ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡಿದ್ದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಇದೀಗ ಪ್ರತಿಭಟನೆ ನಡೆಸುತ್ತಿದ್ದಾರೆ.
ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಚನ್ನಮ್ಮ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಚನ್ನಮ್ಮ ತಮ್ಮ ಆಡಳಿತಾವಧಿಯಲ್ಲಿ ಸರ್ಕಾರದ ನಿಯಮಾವಳಿಯಂತೆ 15 ಲಕ್ಷ ಖರ್ಚು ಮಾಡಿದ್ದರು. ಆದರೆ ಈ ಹಣವನ್ನು ಬಳ್ಳಾರಿ ಜಿ.ಪಂ. ಸಿಇಓ ಬಿಡುಗಡೆಯಾಗದಂತೆ ಲಾಕ್ ಮಾಡಿದ್ದಾರೆ ಎಂದು ಇದೀಗ ಮಹಿಳೆ ಆರೋಪಿಸುತ್ತಿದ್ದಾರೆ.
ಕೇಂದ್ರ ಸರ್ಕಾರದಿಂದ ನೇರವಾಗಿ ಹಣ ಬರಬೇಕಿತ್ತು. ಆದರೆ ಸಿಇಓ ಅಕೌಂಟ್ ಲಾಕ್ ಹಿನ್ನೆಲೆ ಹಣ ಬಿಡುಗಡೆಯಾಗಿಲ್ಲ. ಸಾಲ ಮಾಡಿ ಕೊರೊನಾ ನಿಯಂತ್ರಣಕ್ಕೆ ಹಣ ಖರ್ಚು ಮಾಡಿದ್ದೇನೆ. ಗ್ರಾಮದಲ್ಲಿ ಫಾಗಿಂಗ್, ಬ್ಲೀಚಿಂಗ್, ಔಷಧ ಸಿಂಪಡಣೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸೇರಿ ಅಭಿವೃದ್ಧಿಗೆ 15 ಲಕ್ಷ ಖರ್ಚು ಮಾಡಿರುವುದಾಗಿ ಮಹಿಳೆ ತಿಳಿಸಿದ್ದಾರೆ.
ಸಾಲ ಮಾಡಿ ಅಭಿವೃದ್ಧಿ ಮಾಡಿದ್ದ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮಹಿಳೆ ಗ್ರಾಮ ಪಂಚಾಯ್ತಿ ಎದುರು 3 ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಹಣ ಬಿಡುಗಡೆಯಾಗುವವರೆಗೂ ಹೋರಾಟ ಮುಂದುವರೆಸುವುದಾಗಿ ಪಟ್ಟುಹಿಡಿದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ