
ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ರಸ್ತೆಗಳು ಜಲಾವೃತಗೊಂಡು ನದಿಯಂತಾಗಿವೆ.
ಬೆಂಗಳೂರಿನಾದ್ಯಂತ ಸಂಜೆಯಾಗುತ್ತಿದ್ದಂತೆ ಆರಂಭವಾದ ಮಳೆಯ ಅಬ್ಬರ ನಿರಂತರವಾಗಿ ಸುರಿಯುತ್ತಿದ್ದು, ಫ್ಲೈಓವರ್ ಗಳು, ಪ್ರಮುಖ ರಸ್ತೆಗಳೇ ಜಲಾವೃತಗೊಂಡಿವೆ. ಪ್ರಮುಖ ರಸ್ತೆಗಳ ಪರಿಸ್ಥಿತಿಯೇ ಹೀಗಾದರೆ ಇನ್ನು ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಗುಂಡಿಮಯ ರಸ್ತೆಗಳಂತು ತುಂಬಿ ಹರಿಯುತ್ತಿದ್ದು, ಚರಂಡಿ ನೀರು ರಸ್ತೆಗಳಿಗೆ ನುಗ್ಗಿ ಬೋರ್ಗರೆದು ಹರಿಯುತ್ತಿವೆ. ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ತಗ್ಗು ಪ್ರದೇಶಗಳಿಗೆ, ಮನೆಗಳಿಗೆ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗಿವೆ. ಒಂದೆಡೆ ವೀಕೆಂಡ್ ಹಿನ್ನೆಲೆಯಲ್ಲಿ ಊರಿಗೆ ಹೋಗುವ ಜನರು ಹಾಗೂ ಕಚೇರಿ ಕೆಲಸ ಕಾರ್ಯ ಮುಗಿಸಿ ಮನೆಗೆ ತೆರಳುತ್ತಿರುವ ಜನರು ಮಳೆಯಲ್ಲಿ ಸಿಲುಕಿ ಸಂಕಷ್ಟಪಡುವ ಸ್ಥಿತಿ ಎದುರಾಗಿದೆ.
ಹಲವೆಡೆ ಟ್ರಾಫಿಕ್ ಜಾಮ್ ಸಂಭವಿಸಿದ್ದು, ರಸ್ತೆ ಮಧ್ಯೆಯೇ ಸಿಲುಕಿ ಒದ್ದಾಡುವಂತಾಗಿದೆ. ಮತ್ತೊಂದೆಡೆ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಬೆಂಗಳೂರಿಗರ ಸ್ಥಿತಿ ದೇವರಿಗೆ ಪ್ರೀತಿ ಎಂಬಂತಾಗಿದೆ. ವಿಧಾನಸೌಧ, ಮೆಜೆಶ್ತಿಕ್, ಕೆ.ಆರ್.ಮಾರುಕಟ್ಟೆ, ಜಯನಗರ, ಶಾಂತಿ ನಗರ, ಆರ್.ಆರ್.ನಗರ, ರಿಚ್ಮಂಡ್ ಸರ್ಕಲ್, ವಿಜಯನಗರ, ಗಿರಿನಗರ, ರಾಜಾಜಿನಗರ, ಮೈಸೂರು ರಸ್ತೆ, ನಾಯಂಡಹಳ್ಳಿ, ಕೆಂಗೇರಿ, ಉತ್ತರಹಳ್ಳಿ, ಮಲ್ಲೇಶ್ವರಂ, ಎಲೆಕ್ಟ್ರಾನಿಕ್ ಸಿಟಿ, ಹೆಚ್ ಎಸ್ ಆರ್ ಲೇಔಟ್, ಬನಶಂಕರಿ, ಜೆಪಿ ನಗರ, ಪದ್ಮನಾಭನಗರ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ಗುಂಡಿಮಯ ರಸ್ತೆಗಳಲ್ಲಿ ನೀರು ತುಂಬಿ ಸಂಚಾರಕ್ಕೂ ಸಂಕಷ್ಟ ಎದುರಾಗಿದೆ.