*ಸೋಮಯ್ಯ ಮನೆಯಲ್ಲಿ ಒಲಿಂಪಿಕ್ ಪದಕಗಳನ್ನೇ ಕದ್ದ ಖದೀಮರು*: *ಕೊನೆಗೂ ಪೊಲೀಸರ ಬಲೆಗೆ ಬಿದ್ದ ಕಳ್ಳರು*

ಪ್ರಗತಿವಾಹಿನಿ ಸುದ್ದಿ: ದೇಶಕ್ಕೆ ಕೀರ್ತಿ ತಂದ ಕ್ರೀಡಾಪಟುವಿನ ಮನೆಯನ್ನೇ ಖದೀಮರು ಗುರಿಯಾಗಿಸಿಕೊಂಡಿದ್ದರು. ಬೆಲೆಬಾಳುವ ವಸ್ತುಗಳ ಜೊತೆಗೆ ಒಲಿಂಪಿಕ್ ಪದಕಗಳನ್ನೂ ಕದ್ದೊಯ್ದಿದ್ದರು. ಇದೀಗ ಈ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಕದ್ದಿದ್ದ ಪದಕಗಳೆಲ್ಲವೂ ಪೊಲೀಸರ ಕೈ ಸೇರಿವೆ.
ಭಾರತದ ಮಾಜಿ ಹಾಕಿ ಆಟಗಾರ ಹಾಗೂ ಒಲಿಂಪಿಕ್ ಚಿನ್ನದ ಪದಕ ವಿಜೇತ ಎಂ.ಎಂ. ಸೋಮಯ್ಯ ಅವರ ಬೆಂಗಳೂರಿನ ಇಂದಿರಾನಗರ ನಿವಾಸದಲ್ಲಿ ಕಳ್ಳತನ ನಡೆದಿತ್ತು. ಸ್ವಂತ ಕೆಲಸದ ನಿಮಿತ್ತ ಸೋಮಯ್ಯ ಅವರು ಕೊಡಗಿನ ಮಡಿಕೇರಿಗೆ ತೆರಳಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿದ್ದ ಕಳ್ಳರು ಚಿನ್ನದ ಪದಕ, ಬೆಳ್ಳಿ ಪದಕ, ಎರಡು ಕಂಚಿನ ಪದಕಗಳು, ಚಿನ್ನಾಭರಣ ಹಾಗೂ 30 ಸಾವಿರ ರೂಪಾಯಿ ನಗದು ದೋಚಿದ್ದರು.
ಪ್ರಕರಣ ದಾಖಲಿಸಿಕೊಂಡ ಇಂದಿರಾನಗರ ಠಾಣೆ ಪೊಲೀಸರು ತನಿಖೆ ಕೈಗೊಂಡು ಮಾಣಿಕ್ಯ ಮತ್ತು ಭರತ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಕಳುವಾಗಿದ್ದ ಒಲಿಂಪಿಕ್ ಪದಕಗಳು, ಚಿನ್ನಾಭರಣ ಹಾಗೂ ನಗದು ಸೇರಿದಂತೆ ಎಲ್ಲ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾಗಿತ್ತು ಕಳ್ಳರ ಕೃತ್ಯ
ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಕ್ಟೋಬರ್ 28ರಂದು ಮುಂಜಾನೆ 2.34ರ ಸುಮಾರಿಗೆ ಇಬ್ಬರು ದುಷ್ಕರ್ಮಿಗಳು ಬಾಗಿಲು ಮುರಿದು ಒಳನುಗ್ಗಿರುವುದು ಪತ್ತೆಯಾಗಿತ್ತು. ಓರ್ವ ನೀಲಿ ಶರ್ಟ್ ಹಾಗೂ ಮತ್ತೊಬ್ಬ ಕೆಂಪು ಶರ್ಟ್ ಧರಿಸಿದ್ದ ದೃಶ್ಯಗಳು ಸೆರೆಯಾಗಿದ್ದವು. ಈ ಸುಳಿವಿನ ಆಧಾರದಲ್ಲಿ ಪೊಲೀಸರು ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆಸಿದ್ದರು.
ಕಳ್ಳತನವಾಗಿದ್ದ ವಸ್ತುಗಳಲ್ಲಿ ಒಂದು ಚಿನ್ನದ ಪದಕ, ಒಂದು ಬೆಳ್ಳಿ ಪದಕ, ಎರಡು ಕಂಚಿನ ಪದಕಗಳು, 10 ಗ್ರಾಂ ಚಿನ್ನದ ಬಳೆಗಳು, 144 ಗ್ರಾಂ ತೂಕದ ಎರಡು ಬೆಳ್ಳಿ ಕಪ್ಗಳು, ಆರು ಬೆಳ್ಳಿ ಚಮಚಗಳು ಹಾಗೂ 80 ಗ್ರಾಂ ತೂಕದ ಬೆಳ್ಳಿ ಪಾತ್ರೆ ಸೇರಿದ್ದವು.
ದೇಶದ ಕ್ರೀಡಾ ಗೌರವದ ಸಂಕೇತವಾಗಿದ್ದ ಒಲಿಂಪಿಕ್ ಪದಕಗಳು ಕಳ್ಳರ ಪಾಲಾಗಿದ್ದ ಪ್ರಕರಣ ಇದೀಗ ಸುಖಾಂತ್ಯ ಕಂಡಿದೆ. ಕಳುವಾಗಿದ್ದ ಎಲ್ಲ ವಸ್ತುಗಳು ಮರಳಿ ಸಿಕ್ಕಿರುವುದು ಸೋಮಯ್ಯ ಅವರಿಗೆ ನೆಮ್ಮದಿ ತಂದಿದೆ.


