ದುರ್ಬಲ ಸಮುದಾಯಗಳನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಂಡ ಕಾಂಗ್ರೆಸ್ ಪಕ್ಷ; ಸಿಎಂ ಬೊಮ್ಮಾಯಿ ವಾಗ್ದಾಳಿ

ಪ್ರಗತಿವಾಹಿನಿ ಸುದ್ದಿ; ಬೀದರ್: ಕಾಂಗ್ರೆಸ್ ನವರು ದೀನದಲಿತರು, ದುರ್ಬಲವರ್ಗದವರಿಗೆ ಸಾಮಾಜಿಕ ನ್ಯಾಯ ಎಂದು ಕೇವಲ ಭಾಷಣ ಮಾಡುತ್ತಾರೆ. ಆ ಪಕ್ಷ ದುರ್ಬಲ ಸಮುದಾಯಗಳನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಂಡಿತು. ನಮ್ಮ ಸರ್ಕಾರ ಎಸ್ ಸಿ ಎಸ್ ಟಿ ಸಮುದಾಯಗಳ ಮೀಸಲಾತಿಯನ್ನು ಹೆಚ್ಚಳ ಮಾಡುವ ದಿಟ್ಟ ನಿರ್ಧಾರ ಕೈಗೊಂಡಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿರು.

ಇಂದು ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ವಿಜಯ ಸಂಕಲ್ಪ ಯಾತ್ರೆಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಅವರೊಂದಿಗೆ ಪಾಲ್ಗೊಂಡು ಮಾತನಾಡಿದರು.

ಕಾಂಗ್ರೆಸ್ ನವರು ತಮ್ಮ ಐದು ವರ್ಷದ ಆಡಳಿತದಲ್ಲಿ ರಾಜ್ಯದ ಪ್ರತಿ ಜನರ ಮೇಲೆ ಸಾಲ ಹೊರೆಯನ್ನು ಹೊರಿಸಿದ್ದಾರೆ. ಕಾಂಗ್ರೆಸ್ ನವರು ರಾಜಕೀಯ, ಜಾತಿ, ಧರ್ಮದ ವಿಷಯದಲ್ಲಿ ದ್ವೇಷದ ಹಾಗೂ ತುಷ್ಟೀಕರಣ ರಾಜಕಾರಣ ಮಾಡುತ್ತಾರೆ. ವಿವಿಧ ಭಾಗ್ಯಗಳನ್ನು ನೀಡುತ್ತೇವೆ ಎಂದು ಜನರ ಪಾಲಿಗೆ ದೌರ್ಭಾಗ್ಯವನ್ನು ನೀಡಿ, ರಾಜ್ಯದ ಅಭಿವೃದ್ಧಿಯಲ್ಲಿ ಹಿನ್ನಡೆ ಮಾಡಿದ್ದಾರೆ. ಈ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9 ನೇ ಪರಿಚ್ಛೇದದಲ್ಲಿ ಸೇರಿಸಲು ಸಾಧ್ಯವಿಲ್ಲ ಎಂದು ದೂರುತ್ತಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ದುರ್ಬಲ ವರ್ಗದವರಿಗೆ ನ್ಯಾಯ ಒದಗಿಸುವಲ್ಲಿ ವಿಫಲರಾದರು. ಅವರ ಅನ್ನಭಾಗ್ಯ ಯೋಜನೆಯಡಿ ಪಡಿತರ ಅಕ್ಕಿವನ್ನು 5 ಕೆಜಿಗೆ ಇಳಿಸಿದರು. ಚುನಾವಣೆ ಬಂದ ಸಂದರ್ಭದಲ್ಲಿ 5 ಕೆಜಿಯನ್ನು 7 ಕೆಜಿಗೆ ಹೆಚ್ಚಿಸಿದರು. ಈಗ 10 ಕೆಜಿ ಅಕ್ಕಿ ನೀಡುತ್ತೇವೆಂದು ಭರವಸೆ ನೀಡುತ್ತಿದ್ದಾರೆ. ಈ ರೀತಿ ಜನರಿಗೆ ಸುಳ್ಳು ಹೇಳುವುದು ಕಾಂಗ್ರೆಸ್ ಪಕ್ಷದ ಜಾಯಮಾನವಾಗಿದೆ ಎಂದರು.

ಕೋವಿಡ್ ಸಂದರ್ಭದಲ್ಲಿ ಜೀವನೋಪಾಯ,ಆಹಾರ, ಔಷಧಿ, ಲಸಿಕೆಯನ್ನು ದೇಶಕ್ಕೆ ಕೊಟ್ಟ ಧೀಮಂತ ನಾಯಕ ಪ್ರಧಾನಿ ಮೋದಿ. ದೇಶದ ಆರ್ಥಿಕ ಸ್ಥಿಯಲ್ಲಿ ಸರಿದಾರಿಗೆ ತಂದು, ದೇಶದಲ್ಲಿ ಶೇ. 6.5 ರಷ್ಟು ಬೆಳವಣಿಗೆ ದಾಖಲಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದರೆ , ದೇಶದಲ್ಲಿ ಅಲ್ಲೋಲಕಲ್ಲೋಲ ಆಗುತ್ತಿತ್ತು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಸ್ವಾಭಿಮಾನಿ ದೇಶವನ್ನು ನಿರ್ಮಿಸಲಾಗಿದೆ. ಬಸವಣ್ಣನವರ ಆದರ್ಶಗಳ ಹಾದಿಯಲ್ಲಿ ನಡೆಯುತ್ತಿರುವ ಏಕೈಕ ಪಕ್ಷ-ಭಾರತೀಯ ಜನತಾ ಪಕ್ಷ. ಮುಂದಿನ 25 ವರ್ಷಗಳಲ್ಲಿ ಭಾರತದಲ್ಲಿ ಅಮೃತ ಕಾಲವನ್ನು ಸಾಧಿಸಲು ಕರ್ನಾಟಕದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಭಾಜಪ ಸ್ಪಷ್ಟ ಬಹುಮತವನ್ನು ಪಡೆಯಬೇಕಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಕೇಂದ್ರ ಸಚಿವ ಭಗವಂತ ಖೂಬಾ, ಸಚಿವರಾದ ಬಿ. ಶ್ರೀರಾಮುಲು, ಪ್ರಭು ಚೌಹ್ವಾಣ್ ಹಾಗೂ ಮತ್ತಿತರರು ಹಾಜರಿದ್ದರು.

ಬೀದರ್ ನ ಪ್ರತಿ ಕ್ಷೇತ್ರದ ಅಭಿವೃದ್ಧಿಗೆ 100 ಕೋಟಿ ರೂ:

ಬೀದರ್ ಜಿಲ್ಲೆಯ ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಗೆ ಕನಿಷ್ಠ100 ಕೋಟಿ ರೂ.ಗಳನ್ನು ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೀದರ್ ಜಿಲ್ಲೆಯಲ್ಲಿ ಅನುಭವ ಮಂಟಪದ ನಿರ್ಮಾಣಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನವರು 500 ಕೋಟಿ ರೂ.ಗಳನ್ನು ಮಂಜೂರು ಮಾಡಿದರು. ಕೆಕೆಆರ್ ಡಿ ಬಿ ಅನುದಾನವನ್ನು 3000 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಈ ವರ್ಷ 5000 ಕೋಟಿ. ರೂ.ಗಳನ್ನು ಮೀಸಲಿಡಲಾಗಿದೆ.. ಔರಾದ್ ಕೆರೆ ತುಂಬಿಸುವ ಯೋಜನೆಗೆ 650 ಕೋಟಿ ರೂ., ಮೆಹಕರ್ ಏತ ನೀರಾವರಿ ಯೋಜನೆಗೆ 750 ಕೋಟಿ ರೂ.ಗಳಿಗೆ ಅನುಮೋದನೆ , ಬೀದರ್ ಸೀಮೆಂಟ್ ಸಂಸ್ಥೆ ಸ್ಥಾಪಿಸಲಾಗುತ್ತಿದೆ. ಬೀದರ್ ಜಿಲ್ಲೆಗೆ ವಿಶ್ವವಿದ್ಯಾಲಯ ಸ್ಥಾಪಿಸಲಾಗುತ್ತಿದೆ ಎಂದರು.

ತೊಗರಿ ಬೆಳೆದ ರೈತರಿಗೆ 250 ಕೋಟಿ ರೂ. ಪರಿಹಾರ :

ಬೀದರ್ ಜಿಲ್ಲೆಯಲ್ಲಿ ತೊಗರಿ ಬೆಳೆ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ತೊಗರಿ ಬೆಳೆ ರೋಗದ ಹಾನಿಗೆ ಹೆಕ್ಟೇರ್ ಗೆ 10 ಸಾವಿರ ರಂತೆ 250 ಕೋಟಿ ರೂ.ಗಳನ್ನು ತೊಗರಿ ಬೆಳೆಯುವ ರೈತರಿಗೆ ವಿತರಣೆ ಮಾಡಲು ಕ್ರಮ ವಹಿಸಲಾಗುತ್ತಿದೆ. ನಮ್ಮದು ಸ್ಪಂದನಾಶೀಲ ಸರ್ಕಾರ. ಅಭಿವೃದ್ಧಿಯ ಆಧಾರದ ಮೇಲೆ ಮತ ಕೇಳುವ ನೈತಿಕತೆ ಇರುವುದು ಭಾಜಪ ಸರ್ಕಾರಕ್ಕೆ ಮಾತ್ರ ಎಂದರು. ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವಂತಹ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ದುಡಿಯುವ ಮಹಿಳೆಯರಿಗೆ ಪ್ರತಿ ತಿಂಗಳು 1000 ರೂ. ನೀಡುವ ಗೃಹಿಣಿ ಶಕ್ತಿ ಯೋಜನೆ ಈ ಆಯವ್ಯಯದಲ್ಲಿದೆ. ನವ ಕರ್ನಾಟಕವನ್ನು ನವಭಾರತದ ನಿರ್ಮಾಣಕ್ಕಾಗಿ ಮಾಡಬೇಕಿದೆ. ನವ ಕರ್ನಾಟಕ ನಿರ್ಮಾಣಕ್ಕಾಗಿ ಭಾಜಪದ ಕಮಲ ರಾಜ್ಯದೆಲ್ಲೆಡೆ ಅರಳಿಸುವುದು ನಮ್ಮ ಸಂಕಲ್ಪ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಕೇಂದ್ರ ಸಚಿವ ಭಗವಂತ ಖೂಬಾ, ಸಚಿವರಾದ ಬಿ. ಶ್ರೀರಾಮುಲು, ಪ್ರಭು ಚೌಹ್ವಾಣ್ ಹಾಗೂ ಮತ್ತಿತರರು ಹಾಜರಿದ್ದರು.
Bidar,Basavakalyana,BJP Vijaya sankalpa samavesh

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button