ಪ್ರಗತಿವಾಹಿನಿ ಸುದ್ದಿ, ಸಂಕೇಶ್ವರ : ಇತಿಹಾಸ ಎನ್ನುವುದು ಭವಿಷ್ಯದ ಕನ್ನಡಿಯಿದ್ದಂತೆ, ಜಗತ್ತಿನ ಬಹುತೇಕ ಸಂಶೋಧಕರು, ಸಾಹಿತಿಗಳು, ಶರಣರು ಇತಿಹಾಸ ಅರಿತುಕೊಂಡೆ ಸಾಧನೆ ಮಾಡಿದ್ದಾರೆ. ಪ್ರತಿಯೊಬ್ಬರ ಭವಿಷ್ಯ ಸುಧಾರಣೆಗೆ ಪುರಾಣ-ಪ್ರವಚನಗಳು ಸಹಕಾರಿಯಾಗುತ್ತವೆ ಎಂದು ಹಾರನಹಳ್ಳಿ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ನಿಡಸೋಸಿ ಗ್ರಾಮದ ಜಗದ್ಗುರು ಶ್ರೀ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ ನಿಮಿತ್ತ ಶರಣರ ವಚನಾಮೃತ ಬೊಧೆ ಪ್ರವಚನ ಪ್ರಾರಂಭೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ನಿಡಸೋಸಿ ಅಂತಹ ಗ್ರಾಮೀಣ ಪ್ರದೇಶದಲ್ಲಿ ದಾಸೋಹ ಪರಂಪರೆ ಹುಟ್ಟುಹಾಕುವ ಮೂಲಕ ಶ್ರೀಮಠದ ಎಲ್ಲ ಪೀಠಾಧಿಪತಿಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತ ಬಂದಿದ್ದು, ಧರ್ಮವೆಂದರೆ ಭಕ್ತಿ ಎನ್ನುವ ಸಂದೇಶವನ್ನು ಅಳಿಸಿ ಭಕ್ತಿ ಎಂದರೆ ಕಾಯಕ, ಭಕ್ತಿ ಎಂದರೆ ದಾನ, ಭಕ್ತಿ ಎಂದರೆ ಶಿಕ್ಷಣ ಎನ್ನುವದನ್ನು ಶ್ರೀಮಠ ಮನದಟ್ಟು ಮಾಡಿಕೊಡುತ್ತ ಬಂದಿದೆ ಎಂದರು.
ನಿಡಸೋಸಿ ಗ್ರಾಮದಲ್ಲಿ ಜರುಗುವ ಅನ್ನ, ಜ್ಞಾನ, ಭಕ್ತಿ ದಾಸೋಹ ಇಡೀ ನಾಡಿನ ಹಿರಿಮೆ ಹೆಚ್ಚಿಸುತ್ತಲಿದ್ದು, ಪುರಾಣ ಪ್ರವಚನಗಳ ಮೂಲಕ ಸಮಾಜದಲ್ಲಿ ಸುಸಂಸ್ಕೃತಿಯನ್ನು ಛಾಪು ಮೂಡಿಸುವಲ್ಲಿ ಶ್ರೀಮಠದ ಜಗದ್ಗುರು ಶಿವಲಿಂಗೇಶ್ವರ ಶ್ರೀಗಳು ಮಹತ್ಕಾರ್ಯ ಮಾಡಿದ್ದಾರೆ ಎಂದರು.
ದಿವ್ಯಸಾನಿಧ್ಯವಹಿಸಿದ್ದ ಇಳಕಲ್ ವಿಜಯ ಮಹಾಂತೇಶ್ವರ ಮಠದ ಗುರು ಮಹಾಂತ ಸ್ವಾಮೀಜಿ, ಸಮಾಜದ ಸ್ವಾಸ್ಥ್ಯ ಕಾಪಾಡಲು ಧರ್ಮವೆನ್ನುವುದು ಬಹುದೊಡ್ಡ ಆಯಾಮವಾಗಿದ್ದು, ಯಾವುದು ಧರ್ಮ-ಯಾವುದು ಅಧರ್ಮ ಎನ್ನುವುದು ಪುರಾಣ-ಪ್ರವಚನಗಳು ದಾರಿದೀಪವಾಗುತ್ತವೆ. ಒಬ್ಬ ವ್ಯಕ್ತಿ ತನ್ನ ಜೀವನಕ್ಕೆ ಅವಶ್ಯವಿರುವ ಎಲ್ಲ ವಸ್ತುವನ್ನು ತನ್ನ ಪರಿಶ್ರಮದಿಂದ ಸಂಪಾದಿಸಬಹುದು. ಆದರೆ ಮಾನಸಿಕ ನೆಮ್ಮದಿ ಸಂಪಾದಿಸಲು ಸಾಧ್ಯವಾಗುವದಿಲ್ಲ. ನೆಮ್ಮದಿ ಸುಖ-ಶಾಂತಿಗೆ ದಾನ-ಧರ್ಮ, ಆಧ್ಯಾತ್ಮಿಕ ಚಿಂತನೆಗಳಿಂದ ಪ್ರತಿಯೊಬ್ಬ ಮನುಷ್ಯ ತನ್ನ ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳಬಹುದೆಂದರು.
ಮುಖ್ಯ ಅತಿಥಿಗಳಾಗಿ ಮೈಸೂರ ಪತ್ರಕರ್ತ ಗಣೇಶ ಅಮೀನಗಡ, ರಂಗಭೂಮಿ ಶಿವಾನುಭವ ಮಂಟಪ ಆಗಬೇಕು ಎಂಬ ಹಾನಗಲ್ ಕುಮಾರ ಸ್ವಾಮಿಗಳ ಆಶಯವನ್ನು ಪುಟ್ಟರಾಜ ಗವಾಯಿಗಳು ನೆರವೇರಿಸಿದರೆ ನಾಟಕ, ಪುರಾಣ ಪ್ರವಚನ ಆಯೋಜಿಸುವ ಮೂಲಕ ನಿಡಸೋಸಿ ಶ್ರೀಗಳು ನಿಜವಾದ ಶಿವಾನುಭವ ಮಂಟಪವನ್ನು ಕಟ್ಟಿಕೊಟ್ಟಿದ್ದಾರೆ. ಶ್ರೀಗಳು ಸ್ವಾಮೀಜಿಯಾಗದೇ ಸಮಾಜದ ಸ್ವಾಸ್ಥ್ಯ ಕಾಯುವ ವೈದ್ಯರಂತೆ ಗಡಿಭಾಗದಲ್ಲಿ ಧಾರ್ಮಿಕ ಕಾರ್ಯ ಮುಂದುವರೆಸಿದ್ದಾರೆ ಎಂದರು.
ಬೆಂಗಳೂರು ಆರ್ಕಿಟೆಕ್ಟ ಸವಿತಾ ಎನ್. ಮಾತನಾಡಿದರು.
ಸಂಪಾದನಾ ಸ್ವಾಮೀಜಿ ನೇತೃತ್ವವಹಿಸಿದ್ದರು.
ಹಿರೇಕೊಪ್ಪದ ಸಂಕಪ್ಪ ಮಾಸ್ತರ, ಸಂಗೀತ ಸೇವೆ, ಶಿರಗುಪ್ಪಿಯ ಅಪ್ಪು ಬಡಿಗೇರ ತಬಲಾ ಸೇವೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಡಾ. ಜಿ.ಕೆ. ಹಿರೇಮಠ ಸಂಯೋಜಿಸಿದರು. ಉಮಾ ಆಲೂರಿ ನಿರೂಪಿಸಿದರು. ಸಂತೋಷ ಪಾಟೀಲ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ