
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಲಸೆ ಕಾರ್ಮಿಕರು, ವಿದ್ಯಾರ್ಥಿಗಳನ್ನು ತವರು ಜಿಲ್ಲೆಗಳಿಗೆ ಕಳುಹಿಸಲು ರಾಜ್ಯ ಸರ್ಕಾರ ಸಾರಿಗೆ ವ್ಯವಸ್ಥೆಯನ್ನ ಮಾಡಿದೆ. ಆದರೆ ಪ್ರಯಾಣಿಕರು ಮಾತ್ರ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸಾವಿರಾರು ಜನ ಗುಂಪು ಗುಂಪಾಗಿ ನಿಂತು ಊರುಗಳಿಗೆ ತೆರಳಲು ಕೆ ಎಸ್ ಆರ್ ಟಿಸಿ ಬಸ್ ಹತ್ತುತ್ತಿದ್ದಾರೆ. ಹಲವರು ಮಾಸ್ಕ್ ಧರಿಸಿದ್ದರೆ, ಇನ್ನು ಹಲವರು ಮಾಸ್ಕ್ ಕೂಡ ಧರಿಸದೇ ಬಸ್ ನಿಲ್ದಾಣದಲ್ಲಿ ಕುಳಿತಿರುವುದು ಸಾಮಾನ್ಯವಾಗಿ ಕಂಡುಬರುತ್ತಿದೆ.
ಸರ್ಕಾರ ಇಷ್ಟೇಲ್ಲ ಅನುಕೂಲ ಒದಗಿಸಿದರೂ ಸಾರ್ವಜನಿಕರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನು ಮರೆತಿದ್ದು, ನೂರಾರು ಜನರು ರಾತ್ರಿಯೇ ಬಸ್ ನಿಲ್ದಾಣಕ್ಕೆ ಬಂದಿದ್ದರಿಂದ ಜನದಟ್ಟಣೆ ಹೆಚ್ಚಾಗಿತ್ತು. ಹೀಗಾಗಿ ಜನರು ಎಲ್ಲೆಂದರಲ್ಲಿ ಕುಳಿತು, ಮಲಗಿ ಕಾಲ ಕಳೆದಿದ್ದಾರೆ.
ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ತೆರಳುವವರು ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ವರಿಷ್ಠಾಧಿಕಾರಿಗಳಿಂದ ಅನುಮತಿ ಪಡೆದು ಖಾಸಗಿ ವಾಹನಗಳಲ್ಲಿಯೂ ಸಂಚರಿಸಬಹುದಾಗಿದೆ. ರೆಡ್‍ಝೋನ್‍ಗಳಿಗೆ ಬಸ್ ಸಂಚಾರ ಇರುವುದಿಲ್ಲ. ರಾಜ್ಯ ಸಾರಿಗೆ ರಸ್ತೆ ಇಲಾಖೆಯು ಪ್ರತಿ ಡಿಪೋದಿಂದ ಒಟ್ಟು 150 ಕೆಎಸ್‌ಆರ್‌ಟಿಸಿ ಬಸ್‍ಗಳನ್ನ ಕರೆಸಿಕೊಂಡಿದೆ. ಈ ಎಲ್ಲಾ ಬಸ್‍ಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರಯಾಣ ಬೆಳೆಸಲಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ