ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಳ್ಳಾರಿಯ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ಸಂಭವಿಸಿದ್ದ ಕಾರು ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಕಾರು ಅಪಘಾತದ ವೇಳೆ ಕಾರನ್ನು ಸಚಿವಾ ಆರ್.ಅಶೋಕ್ ಪುತ್ರ ಚಲಾಯಿಸುತ್ತಿದ್ದರು ಎಂಬ ಆರೋಪಗಳು ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿದ ಸಚಿವ ಅಶೋಕ್, ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ ಬಗ್ಗೆ ಬೇಸರವಿದೆ. ಆದರೆ ಅಪಘಾತ ಮಾಡಿದ ಕಾರಿಗೂ ಹಾಗೂ ಅದು ನೋಂದಣಿ ಹೊಂದಿರುವ ಸಂಸ್ಥೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದರು.
ಅಪಘಾತದ ಬಳಿಕ ಸಾವನ್ನಪ್ಪಿದ ಯುವಕನ ಕುಟುಂಬಸ್ಥರೇ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪ್ರಕರಣ ತನಿಖಾ ಹಂತದಲ್ಲಿ ಇರೋದರಿಂದ ಮಂತ್ರಿಯಾಗಿರುವದರಿಂದ ಹೆಚ್ಚು ಮಾತನಾಡಬಾರದು. ತನಿಖೆ ವೇಳೆ ಹೇಳಿಕೆ ನೀಡಿದ್ರೆ ಕಾನೂನಿನ ಪ್ರಕಾರ ಸರಿ ಅಲ್ಲ ಎಂದು ಹೇಳಿದರು.
ಈ ವೇಳೆ ಕಾರು ಚಲಾಯಿಸಿದ್ದು ನಿಮ್ಮ ಪುತ್ರನೇ? ಕಾರಿನಲ್ಲಿ ನಿಮ್ಮ ಪುತ್ರ ಇದ್ದರೇ ಎಂಬ ಪ್ರೆಶ್ನೆಗೆ ನೇರಾವಾಗಿ ಉತ್ತರಿಸದ ಆರ್.ಅಶೋಕ್, ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಎಫ್ ಐ ಆರ್ ನಲ್ಲಿ ನನ್ನ ಮಗನ ಹೆಸರಿಲ್ಲ. ಕಾನೂನು ಮೀರಿ ಯಾರು ಇಲ್ಲ. ತನಿಖೆ ವೇಳೆ ತಪ್ಪಿತಸ್ಥರ ವಿರುದ್ಧ ಅಧಿಕಾರಿಗಳು ಕ್ರಮಕೈಗೊಳ್ಳುತ್ತಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಪರ ಮತ್ತು ವಿರೋಧ ಮಾತನಾಡಲ್ಲ. ಮಾಧ್ಯಮಗಳಲ್ಲಿ ನನ್ನ ಮಗ ಸಹ ಕಾರಿನಲ್ಲಿದ್ದ ಎಂದು ಬಿತ್ತರವಾಗುತ್ತಿದೆ. ಆದ್ರೆ ಈ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಲಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ