
ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ಬಳ್ಳಾರಿಯಲ್ಲಿ ರಾಜಕಾರಣಿಗೆ ಸೇರಿದ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನಲ್ಲಿ ಸಚಿವ ಆರ್.ಅಶೋಕ್ ಪುತ್ರ ಇರಲಿಲ್ಲ. ಕಾರು ಚಲಾವಣೆ ಮಾಡುತ್ತಿದ್ದವರು ರಾಹುಲ್ ಎಂಬ ವ್ಯಕ್ತಿ ಎಂದು ಎಸ್‍ಪಿ ಸಿ.ಕೆ ಬಾಬಾ ಸ್ಪಷ್ಟಪಡಿಸಿದ್ದಾರೆ.
ಘಟನೆ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಎಸ್.ಪಿ ಸಿ.ಕೆ ಬಾಬಾ, ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿಯ ಹೆಸರು ರಾಹುಲ್. ಕಾರಿನಲ್ಲಿ ಒಟ್ಟು ನಾಲ್ವರಿದ್ದರು. ಕಾರಿನಲ್ಲಿದ್ದ ಓರ್ವ ವ್ಯಕ್ತಿ ಕೂಡ ಸಾವನ್ನಪ್ಪಿದ್ದು, ಉಳಿದವರಿಗೆ ಗಾಯಗಳಾಗಿವೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಕಾರಲ್ಲಿದ್ದ ಸಚಿನ್ ಮೃತಪಟ್ಟಿದ್ದಾರೆ ಎಂದರು.
ರಾಹುಲ್ ಕೂಡ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಗಿದೆ. ಇನ್ನು ಅಪಘಾತದಲ್ಲಿ ರವಿ ನಾಯಕ್ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದರು.
ಫೆಬ್ರವರಿ 10 ರಂದು ಮಧ್ಯಾಹ್ನ ಮರಿಯಮ್ಮನ ಹಳ್ಳಿ ಬಳಿ ಅಪಘಾತ ಆಗಿದೆ, ಮರ್ಸಿಡೀಜ್ ಬೆಂಜ್ ಕಾರನಿಂದ ಅಪಘಾತ ಸಂಭವಿಸಿದೆ. ಸಚಿವ ಆರ್ ಅಶೋಕ್ ಅವರ ಪುತ್ರ ಕಾರಿನಲ್ಲಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಕಾರಿನಲ್ಲಿ ಸಚಿವರ ಪುತ್ರ ಇರಲಿಲ್ಲ. ಇದರಲ್ಲಿ ಪೊಲೀಸರು ಯಾವುದೇ ಕರ್ತವ್ಯ ಲೋಪ ಮಾಡಿಲ್ಲ. ಘಟನೆ ನಡೆಯುತ್ತಿದ್ದಂತೆ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಘಟನೆ ನಡೆದ ಸ್ಥಳ ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಅತಿಯಾದ ವೇಗ ಅಪಘಾತಕ್ಕೆ ಕಾರಣ ಆಗಿರಬಹುದು. ಕಾರು ಯಾರಿಗೆ ಸೇರಿದ್ದು ಎಂಬುವುದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ