Wanted Tailor2
Cancer Hospital 2
Bottom Add. 3

ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರ ಮಿನಿ ಭಾರತ ಇದ್ದ ಹಾಗಿದೆ ; ರಾಜಕೀಯ ಬಿಟ್ಟು ಅಭಿವೃದ್ಧಿ ಚಿಂತೆ ಮಾಡೋಣ- ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರ ಒಂದು ರೀತಿಯಲ್ಲಿ ಮಿನಿ ಭಾರತ ಇದ್ದ ಹಾಗಿದೆ. ಸರ್ವ ಜನಾಂಗದ ಶಾಂತಿಯ ತೋಟದಂತಿದೆ. ಕ್ಷೇತ್ರದಲ್ಲಿ ಕಳೆದ 5 ವರ್ಷದಲ್ಲಿ 105ಕ್ಕೂ ಹೆಚ್ಚು ಮಂದಿರಗಳನ್ನು ಜೀರ್ಣೋದ್ಧಾರ ಇಲ್ಲವೇ ನಿರ್ಮಾಣ ಮಾಡುವ ಮೂಲಕ ಧಾರ್ಮಿಕ ಕ್ಷೇತ್ರವಾಗಿ ಪರಿವರ್ತನೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.

ಶುಕ್ರವಾರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೊಂಡಸಕೊಪ್ಪ ಗ್ರಾಮದ ಶ್ರೀ ವಿಠ್ಠಲ ದೇವರ ಮಂದಿರದ ಅಡಿಗಲ್ಲು ಮತ್ತು ಭೂಮಿ ಪೂಜೆಯ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

 ಪ್ರತಿ ಊರಲ್ಲಿ ಒಂದು, ಎರಡು ದೇವಸ್ಥಾನಗಳು ಹಾಗೂ ಅದಕ್ಕೆ ಸಂಬಂಧಿಸಿದ ಸಮುದಾಯ ಭವನಗಳನ್ನು ನಿರ್ಮಾಣ ಮಾಡಲಾಗಿದೆ. ಕ್ಷೇತ್ರವನ್ನು ಧಾರ್ಮಿಕವಾಗಿ ಇನ್ನಷ್ಟು ಅಭಿವೃದ್ಧಿಪಡಿಸಲು, ಧಾರ್ಮಿಕ ಪ್ರವಾಸಿ ಕ್ಷೇತ್ರವನ್ನಾಗಿ ಬೆಳೆಸಲು ಏನು ಮಾಡಬಹುದು ಎನ್ನುವ ಕುರಿತು ಯೋಚಿಸುತ್ತಿದ್ದೇನೆ ಎಂದೂ ಅವರು ತಿಳಿಸಿದರು.

ದೇವಸ್ಥಾನಗಳಿಂದ ಮಾನಸಿಕ ನೆಮ್ಮದಿ ಸಿಗುತ್ತದೆ, ಗ್ರಾಮದಲ್ಲಿ ಶಾಂತಿ, ಸಮೃದ್ಧಿ ಕಾಣಬಹುದು. ನನಗೆ ದೇವರಲ್ಲಿ ಸದಾ ನಂಬಿಕೆ, ಶೃದ್ಧೆ. ದೇವರು ಇದ್ದಾನೋ, ಇಲ್ಲವೋ ಎನ್ನುವುದಕ್ಕಿಂತ ಆ ಶಕ್ತಿಯನ್ನು ಸ್ಮರಣೆ ಮಾಡಿದಾಗ ಸಿಗುವ ಮನಶ್ಶಾಂತಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ.

ನನಗೆ ಜನರ ಸೇವೆ ಮಾಡಲು ಉತ್ಸಾಹ, ಸ್ಫೂರ್ತಿಗೆ ದೇವರ ಮೇಲಿನ ಭಕ್ತಿ, ನಂಬಿಕೆಯೇ ಕಾರಣ. ಜಾತಿ, ಧರ್ಮ, ಭಾಷೆ ಯಾವುದೇ ಭೇದವಿಲ್ಲದೆ ಎಲ್ಲರೊಂದಿಗೆ ಒಂದಾಗಿ ಕೆಲಸ ಮಾಡುವುದರಿಂದ ನನಗೆ ಮನಸ್ಸಿಗೆ ನೆಮ್ಮದಿ ಸಿಗುತ್ತಿದೆ ಎಂದು ಸಚಿವರು ತಿಳಿಸಿದರು.

ಜಗಜ್ಯೋತಿ ಬಸವೇಶ್ವರರು 12ನೇ ಶತಮಾನದಲ್ಲಿಯೇ ಜಾತೀಯತೆಯನ್ನು ಹೋಗಲಾಡಿಸಲು ಕರೆ ನೀಡಿದ್ದಾರೆ. ಅವರ ಜಾತ್ಯತೀತ ತತ್ವದಲ್ಲಿ ಮುನ್ನಡೆದಾಗ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ನಾನು ಇಡೀ ಕ್ಷೇತ್ರದ ಜನರಲ್ಲಿ ಮನವಿ ಮಾಡುತ್ತೇನೆ, ಚುನಾವಣೆ ಮುಗಿದಿದೆ, ಇನ್ನು 5 ವರ್ಷ ಅಭಿವೃದ್ಧಿಯ ಬಗ್ಗೆ ಯೋಚಿಸೋಣ. ಈಗ ಯಾವುದೇ ರಾಜಕೀಯ ಬೇಡ, ಎಲ್ಲರೂ ಒಂದಾಗಿ ಅಭಿವೃದ್ಧಿಯ ಕುರಿತು ಯೋಚಿಸೋಣ. ನಿಮ್ಮೂರಿಗೆ ಏನಾಗಬೇಕಿದೆ ಎನ್ನುವುದನ್ನು ಒಟ್ಟಾಗಿ ಕುಳಿತು ಯೋಚಿಸಿ, ಯೋಜನೆ ರೂಪಿಸಿ. ನಿಮ್ಮೆಲ್ಲರ ಆಶಿರ್ವಾದದಿಂದ ನಾನು ಈಗ ರಾಜ್ಯದ ಮಂತ್ರಿಯಾಗಿದ್ದೇನೆ, ಹಿಂದಿನದಕ್ಕಿಂತ ಹೆಚ್ಚಿನ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಹಾಗಾಗಿ ಸಾಧ್ಯವಾದಷ್ಟು ಹೆಚ್ಚು ಕೆಲಸಗಳನ್ನು ತರೋಣ, ನಿಮ್ಮೆಲ್ಲರ ಸಹಕಾರ ಸದಾ ಇರಲಿ ಎಂದು ಅವರು ವಿನಂತಿಸಿದರು.

ಕಾರ್ಯಕ್ರಮದಲ್ಲಿ ನಾಂದೇಡದ ಶ್ರೀ ನೀಲಕಂಠಲಿಂಗ ಶಿವಾಚಾರ್ಯ ಸ್ವಾಮಿಗಳು, ಮಾಜಿ ಶಾಸಕರಾದ ರಮೇಶ ಕುಡಚಿ, ಮಲ್ಲಪ್ಪ ಸಾಂಬ್ರೇಕರ್, ಯಲ್ಲಪ್ಪ ಕುರುಬರ, ಸಿಸಿ ಪಾಟೀಲ ಅಣ್ಣ, ಯುವರಾಜ ಕದಂ, ಶ್ವೇತಾ ಡಿ ಆರ್, ಮನೋಹರ್ ಬಾಂಡಗಿ, ಕೇಶವ್ ಚೌಗುಲೆ, ಮಹಾವೀರ ಪಾಟೀಲ, ಗಣಪತಿ ಮಾರಿಹಾಳ್ಕರ್, ಸಚೀನ್ ಸಾಮಜಿ, ಗ್ರಾಮ ಪಂಚಾಯತ್ ಬಸ್ತವಾಡ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Bottom Add3
Bottom Ad 2

You cannot copy content of this page