
ಪ್ರಗತಿವಾಹಿನಿ ಸುದ್ದಿ: ಬೇಸಿಗೆ ರಜೆ ಆರಂಭವಾಗಿದೆ. ಮಕ್ಕಳು ಹಾಗೂ ಪೋಷಕರು ಬೆಂಗಳೂರಿನಿಂದ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚು. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಸಿಹು ಸುದ್ದಿ ನೀಡಿದೆ.
ಜನ ಸಂದಣಿಯನ್ನು ನಿಯಂತ್ರಿಸಲು ದಕ್ಷಿಣ ರೈಲ್ವೆ ವಿಶೇಷ ರೈಲು ಸೇವೆ ಘೋಷಿಸಿದೆ. ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ತಿರುಚಿರಾಪಲ್ಲಿ (Bengaluru- Tiruchirapalli) ನಡುವೆ ನಾಲ್ಕು ಟ್ರಿಪ್ಗಳ ವಿಶೇಷ ರೈಲು ಸಂಚರಿಸಲಿದೆ.
06007 ಸಂಖ್ಯೆಯ ರೈಲು ಏಪ್ರಿಲ್ 7, 14, 21 ಮತ್ತು 28ರಂದು ಬೆಳಗ್ಗೆ 5.30ಕ್ಕೆ ತಿರುಚಿರಾಪಲ್ಲಿಯಿಂದ ಹೊರಟು ಮಧ್ಯಾಹ್ನ 1.30ಕ್ಕೆ ಬೆಂಗಳೂರಿಗೆ ಆಗಮಿಸುತ್ತದೆ. ಹಿಂತಿರುಗುವ 06008 ಸಂಖ್ಯೆಯ ರೈಲು ಮಧ್ಯಾಹ್ನ 3ಕ್ಕೆ ಹೊರಟು ರಾತ್ರಿ 10.30ಕ್ಕೆ ತಿರುಚಿರಾಪಲ್ಲಿಗೆ ತಲುಪಲಿದೆ ಎನ್ನಲಾಗಿದೆ.
ಈ ರೈಲು ಕರೂರು, ನಾಮಕ್ಕಲ್, ಸೇಲಂ, ಬಂಗಾರಪೇಟೆ ಹಾಗೂ ಕೃಷ್ಣರಾಜಪುರಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ. ಒಟ್ಟು 18 ಬೋಗಿಗಳಿದ್ದು, ಎಸಿ ಚೇರ್ ಕಾರ್, ದ್ವಿತೀಯ ದರ್ಜೆ ಚೇರ್ ಕಾರ್ ಹಾಗೂ ಅಂತ್ಯೋದಯ ಕೋಚ್ಗಳನ್ನು ಒಳಗೊಂಡಿದೆ.



