*ಅಂತಾರಾಷ್ಟ್ರೀಯ ಉದ್ಯಮಗಳು ನಮ್ಮಲ್ಲಿ ಬರುತ್ತಿರುವುದು ಹೆಮ್ಮೆಯ ವಿಚಾರ; ದೇಶದಲ್ಲಿಯೇ ಕರ್ನಾಟಕ ಉದ್ದಿಮೆಗಳಿಗೆ ಅತ್ಯುತ್ತಮ ಜಾಗ; ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕದ ಬೆಳವಣಿಗೆಯಲ್ಲಿ ಇಲ್ಲಿನ ಉದ್ಯಮಿಗಳ ಕೊಡುಗೆ ಅಪಾರ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ
ವಿಧಾನಸೌಧದಲ್ಲಿ ನಡೆದ ರಾಜ್ಯದ ಶ್ರೇಷ್ಠ ರಫ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಇದೇ ಸ್ಥಳದಲ್ಲಿ 2000 ನೇ ಇಸವಿಯಲ್ಲಿ ಮೊದಲನೇ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿದ್ದೆವು. ರಾಜ್ಯದಲ್ಲಿ ಸುಭದ್ರ ಸರ್ಕಾರ ಆಡಳಿತದಲ್ಲಿ ಇದೆ. ಈ ಸರ್ಕಾರ ಕೈಗಾರಿಕೆಗಳ ಅಭಿವೃದ್ಧಿಗೆ ಎಲ್ಲಾ ಸಹಕಾರ ನೀಡಲಿದೆ ಎಂದರು.
ಕರ್ನಾಟಕದಲ್ಲಿ ಎಂಜಿನಿಯರಿಂಗ್, ವೈದ್ಯಕೀಯ ಇತರೇ ವೃತ್ತಿಪರ ಶಿಕ್ಷಣ ನೀಡುವ ಕಾಲೇಜುಗಳು ಇಡೀ ದೇಶಕ್ಕೆ ಮಾದರಿ. ಇಡೀ ದೇಶಕ್ಕೆ ಹೆಚ್ಚು ವೈದ್ಯರನ್ನು ನೀಡುವ ರಾಜ್ಯ ನಮ್ಮದು. ರಾಜ್ಯದ ಅತ್ಯುತ್ತಮ ಎಂಜಿನಿಯರ್‌ಗಳು ವಿದೇಶಕ್ಕೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಎಂತಹ ಕಂಪನಿಗೆ ಹೋದರೂ ಅತ್ಯುನ್ನತ ಸ್ಥಾನದಲ್ಲಿ ಕನ್ನಡಿಗರು ಇರುತ್ತಾರೆ. ನಮ್ಮ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವಂತೆ ಆಗಬೇಕು. ಇಲ್ಲಿ ಓದುವ ವೈದ್ಯರು, ಎಂಜಿನಿಯರ್‌ಗಳು ಮೊದಲ ಆದ್ಯತೆಯಾಗಿ ಭಾರತದಲ್ಲೇ ತಮ್ಮ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ಕಾರ್ಮಿಕರನ್ನು ಸದೃಢಗೊಳಿಸಿದರೆ, ಸದೃಢ ಸರ್ಕಾರ ಇರುತ್ತದೆ, ಸದೃಢ ಸರ್ಕಾರದಿಂದ ಸದೃಢ ಉದ್ಯೋಗ ಅವಕಾಶಗಳು ಇರುತ್ತದೆ, ಸದೃಢ ಆರ್ಥಿಕತೆ ಇರುತ್ತದೆ. ಕೇರಳಕ್ಕೆ ಅಷ್ಟಾಗಿ ಉದ್ದಿಮೆಗಳು ಹೋಗುವುದಿಲ್ಲ, ಅದರೆ ತಮಿಳುನಾಡು, ತೆಲಂಗಾಂಣ, ಆಂಧ್ರ ಪ್ರದೇಶಕ್ಕೆ ಹೋಗುತ್ತವೆ. ನಮ್ಮ ದಕ್ಷಿಣ ಭಾರತದಲ್ಲಿ ಕರ್ನಾಟಕ ಉದ್ದಿಮೆಗಳಿಗೆ ಅತ್ಯುತ್ತಮ ಜಾಗ.
ನಮ್ಮಲ್ಲಿರುವ ವಾತಾವರಣ, ಕಾನೂನು ಸೇರಿದಂತೆ ಉದ್ದಿಮೆ ಸ್ನೇಹಿ ನೀತಿಗಳಿಂದ ಅಂತಾರಾಷ್ಟ್ರೀಯ ಉದ್ಯಮಗಳು ನಮ್ಮಲ್ಲಿ ಬರುತ್ತಿರುವುದು ಹೆಮ್ಮೆಯ ವಿಚಾರ. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಗಳಾಗಿದ್ದ ಕಾಲವದು. ಅಗ ಅಮೇರಿಕಾದ ಟ್ವಿನ್ ಟವರ್ ಸ್ಪೋಟ ಆದ ಸಂದರ್ಭದಲ್ಲಿ ಅನೇಕ ಕಂಪೆನಿಗಳು ಭಾರತದತ್ತ ಮುಖ ಮಾಡಿದವು. ಆಗ ಅನೇಕ ದೇಶದ ಪ್ರತಿನಿಧಿಗಳು ಹೇಳಿದ ಮಾತು ಕೇಳಿದರೆ ನಮ್ಮ ರಾಜ್ಯದ ಬಗ್ಗೆ ಹೆಮ್ಮೆ ಎನಿಸುತ್ತದೆ. “ನಾವು ಇಡೀ ದೇಶ ಸರ್ವೇ ಮಾಡಿದ್ದೇವೆ, ದೆಹಲಿ, ಹೈದರಾಬಾದ್, ಮಹಾರಾಷ್ಟ್ರ, ಚೆನ್ನೈ. ಆದರೆ ಕರ್ನಾಟಕ ಉತ್ತಮ ಸ್ಥಳ” ಎಂದರು.
ಇಲ್ಲಿ ಕೋಮು ಸಂಘರ್ಷಗಳು ಕಡಿಮೆ ಎನ್ನುವ ಕಾರಣಕ್ಕೆ. ಗಲಭೆಗಳು ನಡೆಯುವುದಿಲ್ಲ, ಅತ್ಯುತ್ತಮ ವಾತಾವರಣವಿದೆ, ಇಲ್ಲಿರುವ ಜ್ಞಾನ, ಸಂಪತ್ತು, ಮಾನವ ಸಂಪನ್ಮೂಲ ಹೆಚ್ಚು ಅನುಕೂಲಕರವಾಗಿದೆ ಎಂದು ವಿದೇಶಿ ಪ್ರತಿನಿಧಿಗಳು ಮಾತನಾಡಿದ್ದರು.ಅಲ್ಲಿಂದ ಆರಂಭವಾದ ನಮ್ಮ ಕೈಗಾರಿಕಾ ಬೆಳವಣಿಗೆ ಇಂದು ಉತ್ತುಂಗಕ್ಕೆ ಬಂದು ನಿಂತಿದೆ. ಇಂದು ನಮ್ಮ ರಾಜ್ಯ ರಫ್ತಿನಲ್ಲಿ 2 ನೇ ಸ್ಥಾನದಲ್ಲಿದೆ, IT ಕ್ಷೇತ್ರದಲ್ಲಿ ಈಗಲೂ ಮೊದಲನೇ ಸ್ಥಾನದಲ್ಲಿ ಇದ್ದೇವೆ.
ನಮ್ಮ ಪ್ರಣಾಳಿಕೆಯಲ್ಲಿ ಒಂದು ವಿಷಯ ಹೇಳಿದ್ದೇವೆ. ಉದ್ಯೋಗ ಸೃಷ್ಟಿಯಾಗಬೇಕು ಎಂಬುದು ನಮ್ಮ ಆಶಯ, ಉದ್ಯೋಗ ಸೃಷ್ಟಿಯಾಗಬೇಕು, ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಹೆಚ್ಚಿನ ಔದ್ಯೋಗಿಕ ಬೆಳವಣಿಗೆಗೆ ಒತ್ತುಕೊಡುತ್ತೇವೆ.
ಇಂತಹ ನಗರಗಳಲ್ಲಿ ಉದ್ದಿಮೆ ಪ್ರಾರಂಭ ಮಾಡುವವರಿಗೆ ಸರ್ಕಾರ ಹೆಚ್ಚಿನ ಅನುಕೂಲ ಹಾಗೂ ಸಹಾಯ ಮಾಡುತ್ತದೆ. ಇದನ್ನು ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ, ಇದನ್ನು ಮಾಡುತ್ತೇವೆ. ಈ ರೀತಿ ಮಾಡುವುದರಿಂದ ಸ್ಥಳೀಯವಾಗಿ ಉದ್ಯೋಗ ದೊರಕುತ್ತದೆ, ವಲಸೆ ಕಡಿಮೆಯಾಗುತ್ತದೆ, ಆರ್ಥಿಕ, ಪ್ರಾದೇಶಿಕ ಅಸಮಾನತೆ ಕಡಿಮೆಯಾಗುತ್ತದೆ.
ಬೆಂಗಳೂರಿನಲ್ಲಿ 1.30 ಕೋಟಿ ಜನಸಂಖ್ಯೆ ಇದೆ. ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆ ಮಾಡಬೇಕು. SSLC ಫಲಿತಾಂಶದಲ್ಲಿಅತ್ಯುನ್ನತ ಸ್ಥಾನಗಳಿಸಿದ್ದ 15 ವಿದ್ಯಾರ್ಥಿಗಳಲ್ಲಿ 13 ಜನರು ಗ್ರಾಮೀಣ ಭಾಗದ ಮಕ್ಕಳು. ಕರ್ನಾಟಕದಲ್ಲಿ ಎಲ್ಲಾ ತರಹದ ಸೌಲಭ್ಯ ನಾವು ನೀಡುತ್ತೇವೆ, ತಮಿಳುನಾಡು, ಆಂದ್ರಪ್ರದೇಶದಲ್ಲಿ ಯಾವ ರೀತಿಯ ಸೌಲಭ್ಯ ನೀಡಲಾಗುತ್ತಿದೆ ಎಂಬುದರ ಬಗ್ಗೆ ಅರಿವಿದೆ.
ನಮ್ಮ ಬೆಂಗಳೂರು ಆಂಧ್ರ ಮತ್ತು ತಮಿಳುನಾಡು ಮಧ್ಯದಲ್ಲಿದೆ, ಹೊಸೂರಿನಲ್ಲಿ ಕೆಲಸ ಮಾಡಿ ಕರ್ನಾಟಕದಲ್ಲಿ ಸಂಸಾರ ಸಾಗಿಸುತ್ತಿದ್ದಾರೆ. ಪ್ರತಿದಿನ ಸಾವಿರಾರು ಮಂದಿ ಅಲ್ಲಿ ಕೆಲಸ ಮಾಡಿ ಇಲ್ಲಿ ಜೀವನ ನಡೆಸುತ್ತಿದ್ದಾರೆ. ಇದಕ್ಕೂ ಒಂದು ಪರಿಹಾರ ಕಂಡುಕೊಳ್ಳಬೇಕು.
ಕರ್ನಾಟಕದ NRI ಗಳು ನಮಗೆ ಪ್ರತ್ಯೇಕ ವಿಭಾಗ ತೆರೆಯಬೇಕು ಎಂದು ಸರಕಾರವನ್ನು ಕೇಳುತ್ತಿದಾರೆ. ಈ ಅಂಶವೂ ನಮ್ಮ ಪ್ರಣಾಳಿಕೆಯಲ್ಲಿದೆ. ಆದಷ್ಟು ಬೇಗ ಇದನ್ನು ಮಾಡುತ್ತೇವೆ.
ಉದ್ಯಮಿಗಳು ಬೆಟರ್ ಬೆಂಗಳೂರು, ಬ್ರ್ಯಾಂಡ್ ಬೆಂಗಳೂರಿಗೆ ಸಹಕಾರ ನೀಡಬೇಕು. ವಾಜಪೇಯಿ ಅವರು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಗೆ ಬಂದಾಗ ಒಂದು ಮಾತು ಹೇಳಿದ್ದರು ಮೊದಲು ಅಂತರರಾಷ್ಟ್ರೀಯ ವಿಮಾನಗಳು, ದೆಹಲಿ, ಕೋಲ್ಕತ್ತ, ಮುಂಬೈ, ಚೆನ್ನೈಗೆ ಹೋಗಿ ಇಲ್ಲಿಗೆ ಬರುತ್ತಿದ್ದವು ಈಗ ನೇರ ಇಲ್ಲಿಗೆ ಬರುವಂತಾಗಿದೆ ಎಂದಿದ್ದರು.
ಕೈಗಾರಿಕೆಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಹೊಸ ಕೈಗಾರಿಕೆಗಳನ್ನು ನಮ್ಮ ರಾಜ್ಯ ಸದಾ ಸ್ವಾಗತಿಸುತ್ತದೆ. ನಾವೆಲ್ಲರೂ ಸೇರಿ ಈ ರಾಜ್ಯವನ್ನು ನಿರ್ಮಾಣ ಮಾಡೋಣ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ