*ಬಕೆಟ್ ನೀರಿನಲ್ಲಿ ಮುಳುಗಿ ಮಗು ಸಾವು: ಮನನೊಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ತಾಯಿ*

ಪ್ರಗತಿವಾಹಿನಿ ಸುದ್ದಿ: ಬಕೆಟ್ ನೀರಿನಲ್ಲಿ ಮುಳುಗಿ ಮಗು ಮೃತಪಟ್ಟಿದೆ. ಇದರಿಂದ ನೊಂದ ತಾಯಿ ಮಗುವಿನ ಸಾವಿಗೆ ನಾನೇ ಕಾರಣ ಎಂಬ ಪಾಪ ಪ್ರಜ್ಞೆಯಿಂದ ಬೆಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಚಂಡ್ರಾಲೇಔಟ್ ನ ಭೈರವೇಶ್ವರ ನಗರದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಸಾಫ್ಟ್‌ವೇರ್ ಉದ್ಯೋಗಿ ಪ್ರತಿಭಾ (29) ಮತ್ತು ಅವರ 11 ತಿಂಗಳ ಗಂಡು ಮಗು ಅಗಸ್ತ್ಯ ಎಂದು ಗುರುತಿಸಲಾಗಿದೆ.
ಪ್ರತಿಭಾ ಅವರು ಮನೆಯಿಂದಲೇ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದರು. ಸಂಜೆ ಟೆರೇಸ್ ಮೇಲೆ ಒಣಗಲು ಹಾಕಿದ್ದ ಬಟ್ಟೆಗಳನ್ನು ತರಲು ಪ್ರತಿಭಾ ಅವರು ಮೇಲಕ್ಕೆ ಹೋಗಿದ್ದಾಗ ಮನೆಯಲ್ಲಿದ್ದ ಮಗು ಆಟವಾಡುತ್ತಾ ಬಚ್ಚಲು ಮನೆಗೆ ಹೋಗಿದೆ. ಅಲ್ಲಿ ನೀರಿನಿಂದ ತುಂಬಿದ್ದ ಬಕೆಟ್‌ನಲ್ಲಿ ಮುಳುಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ. ಬಟ್ಟೆ ತೆಗೆದುಕೊಂಡು ಕೆಳಗೆ ಬಂದ ಪ್ರತಿಭಾಗೆ ಮಗುವಿನ ಸ್ಥಿತಿ ಕಂಡು ದಿಕ್ಕು ತೋಚದಂತಾಗಿದೆ. ಮಗು ಸಾವನ್ನಪ್ಪಿರುವುದನ್ನು ಕಂಡು ಕಂಗಾಲಾದ ಪ್ರತಿಭಾ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದಾರೆ.
ತೀವ್ರವಾಗಿ ಮನನೊಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅದಕ್ಕೂ ಮುನ್ನ ನಿದ್ರೆ ಮಾತ್ರೆ ಸೇವಿಸಿದ್ದು, ಬಳಿಕ ಕೈಕುಯ್ದುಕೊಂಡಿದ್ದಾರೆ. ಆದರೆ ಕೈಗೆ ರಕ್ತ ಬಾರದ ಕಾರಣ ನೇಣುಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.
ರಾತ್ರಿ ಪತಿ ಮಹಾಂತೇಶ್ ಆಫೀಸಿಂದ ಮನೆಗೆ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ತಮ್ಮ ಬಳಿಯಿದ್ದ ಕೀಲಿಯಿಂದ ಬಾಗಿಲು ತೆರೆದು ಒಳಹೋದಾಗ ಪ್ರತಿಭಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಗು ಹಾಸಿಗೆಯ ಮೇಲೆ ಮಲಗಿದ ಸ್ಥಿತಿಯಲ್ಲಿತ್ತು.
ಸ್ಥಳದಲ್ಲಿ ಪತ್ತೆಯಾದ ಡೆತ್ ನೋಟ್ನಿಂದ ಪತಿಗೆ ಸಾವಿನ ರಹಸ್ಯ ಗೊತ್ತಾಗಿದೆ. ‘ನನ್ನ ಮಗುವಿನ ಸಾವಿಗೆ ನಾನೇ ಕಾರಣ, ಅವನನ್ನು ಉಳಿಸಿಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಪ್ರತಿಭಾ ಡೆತ್ನೋಟ್ನಲ್ಲಿ ಬರೆದಿಟ್ಟಿದ್ದರು. ನೇಣಿಗೆ ಶರಣಾಗುವ ಮುನ್ನ ಪ್ರತಿಭಾ ಅವರು 15 ಮಾತ್ರೆಗಳನ್ನು ನುಂಗಿ, ಕೈ ಕುಯ್ದುಕೊಂಡು ಸಾಯುವುದಕ್ಕೆ ಯತ್ನಿಸಿದ್ದರು. ಆದರೆ ರಕ್ತ ಬಾರದ ಕಾರಣ ಕೊನೆಗೆ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ.
ಚಂದ್ರಾಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.


