Kannada NewsKarnataka NewsLatest

*ಭಾನುವಾರವೂ ಕೌಂಟರ್ ಓಪನ್: ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತ*

ಪ್ರಗತಿವಾಹಿನಿ ಸುದ್ದಿ: ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡುವ ಗ್ರಾಹಕರು ವಿದ್ಯುತ್‌ ಸಂಪರ್ಕದ ಕಡಿತದಿಂದ ತೊಂದರೆಗೊಳಗಾಗದಂತೆ ಸೆ.1ರ ಭಾನುವಾರವೂ ಬೆಸ್ಕಾಂ ಉಪ ವಿಭಾಗಗಳ ಕ್ಯಾಶ್‌ ಕೌಂಟರ್‌ಗಳು ತೆರದಿರಲಿವೆ ಎಂದು ಬೆಸ್ಕಾಂ ತಿಳಿಸಿದೆ.

ಈ ಕುರಿತು ಶನಿವಾರ ಪ್ರಕಟಣೆ ಹೊರಡಿಸಿ, ಬಿಲ್‌ ಬಂದ 30 ದಿನದೊಳಗೆ ವಿದ್ಯುತ್‌ ಶುಲ್ಕ ಪಾವತಿಸದಿದ್ದಲ್ಲಿ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ ಪಾವತಿಸದಿದ್ದಲ್ಲಿ ಕೆಇಆರ್‌ಸಿ ನಿಯಮಾವಳಿ ಅನ್ವಯ ಗ್ರಾಹಕರ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲು ಬೆಸ್ಕಾಂ ನಿರ್ಧರಿಸಿದ್ದು, ಸೆಪ್ಟೆಂಬರ್‌ 1ರಿಂದಲೇ ಈ ನಿಯಮ ಜಾರಿಯಾಗಲಿದೆ ಎಂದು ಹೇಳಿದೆ.

ಬಿಲ್‌ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ವಿದ್ಯುತ್‌ ಕಡಿತದಿಂದ ತೊಂದರೆಗೆ ಒಳಗಾಗಬಾರದು ಎಂಬ ಉದ್ದೇಶದಿಂದ ಬೆಸ್ಕಾಂ ವಲಯದ ಎಲ್ಲ ಉಪ ವಿಭಾಗಗಳ ಕ್ಯಾಶ್‌ ಕೌಂಟರ್‌ ಗಳನ್ನು ಈ ಭಾನುವಾರವೂ ತೆರೆಯಲು ನಿರ್ಧರಿಸಲಾಗಿದ್ದು, ಆನ್‌ಲೈನ್‌ ಪೇಮೆಂಟ್‌ ಬಳಸದವರ ಅನುಕೂಲಕ್ಕಾಗಿ ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಗೃಹ ಮತ್ತು ವಾಣಿಜ್ಯ ಬಳಕೆದಾರರು, ಅಪಾರ್ಟ್‌ಮೆಂಟ್‌ಗಳು ಹಾಗೂ ತಾತ್ಕಲಿಕ ವಿದ್ಯುತ್‌ ಸಂಪರ್ಕ ಪಡೆದ ಗ್ರಾಹಕರು ನಿಗದಿತ 30 ದಿನದೊಳಗೆ ಬಿಲ್‌ ಪಾವತಿಸದಿದ್ದಲ್ಲಿ ಮೀಟರ್‌ ರೀಡಿಂಗ್‌ಗೆ ಬರುವ ದಿನವೇ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು. ಹಾಗಾಗಿ, ಗ್ರಾಹಕರು ಸಕಾಲದಲ್ಲಿ ಶುಲ್ಕ ಪಾವತಿಸುವಂತೆ ಎಂದು ಬೆಸ್ಕಾಂ ಈಗಾಗಲೇ ಕೋರಿದೆ.

ವಿದ್ಯುತ್ ಬಿಲ್ ಬಾಕಿ ಮೊತ್ತ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ 100 ರೂ.ಗಳಿಗಿಂತ ಅಧಿಕವಾಗಿದ್ದಲ್ಲಿ, ಅಂತಹ ಸ್ಥಾಪನಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ.
ಗೃಹ ಜ್ಯೋತಿಯೋಜನೆ ಅಡಿಯಲ್ಲಿ ಶೂನ್ಯ ಬಿಲ್‌ ಪಡೆಯುತ್ತಿರುವ ಗ್ರಾಹಕರ ಹಿಂಬಾಕಿ ಶೂನ್ಯವಿದ್ದಲ್ಲಿ ಈ ಬಗ್ಗೆ ಚಿಂತಿಸಬೇಕಿಲ್ಲ ಎಂದು ಪ್ರಕಟಣೆ ಸ್ಪಷ್ಟ ಪಡಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button