬ್ಬಾಳಕರ್ ಪ್ರಯತ್ನದಿಂದಾಗಿ ಅದು ಈಡೇರಿದೆ. ನಾವು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದೆವು. ಗ್ರಾಮಕ್ಕೆ ಯಾರೇ ಬಂದರೂ ರಸ್ತೆ ದುರಸ್ತಿ ಮಾಡಿಕೊಡುವಂತೆ ಪ್ರಾರ್ಥಿಸುತ್ತಿದ್ದೆವು. ಆದರೆ ನೀವು ನಮ್ಮ ಮನೆಮಗಳಾಗಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿದ್ದೀರಿ ಎಂದು ಗ್ರಾಮಸ್ಥರು ಹರ್ಷದ ಕಣ್ಣೀರು ಹಾಕಿದರು.
ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ 4.21 ಕೋಟಿ ರೂ. ಗಳ ವೆಚ್ಚದಲ್ಲಿ ವಿಜಯ ಬೇಕರಿ -ಹಿಂಡಲಗಾ ಗಣಪತಿ ಮಂದಿರ ಹಿಂಬಾಗದಿಂದ ಬಾಕ್ಷೈಟ್ ರಸ್ತೆಗೆ ಸಂಪರ್ಕ ನೀಡುವ ಸುಮಾರು ಒಂದೂವರೆ ಕಿಲೋಮೀಟರ್  ಸೈಕಲ್ ಟ್ರ್ಯಾಕ್, ಪುಟ್ಪಾತ್, ರಸ್ತೆಯ ಎರಡೂ ಬದಿ ಹನ್ನೆರಡು ಪೂಟ್ ಗಳ ಪೇವರ್ಸ್ ಅಳವಡಿಕೆ, ಬೀದಿ ದೀಪಗಳ ಅಲಂಕಾರ ಹಾಗೂ ಸರ್ಕಲ್  ಅಭಿವೃದ್ಧಿಯ
ಕಾಮಗಾರಿಗಳಿಗೆ ಲಕ್ಷ್ಮಿ ಹೆ್ಬ್ಬಾಳಕರ್ ಚಾಲನೆ  ನೀಡಿದರು.
 ಹಿಂಡಲಗಾ ದಿಂದ  ಬಾಕ್ಷೈಟ್ ರಸ್ತೆಯವರೆಗೆ ಲೋಕೋಪಯೋಗಿ ಇಲಾಖೆ ಯೋಜನೆ ಅಡಿಯಲ್ಲಿ ಸುಮಾರು  4.30 ಕೋಟಿ ರೂ. ವೆಚ್ಚದಲ್ಲಿ ರಸ್ತೆಯ ಅಗಲಿಕರಣ ಹಾಗೂ ಸಬಲಿಕರಣದ ಅಭಿವೃದ್ಧಿಯ ಕಾಮಗಾರಿಯನ್ನು ಕೈಗೊಳ್ಳಲಾಯಿತು.
 ಬೆಕ್ಕಿನಕೇರಿ, ಸಾವಗಾಂವ ಹಾಗೂ ಮಂಡೋಳಿ ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆ ಯೋಜನೆಯ ಸುಮಾರು  2.50 ಕೋಟಿ ರೂ ವೆಚ್ಚದಲ್ಲಿ ರಸ್ತೆ ಕಾಮಗಾರಿಗಳಿಗೆ ಸಹ ಶಾಸಕರು ಚಾಲನೆ ನೀಡಿದರು. ಒಂದೇ ದಿನ ಸುಮಾರು 11 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಆರಂಭಿಸುವ ಮೂಲಕ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಮುಂದುವರಿಸಲಾಯಿತು.
ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರದತ್ತ ಕೊಂಡೊಯ್ಯುವಲ್ಲಿ ಸದಾ ಸಿದ್ದ. ನನಗೆ ವಯಕ್ತಿಕವಾಗಿ ಕೆಲವೊಂದು ಕಷ್ಟಗಳು ಬಂದಿರಬಹುದು. ಆದರೆ ಗ್ರಾಮದಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ. ಅವು ನಿರಂತರವಾಗಿ ಮುಂದುವರಿಯಲಿವೆ. ಯಾವುದಕ್ಕೂ ನಾನು ಜಗ್ಗುವುದಿಲ್ಲ. ನಿಮ್ಮ ಆಶಿರ್ವಾದ ಸದಾ ನನ್ನ ಮೇಲಿರಲಿ ಎಂದು ಲಕ್ಷ್ಮಿ ಹೆಬ್ಬಾಳಕರ್ ವಿನಂತಿಸಿದರು.
ಕಾಮಗಾರಿಗಳ ಪೂಜಾ ಸಂದರ್ಭದಲ್ಲಿ  ಹಿರಿಯರು, ಗ್ರಾಮಸ್ಥರು, ಸಂಬಂಧಪಟ್ಟ ಅಧಿಕಾರಿಗಳು ಯುವರಾಜ ಕದಂ,  ಚನ್ನರಾಜ ಹಟ್ಟಿಹೊಳಿ, ಮನೋಜ ಮತ್ತಿಕೊಪ್ಪ, ರಫೀಕ್, ಕಾರ್ಯಕರ್ತರು  ಉಪಸ್ಥಿತರಿದ್ದರು.