ಎಲ್ಲಾ ಧರ್ಮದವರು ಅಣ್ಣ-ತಮ್ಮಂದಿರು ಎಂದ ಸೋಮಶೇಖರ ರೆಡ್ಡಿ

ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ಪೌರತ್ವ ತಿದ್ದುಪಡಿ ಕಾಯ್ದೆ ಪರ ನಡೆದ ಪ್ರತಿಭಟನೆಯಲ್ಲಿ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಬೇರೆ ದೇಶದವರ ಕುರಿತು ನಾನು ಹೇಳಿದ್ದೇ ಹೊರತು ಬಳ್ಳಾರಿಯ ಒಂದು ಸಮುದಾಯಕ್ಕೆ ಸಂಬಂಧಿಸಿದಂತೆ ನಾನು ಆ ಹೇಳಿಕೆ ನೀಡಿಲ್ಲ, ಬಳ್ಳಾರಿಯಲ್ಲಿ ನಾವೆಲ್ಲ ಸಹೋದರರಂತೆ ಬದುಕುತ್ತಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಸಿಎಎ ಕುರಿತು ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಸೋಮಶೇಖರ ರೆಡ್ಡಿ, ಸಿಎಎ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಸಾರ್ವಜನಿಕ ಆಸ್ತಿಪಾಸ್ತಿಗಳು ಹಾನಿಯಾಗಿವೆ. ಇದನ್ನು ನೋಡಿದಾಗ ಬೇಜಾರಾಗಿ ನಾನು ಹೇಳಿದೆ. ಆದರೆ ಅದನ್ನು ನಾನು ನಮ್ಮ ದೇಶದಲ್ಲಿರುವವರಿಗೆ ಹೇಳಿಲ್ಲ, ಬೇರೆ ದೇಶದವರ ಬಗ್ಗೆ ಹೇಳಿದ್ದು. ಭಾರತದಲ್ಲಿರುವ ಎಲ್ಲಾ ಧರ್ಮದವರು ಅಣ್ಣ-ತಮ್ಮಂದಿರು. ಯಾವ ಧರ್ಮ ಆದರೇನು ಭಾರತದಲ್ಲಿ ಹುಟ್ಟಿದವರು ಎಲ್ಲರೂ ಭಾರತೀಯರೇ ಹಾಗಾಗಿ ನಾವೆಲ್ಲ ಸಹೋದರರಂತೆ ಎಂದರು.

ಸಿಎಎ ಜಾರಿಯಿಂದ ನಮ್ಮದೇಶದಲ್ಲಿರುವ ಯಾರೊಬ್ಬರಿಗೂ ಯಾವುದೇ ತೊಂದರೆಯಾಗಲ್ಲ. ಭಾರತದಲ್ಲಿ ಹುಟ್ಟಿಬೆಳೆದ ಯಾರೇ ಆಗಿರಲಿ ಅವರೆಲ್ಲರೂ ಭಾರತೀಯರೇ. ಹಾಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಯಾವುದೇ ಅಡ್ಡಿಯಾಗಲ್ಲ. ಹೊರಗಿಂದ ಬಂದವರಿಗೆ ಪೌರತ್ವ ನೀಡಲು ಈ ಕಾನೂನು ಅನುಕೂಲ ಮಾಡಲಿದೆ ಎಂದು ಹೇಳಿದರು.

ಮುಸ್ಲೀಂ ಸಮುದಾಯದ ಸಹೋದರರು ಅಮಾಯಕರು, ಅನಗತ್ಯವಾಗಿ ಕಾಂಗ್ರೆಸ್ ನಾಯಕರು ಅವರನ್ನು ಬಳಸಿಕೊಂಡು ಗೊಂದಲ ಸೃಷ್ಟಿಸಿ, ಅವರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ದೇಶದಲ್ಲಿರುವ ಪ್ರತಿಯೊಬ್ಬ ಪೌರನು ಈ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಹೆಚ್ಚಿನ ಸುದ್ದಿಗಳಿಗೆ ಲೈಕ್ ಮಾಡಿ – https://www.facebook.com/Pragativahini/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button