Kannada NewsKarnataka NewsLatestPoliticsPragativahini Special

*Big News* *ನವೆಂಬರ್ 20ಕ್ಕೆ ರಾಜ್ಯದಲ್ಲಿ ಮಹಾಕ್ರಾಂತಿ?* *ಕಾಂಗ್ರೆಸ್ ಸರಕಾರದಲ್ಲಿ ದೊಡ್ಡ ಬದಲಾವಣೆಗೆ ಮುಹೂರ್ತ ಫಿಕ್ಸ್*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಕಳೆದ ಹಲವು ತಿಂಗಳುಗಳಿಂದ ತೀವ್ರ ಚರ್ಚೆಯಲ್ಲಿರುವ ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆ ಮತ್ತು ನಾಯಕತ್ವ ಬದಲಾವಣೆಗಳಿಗೆ ಇನ್ನು 25 ದಿನದಲ್ಲಿ ಉತ್ತರ ಸಿಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇದಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದು, ನವೆಂಬರ್ 20ಕ್ಕೆ ದೊಡ್ಡ ಮಟ್ಟದ ಬದಲಾವಣೆ ಬಹುತೇಕ ನಿಶ್ಚಿತವಾಗಿದೆ.

ಸಚಿವಸಂಪುಟ ಬದಲಾವಣೆ ಕುರಿತು ಹೈಕಮಾಂಡ್ ಈಗಾಗಲೆ ಸೂಚನೆ ನೀಡಿದೆ. ಎರಡೂವರೆ ವರ್ಷ ಪೂರ್ಣವಾಗಲಿ ಎಂದು ನಾನೇ ಹೇಳಿದ್ದೆ ಎಂದು ಹೇಳುವ ಮೂಲಕ ನವೆಂಬರ್ 20ರ ಮುಹೂರ್ತವನ್ನು ಅವರು ಬಹಿರಂಗಪಡಿಸಿದ್ದಾರೆ. 2023ರ ಮೇ 20ರಂದು ಅಧಿಕಾರ ಸ್ವೀಕರಿಸಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ನವೆಂಬರ್ 20ಕ್ಕೆ ಎರಡೂವರೆ ವರ್ಷ ಪೂರ್ಣವಾಗಲಿದೆ. ಹಾಗಾಗಿ ನಾಯಕತ್ವ ಬದಲಾವಣೆ ಚರ್ಚೆಗೆ ಮತ್ತು ಸಚಿವಸಂಪುಟ ಬದಲಾವಣೆಗೆ ಅಂದೇ ಸ್ಪಷ್ಟ ಉತ್ತರ ಸಿಗಲಿದೆ. ಇದೀಗ ಮುಖ್ಯಮಂತ್ರಿಗಳೇ ಈ ವಿಷಯವನ್ನು ಬಹಿರಂಗಪಡಿಸಿರುವುದರಿಂದ ಎಲ್ಲರ ಚಿತ್ತ ನವೆಂಬರ್ 20ರ ಮೇಲೆ ನೆಟ್ಟಿದೆ.

ನಾಯಕತ್ವ ಬದಲಾವಣೆಯೋ? ಸಂಪುಟ ಬದಲಾವಣೆಯೋ?

ರಾಜ್ಯದಲ್ಲಿ ಸಧ್ಯ ಎರಡು ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿ ಸ್ಥಾನ ಬದಲಾಗಲಿದೆ ಎನ್ನುವುದು ಒಂದು ಚರ್ಚೆಯಾದರೆ, ಸಚಿವಸಂಪುಟದಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಲಿದೆ ಎನ್ನುವುದು ಎರಡನೇ ಚರ್ಚೆ. ಸಚಿವಸಂಪುಟ ಬದಲಾವಣೆ ಕುರಿತು ಮುಖ್ಯಮಂತ್ರಿಗಳೇ ನಿನ್ನೆ ಕಿತ್ತೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಸಚಿವ ಕೃಷ್ಣ ಭೈರೇಗೌಡ ಕೂಡ ಈ ಕುರಿತು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಹಾಗಾಗಿ ಸಚಿವಸಂಪುಟ ಬದಲಾವಣೆ ಈಗ ಗೌಪ್ಯತೆಯ ವಿಷಯವಾಗಿ ಉಳಿದಿಲ್ಲ.

Home add -Advt

ಸಧ್ಯದಲ್ಲೇ ಕಾರ್ಯಕ್ರಮವೊಂದರ ನೆಪದಲ್ಲಿ ದೆಹಲಿಗೆ ತೆರಳಲಿರುವ ಸಿದ್ದರಾಮಯ್ಯ 3 ದಿನಗಳ ಕಾಲ ಅಲ್ಲಿದ್ದು ಸಂಪುಟ ಬದಲಾವಣೆ ಕುರಿತು ಹೈಕಮಾಂಡ್ ಜೊತೆಗೆ ಚರ್ಚಿಸಲಿದ್ದಾರೆ. ಆದರೆ ನಾಯಕತ್ವ ಬದಲಾವಣೆ ಕುರಿತು ಇನ್ನಷ್ಟೇ ಸ್ಪಷ್ಟತೆ ಸಿಗಬೇಕಿದೆ.

ಸಚಿವಸಂಪುಟ ಮಾರ್ಪಾಡಿಗೆ ಬಹಳಷ್ಟು ಸಚಿವರು ಒಲವು ತೋರಿದ್ದಾರೆ. ಕೆಲವರು ಖಾತೆ ಬದಲಾವಣೆ ಕೋರಿದ್ದರೆ ಹಲವು ಬಾರಿ ಅಧಿಕಾರ ಅನುಭವಿಸಿರುವ ಕೆಲವು ಹಿರಿಯ ಸಚಿವರು ಸ್ಥಾನ ಬಿಟ್ಟುಕೊಡಬೇಕಾಗಬಹುದು ಎನ್ನುವ ಸೂಚನೆ ಸಿಕ್ಕಿದೆ. ಅನೇಕ ಹಿರಿಯ ಶಾಸಕರು ಸಂಪುಟ ಸೇರಲು ಪ್ರಯತ್ನಿಸುತ್ತಿದ್ದು, ಆರಂಭದಲ್ಲೇ ಅವರಿಗೆಲ್ಲ ಎರಡೂವರೆ ವರ್ಷ ಪೂರ್ಣಗೊಳ್ಳುವವರೆಗೆ ತಾಳ್ಮೆಯಿಂದ ಕಾಯುವಂತೆ ಸೂಚನೆ ನೀಡಲಾಗಿತ್ತು. ಹಾಗಾಗಿ ಈಗ ಅಂತವರಿಗೆ ಸ್ಥಾನ ಕಲ್ಪಿಸುವ ಅನಿವಾರ್ಯತೆ ಇದೆ.

ನಾಯಕತ್ವ ಬದಲಾವಣೆ ವಿಷಯ ಸ್ಥಳೀಯ ಮಟ್ಟದಲ್ಲಿ ಹಲವು ಗೊಂದಲಗಳಿಂದ ಕೂಡಿದ್ದು, ಈ ವಿಷಯದಲ್ಲಿ ಹೈಕಮಾಂಡ್ ಈಗಾಗಲೆ ಸ್ಪಷ್ಟ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ. ಹಾಗಾಗಿ ನಾಯಕತ್ವ ಬದಲಾವಣೆ ಮತ್ತು ಸಚಿವಸಂಪುಟ ಬದಲಾವಣೆ ಎರಡರ ಕುತೂಹಲಕ್ಕೂ ನವೆಂಬರ್ 20ರ ವರೆಗೆ ಕಾಯಲೇಬೇಕಾಗಿದೆ.

136 ಸ್ಥಾನಗಳೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಕಳೆದ ಎರಡೂವರೆ ವರ್ಷ ಪಂಚ ಗ್ಯಾರಂಟಿ ಯೋಜನೆ ಸೇರಿದಂತೆ ಅನೇಕ ಹೊಸ ಕ್ರಾಂತಿಗಳನ್ನು ಮಾಡಿದೆ. ಗ್ರೇಟರ್ ಬೆಂಗಳೂರು ನಿರ್ಮಾಣ, ಇ ಆಸ್ತಿ, ಗವರ್ಮೆಂಟ್ ಮಾಂಟೆಸ್ಸರಿ, ಮಾಹಿತಿ ತಂತ್ರಜ್ಞಾನ, ಬಂಡವಾಳ ಹೂಡಿಕೆ ಸೇರಿದಂತೆ ಹಲವಾರು ವಿಷಯಗಳಲ್ಲಿ ಸಾಧನೆಯಾಗಿದೆ. ಗ್ಯಾರಂಟಿ ಯೋಜನೆಯ ದೊಡ್ಡ ಹೊರೆಯಿಂದಾಗಿ ಅನೇಕ ವಿಷಯಗಳಲ್ಲಿ ಎಡವುತ್ತಿದ್ದರೂ, ಕೆಲವು ಹಗರಣಗಳಿಂದಾಗಿ ಮುಜುಗರ ಅನುಭವಿಸಿದರೂ ಅನೇಕ ಜನಪರ ಯೋಜನೆಗಳನ್ನೂ ಜಾರಿಗೊಳಿಸಿದೆ.

ಇದೀಗ ಮತ್ತೊಂದು ಹಂತಕ್ಕೆ ಸರಕಾರ ಪದಾರ್ಪಣೆ ಮಾಡುತ್ತಿದ್ದು, ಮುಂದಿನ ಎರಡೂವರೆ ವರ್ಷ 2028ರ ಚುನಾವಣೆಯ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವದ ಕಾಲವಾಗಿದೆ.

Related Articles

Back to top button