GIT add 2024-1
Kore@40
Beereshwara 33

*ಬೆಳಗಾವಿ ಅಧಿವೇಶನ ವಿಶೇಷ: ಬೇಗ ಬರುವ ಶಾಸಕರಿಗೆ ಗಿಫ್ಟ್!*

Anvekar 3
Cancer Hospital 2

ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಸಿದ್ಧತೆಗಳು ಪೂರ್ಣ


ಉತ್ತರ ಕರ್ನಾಟಕ ಚರ್ಚೆಗೆ ಹೆಚ್ಚಿನ ಆದ್ಯತೆ: ವಿಧಾನಸಭಾಧ್ಯಕ್ಷ ಯು.ಟಿ.ಖಾದರ್


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ಸುವರ್ಣ ವಿಧಾನಸೌಧ : 16ನೇ ವಿಧಾನಸಭೆಯ ವಿಧಾನಮಂಡಲದ ಚಳಿಗಾಲದ ಅಧಿವೇಶನವು ಡಿ.04ರಿಂದ 15ರವರೆಗೆ ನಡೆಯಲಿದ್ದು, ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಬಾರಿಯ ಅಧಿವೇಶನದಲ್ಲಿ ರಾಜ್ಯದ ಎಲ್ಲ ಭಾಗಗಳ ವಿಷಯಗಳ ಚರ್ಚೆಯ ಜೊತೆಗೆ ಉತ್ತರ ಕರ್ನಾಟಕ ಭಾಗಕ್ಕೆ ಪ್ರಯೋಜನವಾಗುವ ಚರ್ಚೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ತಿಳಿಸಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ಭಾನುವಾರ ಮಧ್ಯಾಹ್ನ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸದನದ ಕಲಾಪಗಳಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ವಿಷಯಗಳೊಂದಿಗೆ ಉತ್ತರ ಕರ್ನಾಟಕದ ಪ್ರಗತಿಯ ಕುರಿತ ಚರ್ಚೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ ಸಭಾಧ್ಯಕ್ಷ ಖಾದರ್ ಅವರು ಅಧಿವೇಶನಕ್ಕೆ ಆಗಮಿಸುವ ಸಚಿವರು, ಶಾಸಕರು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳಿಗೆ ಆಹಾರ, ವಸತಿ ಸೇರಿದಂತೆ ಎಲ್ಲ ರೀತಿಯ ಉತ್ತಮ ಗುಣಮಟ್ಟದ ಸೌಕರ್ಯಗಳನ್ನು ಒದಗಿಸಲಾಗಿದೆ. ಸುವರ್ಣಸೌಧದ ಸೌಂದರ್ಯೀಕರಣ ಹೆಚ್ಚಿಸಲು ಈ ವೈಭವಯುತ ಕಟ್ಟಡಕ್ಕೆ ಕಾಯಂ ಎಲ್‌ಇಡಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ಮುಂದಿನ 10 ವರ್ಷಗಳ ಕಾಲ ನಿರ್ವಹಣೆಗೆ ಕ್ರಮ ವಹಿಸಲಾಗಿದೆ. ಈ ಮುಂಚೆ ಅಧಿವೇಶನದ ಸಂದರ್ಭದಲ್ಲಿ ಮಾತ್ರ ವಿದ್ಯುತ್‌ದೀಪ ಅಲಂಕಾರ ಮಾಡಲಾಗುತ್ತಿತ್ತು; ಇನ್ಮುಂದೆ ಅಧಿವೇಶನದ ಜೊತೆಗೆ ಶನಿವಾರ, ಭಾನುವಾರ ಮತ್ತು ರಾಷ್ಟ್ರೀಯ ಹಬ್ಬಗಳ ದಿನಗಳಂದು ವಿದ್ಯುತ್‌ ದೀಪಗಳ ಅಲಂಕಾರ ಮಾಡುವ ಮುಖಾಂತರ ವಿದ್ಯಾರ್ಥಿಗಳು, ಪ್ರವಾಸಿಗರನ್ನು ಆಕರ್ಷಿಸಲಾಗುವುದು ಎಂದರು.


ಕಲಾಪಗಳ ವೀಕ್ಷಣೆ; ವಿದ್ಯಾರ್ಥಿಗಳ ಅವಧಿ ಹೆಚ್ಚಳ:

ಈ ಹಿಂದೆ ವಿಧಾನಮಂಡಲದ ಉಭಯ ಸದನಗಳ ಕಲಾಪಗಳ ವೀಕ್ಷಣೆಗೆ ವಿದ್ಯಾರ್ಥಿಗಳಿಗೆ ಕೇವಲ 10 ನಿಮಿಷಗಳ ಅವಧಿ ನೀಡಲಾಗಿತ್ತು; ಈ ಬಾರಿ ಈ ಅವಧಿಯನ್ನು 20ರಿಂದ 30 ನಿಮಿಷಗಳಿಗೆ ಹೆಚ್ಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಕಲಾಪಗಳ ವೀಕ್ಷಣೆಗೆ ಆಗಮಿಸುವ ವೀಕ್ಷಕರಿಗೆ ಕಲಾಪಗಳ ವೀಕ್ಷಣೆಗೂ ಮುನ್ನ ಆಡಿಟೋರಿಯಂನಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಸಂವಿಧಾನದ ಮೌಲ್ಯಗಳು, ಪ್ರಜಾಪ್ರಭುತ್ವದ ವ್ಯವಸ್ಥೆ ಕುರಿತು ತಿಳಿಸಿಕೊಡಲಾಗುವುದು ಮತ್ತು ಸಾಕ್ಷ್ಯ ಚಿತ್ರದ ಮೂಲಕ ಅವರಿಗೆ ಅರಿವು ಮೂಡಿಸಲಾಗುವುದು; ಈ ಸಂದರ್ಭದಲ್ಲಿ ಮಕ್ಕಳಿಗೆ ತಂಪುಪಾನೀಯ ಮತ್ತು ಚಾಕ್‌ಲೇಟ್‌ಗಳನ್ನು ನೀಡಿ ಜನತಂತ್ರ ವ್ಯವಸ್ಥೆಯ ಬಗ್ಗೆ ಮಕ್ಕಳಲ್ಲಿ ಪ್ರೀತಿ ಹೆಚ್ಚಿಸಲಾಗುವುದು ಎಂದರು.


ಬೇಗ ಬರುವ ಶಾಸಕರಿಗೆ ಗಿಫ್ಟ್!: ವಿಧಾನಸಭಾ ಕಲಾಪಕ್ಕೆ ಅಗತ್ಯವಿರುವ ಕೋರಂ ಹಾಜರಾತಿಯನ್ನು ನಿಗದಿತ ಸಮಯದೊಳಗೆ ಸೇರುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೊದಲು ಬರುವ 25 ಶಾಸಕರಿಗೆ ಅವರು ಬೇಗ ಬಂದ ದಿನಗಳ ಹಾಜರಾತಿ ಆಧರಿಸಿ ಭಾರತ ಸರಕಾರ ಮತ್ತು ಕರ್ನಾಟಕ ಸರಕಾರದ ಲಾಂಛನಗಳಿರುವ ಟೀ ಕಪ್ ಮತ್ತು ಸಾಸರ್‌ಗಳನ್ನು ನೀಡಲಾಗುವುದು.
ಈ ಬಾರಿಯ ಚಳಿಗಾಲದ ಅಧಿವೇಶನಕ್ಕೆ ಇದುವರೆಗೆ 2512 ಪ್ರಶ್ನೆಗಳು ಮತ್ತು ಗಮನಸೆಳೆಯುವ ಸೂಚನೆಗಳು ಸ್ವೀಕೃತವಾಗಿವೆ. 3 ಸುಗ್ರೀವಾಜ್ಞೆಗಳು ಮಸೂದೆ ರೂಪದಲ್ಲಿ ಮಂಡನೆಯಾಗಲಿವೆ. ಕಲಾಪ ಸಲಹಾ ಸಮಿತಿ ಸಭೆಯ ಮುಂದೆ ಹೆಚ್ಚಿನ ಮಸೂದೆಗಳು, ಬಿಲ್‌ಗಳು ಬರುವ ನಿರೀಕ್ಷೆ ಇದೆ ಎಂದು ಸಭಾಧ್ಯಕ್ಷ ಖಾದರ್ ಅವರು ಹೇಳಿದರು.


ಸಾಂಸ್ಕೃತಿಕ ಕಲೆಗಳ ಪ್ರದರ್ಶನ:

Emergency Service

ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣವಾಗಿ 50 ವರ್ಷಗಳಾಗಿರುವ ಈ ಸುವರ್ಣ ಸಂಭ್ರಮದ ಆಚರಣೆಯ ಭಾಗವಾಗಿ ಸುವರ್ಣಸೌಧದ ವೈಭವೋಪೇತ ಮೆಟ್ಟಿಲುಗಳ ಮುಂಭಾಗದಲ್ಲಿ ಈ ಬಾರಿ ಪ್ರತಿದಿನ ಬೆಳಗ್ಗೆ 9ರಿಂದ 11 ರವರೆಗೆ ವಿದ್ಯಾರ್ಥಿಗಳಿಂದ ರಾಜ್ಯದ ವಿವಿಧ ಭಾಗಗಳ ಸಾಂಸ್ಕೃತಿಕ ಕಲೆಗಳ ಬಿಂಬಿಸುವ ಪ್ರದರ್ಶನ ನಡೆಯಲಿದೆ. ಡಿ.12ರಂದು ಆಳ್ವಾಸ್ ಸಂಸ್ಥೆಯ ಕಲಾತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಲೆಗಳು ಅನಾವರಣಗೊಳ್ಳಲಿವೆ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭಾ ಕಾರ್ಯದರ್ಶಿ ವಿಶಾಲಾಕ್ಷಿ, ವಿಧಾನಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮತ್ತಿತರರು ಇದ್ದರು.


ಮಾಧ್ಯಮ ಕೇಂದ್ರಕ್ಕೆ ಭೇಟಿ:

ಸುವರ್ಣಸೌಧದಲ್ಲಿ ಸ್ಥಾಪಿಸಲಾಗಿರುವ ಮಾಧ್ಯಮ ಕೇಂದ್ರಕ್ಕೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮತ್ತು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಭಾನುವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಮಾಧ್ಯಮ ಕೇಂದ್ರದಲ್ಲಿ ಅಳವಡಿಸಲಾಗಿರುವ ಕಂಪ್ಯೂಟರ್,ಇಂಟರ್‌ನೆಟ್ ವ್ಯವಸ್ಥೆ, ನೇರ ಪ್ರಸಾರ ವೀಕ್ಷಣೆಗೆ ಕಲ್ಪಿಸಲಾಗಿರುವ ವ್ಯವಸ್ಥೆ ಸೇರಿ ಇನ್ನಿತರ ಸೌಕರ್ಯಗಳನ್ನು ವೀಕ್ಷಿಸಿದರು.

ಈ ಬಾರಿಯ ಪ್ರತಿಭಟನೆಗಳ ಸಂಖ್ಯೆ ಇಳಿಮುಖ ನಿರೀಕ್ಷೆ
ಪರಿಷತ್‌ನಲ್ಲಿ ಎರಡು ದಿನಗಳ ಕಾಲ ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಚರ್ಚೆ: ಸಭಾಪತಿ ಬಸವರಾಜ ಹೊರಟ್ಟಿ


ಡಿ.4ರಿಂದ ಆರಂಭವಾಗಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ವಿಧಾನಪರಿಷತ್‌ನಲ್ಲಿ ಎರಡು ದಿನಗಳ ಕಾಲ ಮಹದಾಯಿ, ಕೃಷ್ಣಾ, ಬರಗಾಲದ ಸಮಸ್ಯೆ ಸೇರಿದಂತೆ ಉತ್ತರ ಕರ್ನಾಟಕದ ಪ್ರಮುಖ ಸಮಸ್ಯೆಗಳ ಕುರಿತು ಗಂಭೀರ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ಭಾನುವಾರ ಮಧ್ಯಾಹ್ನ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಯಾವುದೇ ಭಾಗದ ಶಾಸಕರು ಉತ್ತರ ಕರ್ನಾಟಕದ ವಿಷಯಗಳ ಕುರಿತು ಚರ್ಚೆಗೆ ಆಸಕ್ತಿ ತೋರಿದರೆ ಮೊದಲ ಆದ್ಯತೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ ಸಭಾಪತಿ ಹೊರಟ್ಟಿ ಅವರು ಈ ಬಾರಿ ಪ್ರತಿಭಟನೆಗಳ ಸಂಖ್ಯೆ ಕಡಿಮೆಗೊಳಿಸಲು ಸಂಬಂಧಿಸಿದ ಸಚಿವರು ಸಂಘ-ಸಂಸ್ಥೆಗಳು ಮತ್ತು ಹೋರಾಟಗಾರರೊಂದಿಗೆ ಚರ್ಚಿಸಿದ್ದಾರೆ. ಬೆಳಗಾವಿ ಅಧಿವೇಶನವೆಂದರೇ ಪ್ರತಿಭಟನೆಗಳ ಅಧಿವೇಶನವೆಂಬ ಹಣೆಪಟ್ಟಿ ಅಳಿಸಿಹಾಕಲು ಕ್ರಮವಹಿಸಬೇಕೆಂದು ಸೂಚಿಸಿ ತಾವು ಮುಖ್ಯಮಂತ್ರಿಗಳು ಹಾಗೂ ಸಚಿವರಿಗೆ ಪತ್ರ ಬರೆದಿದನ್ನು ಉಲ್ಲೇಖಿಸಿದ ಅವರು ಈ ಹಿನ್ನೆಲೆಯಲ್ಲಿ ಈ ಬಾರಿ ಪ್ರತಿಭಟನೆಗಳು ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇದೆ ಎಂದರು.
ವಿಧಾನಪರಿಷತ್ ಕಲಾಪಗಳಿಗೆ ಈವರೆಗೆ 1207 ಪ್ರಶ್ನೆಗಳು ಸ್ವೀಕೃತವಾಗಿವೆ; ಅವುಗಳಲ್ಲಿ 1057 ಚುಕ್ಕೆ ರಹಿತ ಪ್ರಶ್ನೆಗಳಾಗಿವೆ. ನಿಯಮ 72ರ ಅಡಿ 111 ಪತ್ರಗಳು ಸ್ವೀಕೃತವಾಗಿವೆ. ಕಲಾಪಸೂಚಿಗೆ ಸಾಕಷ್ಟು ವಿಷಯಗಳಿವೆ ಎಂದರು.
ಈ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್, ವಿಧಾನಸಭಾ ಕಾರ್ಯದರ್ಶಿ ವಿಶಾಲಾಕ್ಷಿ, ವಿಧಾನಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮತ್ತಿತರರು ಇದ್ದರು.

Laxmi Tai add
Bottom Add3
Bottom Ad 2