
ಪ್ರಗತಿವಾಹಿನಿ ಸುದ್ದಿ: ಪತಿ ಮಹಾಶಯನೊಬ್ಬ ಪತ್ನಿಯ ಮೇಲೆ ಹಲ್ಲೆ ಮಾಡಿ ಆಕೆಯ ಕುತ್ತಿಗೆಯನ್ನು ಕಾಲಿನಿಂದ ಹಿಸುಕಿ ಹತ್ಯೆ ಮಾಡಿರುವ ಘೋರ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಪೀಣ್ಯಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಾವ್ಯ (35) ಹತ್ಯೆಯಾದ ಮಹಿಳೆ. ಪತ್ನಿ ಕೊಲೆಗೈದ ಆರೋಪದಲ್ಲಿ ಪತಿ ಧರಿಯಪ್ಪ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿದ್ದಾರೆ.
ಬೆಳಗಾವಿ ಮೂಲದ ಕಾವ್ಯ 15 ವರ್ಷಗಳ ಹಿಂದೆ ಧರಿಯಪ್ಪನೊಂದಿಗೆ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಓರ್ವ ಮಗ ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿದ್ದರೆ ಮಗಳು ಪಿಯುಸಿ ಓದುತ್ತಿದ್ದಾಳೆ.
ನಾಗಸಂದ್ರದ ರುಕ್ಮಿಣಿ ನಗರದಲ್ಲಿ ಕುಟುಂಬ ವಾಸವಾಗಿತ್ತು. ಹಣಕಾಸಿನ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳವಾಗಿದೆ. ಜಗಳ ಮಿತಿ ಮೀರಿದ್ದು, ಪತ್ನಿ ಮೇಲೆ ಹಲ್ಲೆ ಮಾಡಿ ಕಾಲಿನಿಂದ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದಾನೆ ಪತಿ.
ಬಿಲ್ಡರ್ ಆಗಿದ್ದ ಆರೋಪಿಯು ತನ್ನ ಅಣ್ಣನಿಗೆ 2 ಲಕ್ಷ ಕೊಡುವ ಸಲುವಾಗಿ ಹಣವನ್ನು ಮನೆಯಲ್ಲಿಟ್ಟದ್ದನಂತೆ. ವಿಚಾರ ತಿಳಿದು ಪತ್ನಿ, ಪತಿಯೊಂದಿಗೆ ಜಗಳವಾಡಿದ್ದರು ಎನ್ನಲಾಗಿದೆ. ಹಣದ ವಿಚಾರವಾಗಿ ಆರಂಭವಾದ ಗಲಾಟೆ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ.


