*ಗುಡುಗು ಸಹಿತ ಭಾರಿ ಮಳೆ: ರಾಜ್ಯ ರಾಜಧಾನಿಯಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ; ಜನಜೀವನ ಸಂಪೂರ್ಣ ಅಸ್ತವ್ಯಸ್ತ*
ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸದ್ಯಕ್ಕೆ ಮಳೆ ಆರ್ಭಟ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಸಂಜೆಯಾಗುತ್ತಿದ್ದಂತೆ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು ಮಹಾನಗರಿಯಾದ್ಯಂತ ಮತ್ತೆ ಅವಾಂತರಗಳು ಸೃಷ್ಟಿಯಾಗಿವೆ.
ಬೆಂಗಳೂರಿನಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ಮತ್ತೆ ರಾಜಧಾನಿಯ ರಸ್ತೆಗಳು ಜಲಾವೃತಗೊಂಡು ಹೊಳೆಯಂತೆ ಹರಿಯುತ್ತಿವೆ. ತಗ್ಗು ಪ್ರದೇಶಗಳಿಗೆ, ಮನೆಗಳಿಗೆ ನೀರು ನುಗ್ಗಿದ್ದು, ಜನರು ಸಂಕಷ್ಟಕ್ಕೀಡಾಗಿದ್ದಾರೆ.
ಭಾರಿ ಮಳೆಯಿಂದಾಗಿ ಚರಂಡಿ, ರಾಜಕಾಲುವೆ ನೀರು ರಸ್ತೆಯ ಮೇಲೆ ಬೋರ್ಗರೆದು ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ. ಹಲವೆಡೆ ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ. ಇನ್ನು ಹಲವೆಡೆ ಮನೆಗಳು ಜಲಾವೃತಗೊಂಡಿದ್ದು, ಜನರ ಬದುಕು ಮೂರಾಬಟ್ಟೆಯಾಗಿವೆ.
ಯಲಹಂಕದ ಕೇಂದ್ರಿಯ ವಿಹಾರ ಅಪಾರ್ಟ್ ಮೆಂಟ್ ನಿಂದ ಬೋಟ್ ಗಳ ಮೂಲಕ ಎನ್ ಡಿ ಆರ್ ಎಫ್ ತಂಡ 500ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಇನ್ನೂ 25ಕ್ಕೂ ಹೆಚ್ಚು ಕುಟುಂಬಗಳು ಅಪಾರ್ಟ್ ಮೆಂಟ್ ನಲ್ಲಿದ್ದು, ಮನೆಯಿಂದ ಸ್ಥಳಾಂತರಗೊಳ್ಳಲು ನಿರಾಕರಿಸುತ್ತಿದ್ದಾರೆ. ಅಪಾರ್ಟ್ ಮೆಂಟ್ ನ ಮೊದಲ ಮಹಡಿ ಸಂಪೂರ್ಣ ಜಲಾವೃತಗೊಂಡಿದ್ದು, ರಸ್ತೆಗಳಲ್ಲಿ ಪ್ರವಾಹದಂತೆ ನೀರು ಹರಿಯುತ್ತಿದೆ. ಬೆಂಗಳೂರಿನ ಹಲವು ಬಡಾವಣೆಗಳ ಸ್ಥಿತಿಯೂ ಇದಕ್ಕಿಂತ ಹೊರತಾಗಿಲ್ಲ.
ಇನ್ನು ಬೆಂಗಳೂರಿನ ಜಯನಗರ, ವಿಧನಸೌಧ, ಆರ್.ಆರ್.ನಗರ, ಮೈಸೂರು ರಸ್ತೆ, ಗಿರಿನಗರ, ವಿಜಯನಗರ, ರಾಜಾಜಿನಗರ, ಕೆಂಗೇರಿ, ಕೆ.ಆರ್.ಸರ್ಕಲ್, ರಿಚ್ ಮಂಡ್ ವೃತ್ತ, ಶಾಂತಿನಗರ, ಮೆಜೆಸ್ಟಿಕ್ , ಜೆ.ಪಿ.ನಗರ, ಮಲ್ಲೇಶ್ವರಂ ಸೇರಿದಂತೆ ಹಲವೆಡೆ ಭಾರಿ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿದ್ದು, ಜನರು ಪರದಾಡುವಂತಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ