Kannada NewsLatest

ಬೆಳಗಾವಿ ಮಳೆ ಅಂದು ಇಂದು

ಬೆಳಗಾವಿ ಮಳೆ ಅಂದು ಇಂದು

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ

ಅಂದು ಮಳೆಗಾಲವೆಂದರೆ ಆರು ತಿಂಗಳ ಮಳೆಗಾಲ
ಎಡೆಬಿಡದೆ ಜಡಿದು ಬೀಳುವ ಮಳೆ
ಒಬ್ಬರಿಗೊಬ್ಬರು ಕಾಣದಷ್ಟು ಭಾರೀ ಮಳೆ

ಕೊಡೆಗಳು ತಿರುಗು ಮುರುಗು ಆಗುವಂಥ ಮುಸಲಧಾರೆ ಮಳೆ
ಗಿಡಮರಗಳು ಮುರಿದು ಬೀಳುವಂಥ ಮಳೆ
ಕೆಂಪುರಸ್ತೆಗಳು, ರಸ್ತೆಯ ತುಂಬ ನೀರಿನ ಹೊಂಡಗಳು

ರಸ್ತೆಯಗುಂಟ ಕಸಕಡ್ಡಿ-ಕೊಳಚೆ-ದುರ್ಗಂಧ
ಇದು ಐವತ್ತು ವರ್ಷಗಳ ಹಿಂದಿನ ಬೆಳಗಾವಿ
ಅಂದು ಆಗಿತ್ತು ಅದು ನಿಸರ್ಗದ ಬೀಡು

ಐವತ್ತು ವರ್ಷಗಳ ನಂತರ ನೋಡಿ ಇಂದಿನ ಮಳೆಗಾಲ
ಈಗ ಬಂದೆ ಎಂದು ಹೇಳಿ ಬಾರದೆ ಇರುವ ಪ್ರೇಯಸಿಯಂತೆ
ಮಳೆ ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ ಹೊರಟೇಹೋಗುವ ಮಳೆ

ಬಂದರೂ ರಚ್ಚೆ ಹಿಡಿದ ಮಗುವಿನಂತೆ ಸಿಟಿ ಸಿಟಿ ಬೀಳುವ ಮಳೆ
ಟಾರು ರಸ್ತೆಗಳು ಬಂದರೂ ಹೊಂಡಗಳು ಮಾತ್ರ ತಪ್ಪಲಿಲ್ಲ
ಬೆಳಗಾವಿ ಇಂದು ಬರೀ ಸಿಮೆಂಟಿನ ಕಾಡು ರಣ ರಣ ಬಿಸಿಲು

ಬೆಳಗಾವಿ ಎಂದೆಂದೂ ಕಾಣದ ಮುಸಲಧಾರೆ ಮಳೆ ಇಂದು ಕಾಣುತ್ತಿದ್ದೇವೆ. ಕಳೆದ ಹತ್ತಿಪ್ಪತ್ತು ವರುಷಗಳಲ್ಲಿ ಇಂಥ ಮಳೆ ಆಗಿರಲಿಲ್ಲ. 40-50 ವರ್ಷಗಳ ಹಿಂದೆ ಅತಿಯಾದ ಮಳೆಗೆ ಪ್ರಸಿದ್ಧವಾಗಿದ್ದ ಬೆಳಗಾವಿ ಬೆಳೆದಂತೆ, ನೂರಾರು ಬಡಾವಣೆಗಳು ತಲೆ ಎತ್ತಿದಂತೆ ಗಿಡಮರಗಳು ಕಡಿಮೆಯಾಗಿ ಸಿಮೆಂಟ ಕಾಡು ಸೃಷ್ಟಿಯಾಯಿತು.

ಸೃಷ್ಟಿ ತನ್ನ ಕಾರ್ಯವನ್ನು ತಪ್ಪದೆ ಮಾಡುತ್ತಲೇ ಇರುತ್ತದೆ. ಕಾಲಮಾನಗಳಿಗೆ ಸರಿಯಾಗಿ ಬಿಸಿಲು, ಮಳೆ, ಚಳಿ ಅನುಭವಿಸುತ್ತೇವೆ. ನಗರಗಳಲ್ಲಿ ಮಹಾನಗರಗಳಲ್ಲಿ, ಮೆಟ್ರೊ ಸಿಟಿಗಳಲ್ಲಿ ಮಳೆ ಸೃಷ್ಟಿಸುವ ಅನಾಹುತ ಭಯಾನಕವೆನಿಸಿದೆ. ನಗರಗಳಿಗೆ ವಲಸೆ ಹೋಗುವವರ ಪ್ರಮಾಣ ಹೆಚ್ಚಾದಂತೆ ಸಿಕ್ಕ ಸಿಕ್ಕಲ್ಲಿ

ಸಿಕ್ಕಾಪಟ್ಟೆ ಕಾಲನಿಗಳು ಹುಟ್ಟಿಕೊಂಡವು. ಬೆಳಗಾವಿಯಲ್ಲಿ ನ್ಯೂ ಗಾಂಧಿನಗರ ಹಾಗೂ ಅನಿಗೋಳದಲ್ಲಿ ಝಟ್‍ಪಟ್ ಕಾಲನಿ ಹೀಗೆ ಅಸಂಖ್ಯ ಬಡಾವಣೆಗಳು ಬಂದಿವೆ. ಹೀಗೆ ಬಂದಿರುವ ಬಡಾವಣೆಗಳು ಕೆಲವು ಸರಕಾರದ ಅನುಮತಿ ಪಡದೇ ಬಂದಿವೆ. ಇನ್ನು ಹಲವಾರು ನಿವೇಶನಗಳು ಪಂಚಾಯತ್ ಮಿತಿಯೊಳಗೆ ಯಾವದೇ ಸೌಲಭ್ಯಗಳನ್ನು ನಿರ್ಮಿಸದೆ. (ರಸ್ತೆ, ಗಟರು, ನೀರು, ವಿದ್ಯುತ್, ಇತ್ಯಾದಿ) 100/- ರೂ ಬಾಂಡ್ ಮೂಲಕ ಮಾರಾಟವಾಗಿವೆ.

ಬೆಳಗಾವಿಯನ್ನೇ ಉದಾಹರಣೆಯಾಗಿ ನೋಡಿದರೆ ಎಲ್ಲೆಲ್ಲಿ ಬಡಾವಣೆಗಳಾಗಬಾರದೋ ಅಲ್ಲಿ ನಿವೇಶನಗಳನ್ನು ಮಾಡಿ ಮಾರಾಟ ಮಾಡಿದ್ದಾರೆ. ಇದಕ್ಕೆ ಮಹಾನಗರಸಭೆ – ಬುಡಾದವರೇ ಅನುಮತಿ ನೀಡಿದ್ದಾರೆ. ನೋಡಿ ನ್ಯೂ ಗಾಂಧಿ ನಗರ ಹೇಗೆ ಬಂತು? ನಾಗಝರಿ ನಾಲಾ ಗುಂಟ ಟಿಳಕವಾಡಿ-ಬಸವೇಶ್ವರ ಸರ್ಕಲ್, ಶಾಸ್ತ್ರಿ ನಗರಗಳು ಅಸ್ತಿತ್ವಕ್ಕೆ ಬಂದಿಲ್ಲವೆ? ಅನಿಗೋಳದ ಕೆರೆ ಒಂದು ಕಾಲಕ್ಕೆ ಆನೆಗಳ ಮೈದೊಳೆಯುವ ಕೆರೆಯಾಗಿತ್ತು. ಅಲ್ಲಿ ಈಗ ಅಕ್ಕಪಕ್ಕದಲ್ಲಿ ಮನೆಗಳಾಗಿವೆ. ಬಳ್ಳಾರಿ ನಾಲಾದ ಅಕ್ಕಪಕ್ಕದಲ್ಲಿ ಅಕ್ರಮವಾಗಿ ಕಟ್ಟಡಗಳು ಬಂದಿಲ್ಲವೇ? ವೀರಭದ್ರನಗರ, ಜಕ್ಕಿನಹೊಂಡ ಪ್ರದೇಶಗಳು ಕೆರೆಗಳೇ ಆಗಿದ್ದವು. ‘ಹೊಂಡ’ ಶಬ್ದವೇ ಇದನ್ನು ಹೇಳುತ್ತವೆ. ಇಲ್ಲಿ ಮನೆ ನಿರ್ಮಿಸಲು ಯಾರು ಅನುಮತಿ ಕೊಟ್ಟರು. ಈ ಸ್ಥಳದಲ್ಲಿ ನಿವೇಶನ ನಿರ್ಮಿಸಲು ಹಾಗು ಅಭಿವೃದ್ಧಿ ಪಡೆಸಲು ಬಂಡವಾಳ ತೊಡಗಿಸಿದವರು, ನಿವೇಶನ ಖರೀದಿಸುವವರು ಇದೆಲ್ಲ ಗೊತ್ತಿದ್ದೇ ಮಾಡಿದ್ದಾರೆ. ಜಕ್ಕಿನ ಹೊಂಡದ ವಿರುದ್ಧ ದಿಕ್ಕಿನಲ್ಲಿ ಇರುವ ತೆಗ್ಗಿನಪ್ರದೇಶದಲ್ಲಿ ಕಟ್ಟಡಗಳು ಏಳುತ್ತಿಲ್ಲವೇ?

ಹನುಮಾನ ನಗರ ಸರ್ಕಲ್‍ನಲ್ಲಿ ನಾಲಾ ಮೇಲೆ ಒಂದು ಬೃಹತ್ ಕಟ್ಟಡ ಅಕ್ರಮವಾಗಿ ನಿರ್ಮಾಣವಾಗಿದೆ. ನಾಲಾಗಳ ಮೇಲೆ ಅಂಗಡಿ ಮುಂಗಟ್ಟುಗಳನ್ನು ಕಟ್ಟಿಲ್ಲವೇ? ಹಿಂಡಲಗಾ ರೋಡದ ಗಣಪತಿ ದೇವಸ್ಥಾನದ ಹಿಂಭಾಗದಲ್ಲಿ ನಾಲಾ ಮೇಲೆ ಬುಡಾದವರೇ ಮಳಿಗೆಗಳನ್ನು ಕಟ್ಟಿದ್ದಾರೆ. ಜಯನಗರ ಬಡಾವಣೆ ಕೆರೆಯಲ್ಲಿಯೇ ನಿರ್ಮಾಣವಾಗಿದೆ.

ಕಣಬರಗಿ ರೋಡದ ರುಕ್ಮಿಣಿ ನಗರ ತೆಗ್ಗಿನಲ್ಲಿಯೇ ಇಲ್ಲವೇ? ಕೆರೆಗಳಲ್ಲಿ, ತೆಗ್ಗುಪ್ರದೇಶಗಳಲ್ಲಿ ನಿವೇಶನಗಳನ್ನು ನಿರ್ಮಿಸಿ, ಮನೆಗಳನ್ನು ಕಟ್ಟಲು ಅನುಮತಿ ಕೊಡುವವರೂ ನಾವೇ! ಇದೆಲ್ಲ ಗೊತ್ತಿದ್ದೂ ನಿವೇಶನ ಖರೀದಿಸಿ ಮನೆ ಕಟ್ಟುವವರೂ ನಾವೇ! ಹೀಗಿರುವಾಗ ಮನೆಯಲ್ಲಿ ನೀರು ಬರದೆ ಇದ್ದೀತೇ? ಇದಕ್ಕೆ ಯಾರು ಹೊಣೆ? ಎಲ್ಲದಕ್ಕೂ ಸರಕಾರವೇ ಹೊಣೆಯಾಗಬೇಕೇ! ಮಳೆಯಾದರೂ ಸರಕಾರವೇ ಕಾರಣ.

ಮಳೆಯಾಗದಿದ್ದರೂ ಸರಕಾರವೇ ಹೊಣೆ. ಎಲ್ಲದಕ್ಕೂ ಪರಿಹಾರ ಮಾತ್ರ ಬೇಕು. ನೀರು ಹರಿದು ಹೋಗಲು ದಾರಿ ಇಲ್ಲದೆ ಬೆಳೆ ನೀರು ಪಾಲಾಗುತ್ತಿದೆ. ‘ಬಳ್ಳಾರಿ ನಾಲಾ’ ಸಲುವಾಗಿ ಕೋಟ್ಯಾಂತರ ರೂಪಾಯಿ ನೀರಿನಲ್ಲಿ ಹರಿದು ಹೋಗಿದೆ.
ನರ ಕೊಲ್ಲಲ್ ಹರ ಕಾಯ್ವನೇ! ಹರ ಕಾಪಾಡಲಿ.

 ಪ್ರಾ. ಬಿ.ಎಸ್.ಗವಿಮಠ
ಹನುಮಾನ ನಗರ, ಬೆಳಗಾವಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button