*ತುಳು ಭಾಷೆಗೆ ಕರ್ನಾಟಕದಲ್ಲಿ ಹೆಚ್ಚುವರಿ ಭಾಷೆ ಸ್ಥಾನಮಾನ :ಚರ್ಚಿಸಿ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ*
ಕಂಬಳ ಬೆಂಗಳೂರಿನಲ್ಲಿ ಪ್ರತಿ ವರ್ಷ ಮುಂದುವರೆಸುವಂತಾಗಬೇಕು
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕದಲ್ಲಿ ತುಳು ಭಾಷೆಗೆ ಹೆಚ್ಚುವರಿ ಭಾಷೆಯ ಸ್ಥಾನಮಾನ ದೊರಕಬೇಕೆಂದು ಕೋರಿಕೆಯಿದ್ದು ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವರೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಅವರು ಇಂದು ಬೆಂಗಳೂರು ಕಂಬಳ ಸಮಿತಿ ಇವರ ವತಿಯಿಂದ ಬೆಂಗಳೂರಿನ ಅರಮನೆ ಮೈದಾನ ದಲ್ಲಿ ಆಯೋಜಿಸಿರುವ ಕಂಬಳ ಉತ್ಸವ ಹಾಗೂ ತುಳುನಾಡಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಂಬಳ ಕರಾವಳಿ ಭಾಗದ ಜನಪ್ರಿಯ ಕ್ರೀಡೆ. ಮಂಗಳೂರು, ಉಡುಪಿ ಜಿಲ್ಲೆಗಳ ಜಾನಪದ ಕ್ರೀಡೆ. ಅಶೋಕ್ ರೈ ಅವರ ನೇತೃತ್ವದಲ್ಲಿ ಕರಾವಳಿ ಪ್ರದೇಶದ ಜಾನಪದ ಕ್ರೀಡೆಯನ್ನು ಬೆಂಗಳೂರು ನಗರಕ್ಕೆ ಪರಿಚಯಿಸುವುದು ನಿಜಕ್ಕೂ ಶ್ಲಾಘನೀಯ ಎಂದರು.
ಕ್ರೀಡೆ ಪ್ರೋತ್ಸಾಹಿಸುವ ಅವಕಾಶ
ಕಂಬಳ ನೋಡಲು ಇಷ್ಟು ಜನರು ಆಗಮಿಸುವ ನಿರೀಕ್ಷೆ ಇರಲಿಲ್ಲ. ಕಂಬಳ ಕರಾವಳಿ ಪ್ರದೇಶದ ಕ್ರೀಡೆಯಾದಾರೂ ಬೆಂಗಳೂರಿನಲ್ಲಿ ಲಕ್ಷಾಂತರ ಜನ ಕರಾವಳಿ ಪ್ರದೇಶದವರು ವಾಸಿಸುತ್ತಿದ್ದು ಕ್ರೀಡೆ ಅವರಿಗೆ ಮಾತ್ರವಲ್ಲದೇ ಬೆಂಗಳೂರಿನ ಜನ ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ಜನ ಬಂದು ನೋಡುವ , ಪ್ರೋತ್ಸಾಹಿಸುವ ಅವಕಾಶ ದೊರೆತಿದೆ ಎಂದರು.
ಹಿಂದೊಮ್ಮೆ ಉಡುಪಿ ಹಾಗೂ ಬಂಟ್ವಾಳ ಭಾಗದಲ್ಲಿ ಕಂಬಳ ಉದ್ಘಾಟಿಸಿದ್ದನ್ನು ಮುಖ್ಯಮಂತ್ರಿಗಳು ಸ್ಮರಿಸಿದರು. ಪುರಾತನ ಕಾಲದಿಂದ ನಡೆದುಕೊಂಡು ಬಂದಿರುವ ಜನರ ಕಲೆಯನ್ನು ಬಹಳ ಜನ ಮೈಗೂಡಿಸಿಕೊಂಡಿದ್ದಾರೆ. ಬಹಳ ಜನ ಇದಕ್ಕೆ ಪ್ರೋತ್ಸಾಹ ನೀಡುತ್ತಾರೆ. ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆ ಇದ್ದಂತೆ ಕಂಬಳದಲ್ಲಿ ಕೋಣಗಳಿಗೆ ನೊಗ ಹಾಕಿ ಓಡಿಸುತ್ತಾರೆ ಎಂದರು.
ಮನರಂಜನೆಯ ಕ್ರೀಡೆ
ಕೋಣಗಳನ್ನು ಸಾಕುವುದು ಬಹಳ ಕಷ್ಟದ ಕೆಲಸ. ಕೋಣ ಸಾಕಲು ಒಂದು ವರ್ಷಕ್ಕೆ 15 ಲಕ್ಷದವರೆಗೆ ವೆಚ್ಚವಾಗುತ್ತದೆ. ತಿಂಗಳಿಗೆ 1 ಲಕ್ಷಕ್ಕಿಂತ ಹೆಚ್ಚಾಗುತ್ತದೆ. ನವೆಂಬರ್, ಡಿಸೆಂಬರ್, ಫೆಬ್ರವರಿ ಮಾರ್ಚ್ ತಿಂಗಳುಗಳಲ್ಲಿ ವ್ಯವಸಾಯ ಇಲ್ಲದಿದ್ದಾಗ ಜನ ಜಾನುವಾರುಗಳ ಉತ್ಸವ ಮಾಡಿ ಮನರಂಜನೆ ಪಡೆಯುತ್ತಿದ್ದರು. ಗದ್ದೆಗಳಲ್ಲಿ ಮಣ್ಣನ್ನು ಹದಗೊಳಿಸಿ ಕಂಬಳ ಆಡಿಸುತ್ತಿದ್ದರು. ಕೋಣಗಳನ್ನು ಓಡುವವರಿಗೆ ಅಭ್ಯಾಸವಿರಬೇಕು. ಕ್ರೀಡಾಪಟುವಾಗಿದ್ದರೆ ಮಾತ್ರ ಕೋಣಗಳ ಜೊತೆಗೆ ಓಡಲು ಸಾಧ್ಯ. ಜನಪ್ರಿಯ ಕ್ರೀಡೆ ಕಂಬಳವನ್ನು ಬೆಂಗಳೂರಿನಲ್ಲಿ ಪ್ರತಿ ವರ್ಷ ಮುಂದುವರೆಸುವಂತಾಗಬೇಕು. ನವೆಂಬರ್, ಡಿಸೆಂಬರ್ ಮಾಹೆಯಲ್ಲಿ ಆಯೋಜಿಸಿದರೆ ಜನ ನೋಡುತ್ತಾರೆ. ಇದೊಂದು ಮನರಂಜನೆಯ ಕ್ರೀಡೆ ಯಾಗುತ್ತದೆ ಎಂದು ಮುಖ್ಯಮಂತ್ರಿ ಗಳು ಅಭಿಪ್ರಾಯಪಟ್ಟರು.
ಜಲ್ಲಿಕಟ್ಟು, ಕಂಬಳ ನಡೆಸಬಾರದು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇದಕ್ಕೆ ಸುಗ್ರೀವಾಜ್ಞೆ ಹೊರಡಿಸಿ ಜನಪ್ರಿಯ ಕ್ರೀಡೆ ಉಳಿಸುವ ಕೆಲಸವಾಗಿದೆ. ಇದನ್ನು ಬೆಳಸಬೇಕು ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸಮುದಾಯ ಭವನಕ್ಕಾಗಿ ನಿವೇಶನ ಕೋರಿದ್ದು ,ಇದಕ್ಕೆ ಪ್ರಯತ್ನ ಮಾಡಲಾಗುವುದು ಎಂದರು.
ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ, ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಮೇಲ್ಮನೆ ಸದಸ್ಯ ಮಂಜುನಾಥ್ ಭಂಡಾರಿ, ಕಾರ್ಯಾಧ್ಯಕ್ಷ ಗುರುಕಿರಣ್, ರಂಜನ್ ಶೆಟ್ಟಿ, ರಾಜೇಂದ್ರ ಕುಮಾರ್, ಶಂಕುತಲಾ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ