Kannada NewsKarnataka NewsLatest

ಬೆಳಗಾವಿ ಅಧಿವೇಶನ; ಮೊದಲ ದಿನ ಸಿಎಂ ಪಾಲ್ಗೊಳ್ಳೋದು ಅರ್ಧ ದಿನ ಮಾತ್ರ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸೋಮವಾರ ಬೆಳಗಾವಿಯಲ್ಲಿ ವಿಧಾನಮಂಡಳದ 10 ದಿನಗಳ ಅಧಿವೇಶನ ಆರಂಭವಾಗಲಿದ್ದು, ಬೆಳಗ್ಗೆ 11 ಗಂಟೆಗೆ ವಿಧಾನ ಸಭೆ ಮತ್ತು ವಿಧಾನ ಪರಿಷತ್ ಕಲಾಪಗಳು ಆರಂಭವಾಗಲಿವೆ.

ಈಗಷ್ಟೆ ಬೆಳಗಾವಿ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ತೆರಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಬೆಳಗ್ಗೆ 9.15ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ನಂತರ ವಿಧಾನ ಮಂಡಳ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು, 11 ಗಂಟೆಗೆ ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪಗಳಲ್ಲಿ ಪಾಲ್ಗೊಳ್ಳುವರು.

ಮಧ್ಯಾಹ್ನ 2ಗಂಟೆಗೆ ಬೊಮ್ಮಾಯಿ ಬೆಳಗಾವಿಯಿಂದ ವಿಶೇಷ ವಿಮಾನದಲ್ಲಿ  ವಾರಣಾಸಿಗೆ ತೆರಳಲಿದ್ದಾರೆ. ಹಾಗಾಗಿ ಮೊದಲ ದಿನ ಮುಖ್ಯಮಂತ್ರಿಗಳು ಅರ್ಧ ದಿನವಷ್ಟೆ ಅಧಿವೇಶನದಲ್ಲಿ ಭಾಗವಹಿಸುವರು. ಮಂಗಳವಾರವೂ ಅವರು ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ.

ಕೆಲವೇ ಹೊತ್ತಿನ ಮೊದಲು ಹುಬ್ಬಳ್ಳಿಯಲ್ಲಿ ಅಧಿವೇಶನದ ಸಿದ್ಧತೆ ಕುರಿತು ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಬೆಳಗಾವಿಯಲ್ಲಿ 3 ವರ್ಷಗಳ ನಂತರ ಅಧಿವೇಶನ ನಡೆಯುತ್ತಿದ್ದು, ಇದಕ್ಕಾಗಿ ಸರ್ಕಾರ ಸಂಪೂರ್ಣ ಸಿದ್ಧತೆಗಳನ್ನು ಕೈಗೊಂಡಿದೆ. ಅಧಿವೇಶನದಲ್ಲಿ ಅಭಿವೃದ್ಧಿಯ ಪರವಾದ ಹಾಗೂ ಜನರಿಗೆ ಉಪಯುಕ್ತವಾಗುವ ಚರ್ಚೆಯಾಗಬೇಕೆಂದು ಬಯಸುವುದಾಗಿ ತಿಳಿಸಿದರು.

ಅಧಿವೇಶನದಲ್ಲಿ ಅರ್ಥಪೂರ್ಣ ಚರ್ಚೆಯನ್ನು ನಿರೀಕ್ಷಿಸುತ್ತಿದ್ದು, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿ. ಕೆಲವು ವಿಚಾರಗಳಲ್ಲಿ ನಿರ್ಧಾರಕ್ಕೆ ಬರಬೇಕೆನ್ನುವ ಉದ್ದೇಶವಿದೆ ಎಂದು ತಿಳಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾನುವಾರ ರಾತ್ರಿಯೇ ಬೆಳಗಾವಿಗೆ ಆಗಮಿಸಲಿದ್ದು, ಅಧಿವೇಶನದಲ್ಲಿ ಸಂಪೂರ್ಣವಾಗಿ ಭಾಗಿಯಾಗಲಿದ್ದಾರೆ.

ಸಿದ್ಧತೆ ಪೂರ್ಣ

ನಾಳೆಯಿಂದ ಬೆಳಗಾವಿಯಲ್ಲಿ ಆರಂಭಗೊಳ್ಳಲಿರುವ ವಿಧಾನಮಂಡಳ ಅಧಿವೇಶನಕ್ಕೆ ಸಿದ್ಧತೆಗಳು ಪೂರ್ಣಗೊಳ್ಳುತ್ತಿವೆ. ಅಧಿಕಾರಿಗಳು ವ್ಯವಸ್ಥೆಗಳ ಅಂತಿಮ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಅತಿಥಿಗಳಿಗಾಗಿ ನಗರದ ವಿವಿಧ ಹೊಟೇಲ್‌ಗಳಲ್ಲಿ ಒಟ್ಟು 2100ಕ್ಕೂ ಹೆಚ್ಚು ರೂಂ ಗಳನ್ನು ಕಾಯ್ದಿರಿಸಲಾಗಿದೆ. ಹೊರ ಭಾಗದಿಂದ ಬರುವ ಕೆಲ ಅಧಿಕಾರಿಗಳು ರೊಟೇಶನ್ ಆಧಾರದಲ್ಲಿ ಅಧಿವೇಶನದ ಕಾರ್ಯ ನಿರ್ವಹಿಸಲಿದ್ದಾರೆ. ಹೀಗಾಗಿ ವಸತಿ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಇನ್ನು ಊಟೋಪಚಾರ ವ್ಯವಸ್ಥೆಗೆ ಸಹ ಎಲ್ಲ ಸಿದ್ಧತೆಗಳು ಮುಗಿದಿವೆ ಎಂದು ಅಧಿವೇಶನದ ಉಸ್ತುವಾರಿ ಅಧಿಕಾರಿ ಡಾ. ಸುರೇಶ ಇಟ್ನಾಳ ವಿವರಿಸಿದ್ದಾರೆ.

ವಾಹನ ವ್ಯವಸ್ಥೆ
ಶಾಸಕರು, ಸಚಿವರು, ಹಿರಿಯ ಅಧಿಕಾರಿಗಳ ಸಂಚಾರಕ್ಕಾಗಿ ರಾಜ್ಯದ ಬೇರೆ ಬೇರೆ ಕಡೆಯ ಸರಕಾರಿ ಕಚೇರಿಗಳಿಂದ 30 ಸರಕಾರಿ ಇನ್ನೋವಾ ಕಾರುಗಳು ಹಾಗೂ 20 ಖಾಸಗಿ ಇನ್ನೋವಾ ಕಾರುಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಇತರ ಅಧಿಕಾರಿಗಳು, ಸಿಬ್ಬಂದಿಯ ಸಂಚಾರಕ್ಕಾಗಿ ಒಟ್ಟು 300ಕ್ಕೂ ಹೆಚ್ಚು ಕಾರುಗಳನ್ನು ಬೆಳಗಾವಿಗೆ ತರಿಸಲಾಗಿದೆ ಎಂದು ಅಕಾರಿಗಳು ಮಾಹಿತಿ ನೀಡಿದರು.

ಅಲ್ಲದೆ ಬೆಳಗಾವಿ ನಗರದ ರಸ್ತೆಗಳು ಸಹ ಅಧಿವೇಶನದ ಕಾರಣಕ್ಕೆ ದುರಸ್ತಿ ಕಾಣುತ್ತಿವೆ. ಮಂತ್ರಿಗಳು, ಶಾಸಕರ ಆಗಮನದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ, ಮಹಾನಗರ ಪಾಲಿಕೆಗಳು ತರಾತುರಿಯಲ್ಲಿ ರಸ್ತೆ ರಿಪೇರಿ ಮಾಡುತ್ತಿವೆ.

ಪೊಲೀಸರಿಗೂ ಉತ್ತಮ ವ್ಯವಸ್ಥೆ
ಈ ಬಾರಿಯ ಅಧಿವೇಶನದಲ್ಲಿ ಬೆಳಗಾವಿಯ ಪೊಲೀಸರಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಸೇರಿ ಒಟ್ಟು 4,500ಕ್ಕೂ ಹೆಚ್ಚು ಜನ ಅಧಿವೇಶನದ ಭದ್ರತೆಗಾಗಿ ನಿಯೋಜನೆಗೊಂಡಿದ್ದಾರೆ. ಈ ಮೊದಲಿನ ಅಧಿವೇಶನಗಳ ಸಂದರ್ಭದಲ್ಲಿ ಪೊಲೀಸರ ವಸತಿ ವ್ಯವಸ್ಥೆ ಅಸಮರ್ಪಕವಾಗಿರುವ ಆರೋಪವಿತ್ತು. ಆದರೆ ಈ ಬಾರಿ ಪೊಲೀಸರಿಗೆ ಉತ್ತಮ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಸುವರ್ಣ ವಿಧಾನಸೌಧದ ಬಳಿಯ ಸಿಂದೊಳ್ಳಿ ಗ್ರಾಮದಲ್ಲಿ ಪೊಲೀಸರಿಗೆ ತಾತ್ಕಾಲಿಕ ಟೌನ್‌ಶಿಪ್ ನಿರ್ಮಿಸಲಾಗಿದೆ. ಅಲ್ಲದೇ ಸಾಂಬ್ರಾದ ಏರ್‌ಮನ್ ಟ್ರೇನಿಂಗ್ ಸ್ಕೂಲ್, ಎಂಎಲ್‌ಐಆರ್‌ಸಿ ಕ್ಯಾಂಪ್, ಮಹಿಳಾ ಪೊಲೀಸ್ ಅಕಾರಿಗಳು ಮತ್ತು ಸಿಬ್ಬಂದಿಗೆ ಮಚ್ಚೆಯ ಕೆಎಸ್‌ಆರ್‌ಪಿಯಲ್ಲಿ ಹಾಗೂ ಕಂಗ್ರಾಳಿಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದ್ದು, ಶುದ್ಧ ಕುಡಿಯುವ ನೀರು ಹಾಸಿಗೆ ಹೊದಿಕೆಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬೆಳಗಾವಿಯಲ್ಲಿ ಸಿದ್ಧವಾಗಿದೆ ಪೊಲೀಸ್ ಟೌನ್ ಶಿಪ್, ಏಕೆ ಗೊತ್ತೇ?

ಇನ್ನು ಅಧಿವೇಶನಕ್ಕೆ ಸುವರ್ಣ ವಿಧಾನಸೌಧದಲ್ಲಿನ ವ್ಯವಸ್ಥೆ ಕುರಿತು ಮಾಹಿತಿ ನೀಡಿದ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಈಗಾಗಲೇ ಸಿದ್ಧತೆಗಳ ಕುರಿತು ಎರಡು ಬಾರಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಆಸನಗಳ ವ್ಯವಸ್ಥೆ, ಮೈಕ್ ಇತ್ಯಾದಿ ಸಮರ್ಪಕವಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.

 

 ರಾಜ್ಯದಲ್ಲಿ ಮತ್ತೊಂದು ಒಮಿಕ್ರಾನ್ ಕೇಸ್ ಪತ್ತೆ…!

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button