ರಾಜ್ಯಕ್ಕೂ ತಟ್ಟುತ್ತಾ ಭಾರತ್ ಬಂದ್ ಬಿಸಿ?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ 10ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ನಾಳೆ ಜ.8ರಂದು ಭಾರತ್ ಬಂದ್ ಗೆ ಕರೆ ನೀಡಿದ್ದು, ರಾಜ್ಯಕ್ಕೂ ಬಂದ್ ಬಿಸಿ ತಟ್ಟುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ಬಂದ್‌ ಇಲ್ಲ, ಮುಷ್ಕರ ಮಾತ್ರ ನಡೆಯಲಿದೆ ಎಂದು ಕೆಲ ಸಂಘಟನೆಗಳು ತಿಳಿಸಿವೆ.

ಬಸ್‌, ಆಟೊ, ಟ್ಯಾಕ್ಸಿ, ಸರಕು ಸಾಗಣೆ, ಬ್ಯಾಂಕಿಂಗ್‌ ಸೇವೆ, ಹೋಟೆಲ್, ದಿನಸಿ, ಔಷಧ ಅಂಗಡಿಯಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. ಶಾಲೆ, ಕಾಲೇಜು, ಸರಕಾರಿ ಕಚೇರಿಗಳು ಕೂಡಾ ಎಂದಿನಂತೆಯೇ ಕಾರ್ಯ ನಿರ್ವಹಿಸುವ ಸಾಧ್ಯತೆಯಿದೆ. ಆದರೆ ವಿದ್ಯಾರ್ಥಿಗಳ ಜವಾಬ್ದಾರಿ ಸರ್ಕಾರದ ಹೊಣೆಯಾಗಿದ್ದು, ನಾಳೆ ಶಾಲೆ ಕಾಲೇಜುಗಳಿಗೆ ರಜೆ ನೀಡಬೇಕೋ ಬೇಡವೋ ಎಂಬುದನ್ನು ಆಡಳಿತ ಮಂಡಳಿಗಳೇ ನಿರ್ಧರಿಸಬೇಕು ಎಂದಿವೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘಟನೆಗಳು, ಆಟೊ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ ಮತ್ತು ಸರಕು ಸಾಗಣೆ ಚಾಲಕರು ಮತ್ತು ಮಾಲೀಕರ ಸಂಘಗಳು ಮುಷ್ಕರಕ್ಕೆ ಬಾಹ್ಯ ಬೆಂಬಲ ನೀಡಿವೆ. ಆದರೆ, ಸೇವೆ ಸ್ಥಗಿತಗೊಳಿಸಿ, ಪ್ರತಿಭಟನೆಯಲ್ಲಿ ಭಾಗವಹಿಸುತ್ತಿಲ್ಲ. ಹಾಗಾಗಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳು, ಆಟೊ, ಟ್ಯಾಕ್ಸಿ, ಸರಕು ಸಾಗಣೆ ವಾಹನಗಳು ಎಂದಿನಂತೆ ಸೇವೆ ಒದಗಿಸಲಿವೆ ಎನ್ನಲಾಗಿದೆ.

ದುಡಿಯುವ ಜನರ ಹಕ್ಕುಗಳನ್ನು ಸಂರಕ್ಷಿಸಿ, ಪರ್ಯಾಯ ಆರ್ಥಿಕ ನೀತಿಗಳನ್ನು ಜಾರಿಗೆ ತರಬೇಕು. ಎಲ್ಲ ಕಾರ್ಮಿಕರಿಗೆ ಕನಿಷ್ಠ 21 ಸಾವಿರ ರೂ. ವೇತನ ನಿಗದಿ ಸೇರಿದಂತೆ ಒಟ್ಟು 13 ಬೇಡಿಕೆಗಳನ್ನು ಕಾರ್ಮಿಕ ಸಂಘಟನೆಗಳು ಮುಂದಿಟ್ಟಿವೆ. ಆದರೆ, ಬಂದ್‌ಗೆ ಕರೆ ಕೊಟ್ಟಿಲ್ಲ. ಎಲ್ಲೆಡೆ ಪ್ರತಿಭಟನೆಗಳನ್ನಷ್ಟೇ ಮಾಡಲಾಗುತ್ತಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button